ಸರ್ಕಾರಿ, ಆನ್‌ಲೈನ್‌ ಗೇಮ್ಸ್‌ನ 30 ವೆಬ್ಸೈಟ್‌ ಹ್ಯಾಕ್‌ ಮಾಡಿದ್ದ ಶ್ರೀಕಿ

By Kannadaprabha NewsFirst Published Nov 27, 2020, 7:44 AM IST
Highlights

ಹ್ಯಾಕ್‌ ಶ್ರೀಕೃಷ್ಣ ಮತ್ತಷ್ಟು ಅವ್ಯವಹಾರ ಬಹಿರಂಗ| ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಪೊಲೀಸ್‌ ಕಸ್ಟಡಿ ಡಿ.1ಕ್ಕೆ ಮುಕ್ತಾಯ| ಕೆಲ ಕಂಪನಿಗಳ ವೆಬ್‌ಸೈಟ್‌ ಹ್ಯಾಕ್‌ ಮಾಡಿದ ದತ್ತಾಂಶ ಕದ್ದು ಬೆದರಿಸಿ ಆರೋಪಿಗಳಿಂದ ಹಣ ಸುಲಿಗೆ| 

ಬೆಂಗಳೂರು(ನ.27): ಬಿಟ್‌ ಕಾಯಿನ್‌, ಪೋಕರ್‌ ಹಾಗೂ ಆನ್‌ಲೈನ್‌ ಗೇಮ್ಸ್‌ಗಳಿಗೆ ಸಂಬಂಧಿಸಿದ ದೇಶ-ವಿದೇಶದ ಸುಮಾರು 30ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿರುವುದಾಗಿ ಸಿಸಿಬಿ ವಿಚಾರಣೆ ವೇಳೆ ಕುಖ್ಯಾತ ಹ್ಯಾಕ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಬಾಯ್ಬಿಟ್ಟಿದ್ದಾನೆ.

"

ಈ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದು, ಹ್ಯಾಕಿಂಗ್‌ಗೊಳಗಾಗಿದ್ದ ವೆಬ್‌ಸೈಟ್‌ಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇವುಗಳ ಪೈಕಿ ಕೆಲವು ಸರ್ಕಾರಿ ವೆಬ್‌ಸೈಟ್‌ಗಳು ಸಹ ಸೇರಿವೆ ಎಂದು ತಿಳಿದು ಬಂದಿದೆ.

ಕೂತಲ್ಲೇ ಕೋಟಿ ಕೋಟಿ ಬಾಚಿ, ಜಗತ್ತಿಗೆ ಮಂಕು ಬೂದಿ ಎರಚುತ್ತಿದ್ದ ಹ್ಯಾಕರ್ ಶ್ರೀಕಿ ಅಂದರ್ ಆಗಿದ್ಹೇಗೆ?

ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಪೊಲೀಸ್‌ ಕಸ್ಟಡಿ ಡಿ.1ಕ್ಕೆ ಮುಕ್ತಾಯವಾಗಲಿದೆ. ಇದುವರೆಗಿನ ವಿಚಾರಣೆಯಲ್ಲಿ 30ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ಹ್ಯಾಕ್‌ ಮಾಡಿರುವುದಾಗಿ ಆತ ಬಹಿರಂಗಪಡಿಸಿದ್ದಾನೆ. ಈ ವೆಬ್‌ಸೈಟ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಹಾಗೆಯೇ ತನಿಖೆಯಲ್ಲಿ ತಾಂತ್ರಿಕ ಸಾಕ್ಷ್ಯಗಳನ್ನು ಕ್ರೋಢೀಕರಣ ಹಾಗೂ ವಿಶ್ಲೇಷಣೆ ಸಹ ಪ್ರಗತಿಯಲ್ಲಿದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಶ್ರೀಕೃಷ್ಣನಿಂದ ಹ್ಯಾಕ್‌ ಮಾಡಿರುವ ವೆಬ್‌ಸೈಟ್‌ಗಳಲ್ಲಿ ಬಿಟ್‌ ಕಾಯಿನ್‌, ಪೋಕರ್‌ ಹಾಗೂ ಆನ್‌ಲೈನ್‌ ಗೇಮ್ಸ್‌ಗಳೇ ಹೆಚ್ಚು ಗುರಿಯಾಗಿದೆ. ಈ ಕೃತ್ಯದಲ್ಲಿ ಆತನಿಗೆ ಸುನೀಷ್‌ ಹೆಗ್ಡೆ ಹಾಗೂ ಪ್ರಸಿದ್‌ ಶೆಟ್ಟಿ ಬಹುಮುಖ್ಯ ಪಾತ್ರವಹಿಸಿರುವುದು ಪತ್ತೆಯಾಗಿದೆ. ವಿಚಾರಣೆ ಮುಂದುವರೆದಿದ್ದು, ಮತ್ತಷ್ಟುಮಾಹಿತಿ ಹೊರ ಬರುವ ನಿರೀಕ್ಷೆ ಇದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

ಕೆಲ ಕಂಪನಿಗಳ ವೆಬ್‌ಸೈಟ್‌ ಹ್ಯಾಕ್‌ ಮಾಡಿದ ದತ್ತಾಂಶ ಕದ್ದು ಬೆದರಿಸಿ ಆರೋಪಿಗಳಿಂದ ಹಣ ಸುಲಿಗೆ ಮಾಡಿರುವ ಬಗ್ಗೆ ಸಹ ತನಿಖೆ ನಡೆದಿದೆ. ಆದರೆ ಎಷ್ಟುಹಣಕಾಸು ವ್ಯವಹಾರ ನಡೆದಿದೆ ಎಂಬುದು ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ಶ್ರೀಕೃಷ್ಣನನ್ನು ಪ್ರಶ್ನಿಸಲಾಗುತ್ತಿದೆ ಎಂದು ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.
 

click me!