Fraud Case; ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕ್ಷ ರಾಮಕೃಷ್ಣ ಬಂಧನ

By Kannadaprabha News  |  First Published Feb 16, 2022, 6:33 AM IST

* 3 ದಿನ ಇ.ಡಿ. ವಶಕ್ಕೊಪ್ಪಿಸಿದ ವಿಶೇಷ ನ್ಯಾಯಾಲಯ
*  ನಕಲಿ ದಾಖಲೆ ಆಧರಿಸಿ .892 ಕೋಟಿ ಸಾಲ ಹಂಚಿಕೆ
*  ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರ ಹಿತ ರಕ್ಷಣೆಗೆ ಸರ್ಕಾರ ಬದ್ಧ: ಎಸ್‌ಟಿಎಸ್‌
 


ಬೆಂಗಳೂರು(ಫೆ.16):  ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ(Shri Guru Raghavendra Bank) ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣ(K Ramakrishna) ಅವರನ್ನು ಜಾರಿ ನಿರ್ದೇಶನಾಲಯ(ED) ಮಂಗಳವಾರ ಬಂಧಿಸಿದೆ. ಬೆನ್ನಲ್ಲೇ ವಿಶೇಷ ನ್ಯಾಯಾಲಯವು ಮೂರು ದಿನಗಳ ಕಾಲ ಅವರನ್ನು ಇ.ಡಿ. ವಶಕ್ಕೆ ನೀಡಿದೆ.

ಪ್ರಕರಣ ಸಂಬಂಧ ಮಂಗಳವಾರ ಇ.ಡಿ. ಅಧಿಕಾರಿಗಳು ರಾಮಕೃಷ್ಣ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ(Court) ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮಾಡಿದ ಮನವಿ ಮೇರೆಗೆ ನ್ಯಾಯಾಲಯವು ಶುಕ್ರವಾರದವರೆಗೆ ಇ.ಡಿ. ವಶಕ್ಕೆ ನೀಡಿದೆ. ನ್ಯಾಯಾಲಯದಲ್ಲಿ ಇ.ಡಿ. ಪರವಾಗಿ ವಕೀಲ ಪಿ.ಪ್ರಸನ್ನಕುಮಾರ್‌ ವಾದ ಮಂಡಿಸಿದರು.

Tap to resize

Latest Videos

Depositors First: ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ ಹಣ

ನಕಲಿ ದಾಖಲೆಗಳ ಅಧಾರದ ಮೇಲೆ 892.85 ಕೋಟಿ ರು. ಸಾಲ(Loan) ನೀಡಿರುವುದು ತನಿಖೆ(Investigation) ವೇಳೆ ಗೊತ್ತಾಗಿದೆ. ಪ್ರಸ್ತುತ ಹಣ ಎಲ್ಲಿದೆ? ಯಾರೆಲ್ಲಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಇತ್ಯಾದಿ ವಿಚಾರಗಳ ಕುರಿತು ಇ.ಡಿ. ಮಾಹಿತಿ ಕಲೆ ಹಾಕಲಿದೆ. ವಿಚಾರಣೆ ಬಳಿಕ ಈ ಕುರಿತು ಮಾಹಿತಿ ಕಲೆ ಹಾಕಿ ಹೆಚ್ಚಿನ ತನಿಖೆ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ನಗರದ ಬಸವನಗುಡಿಯಲ್ಲಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಗ್ರಾಹಕರಿಗೆ ನೀಡಿರುವ ಸಾಲದ ಪ್ರಮಾಣವು ಆರ್‌ಬಿಐ ಮಿತಿಗಿಂತ ಹೆಚ್ಚಾಗಿದ್ದು, ವಸೂಲಾಗದ ಸಾಲದ (ಎನ್‌ಪಿಎ) ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿರುವುದು ಸಮಸ್ಯೆಯಾಗಿದೆ. ಅವ್ಯವಹಾರದಿಂದಾಗಿ ಸಾವಿರಾರು ಠೇವಣಿದಾರರು ಆತಂಕಕ್ಕೊಳಗಾಗಿದ್ದರು. ಅಲ್ಲದೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಬಳಿ ಠೇವಣಿದಾರರು ಹಣ ವಾಪಸ್‌ ನೀಡುವಂತೆ ಮನವಿ ಮಾಡಿದ್ದರು.

ಈ ವೇಳೆ ಕೇಂದ್ರ ಸರ್ಕಾರವು(Central Government) ತನ್ನ ಕೆಲಸ ಮಾಡುತ್ತಿದ್ದು, ತಾಳ್ಮೆಯಿಂದ ಇರುವಂತೆ ಹೇಳಿದ್ದರು. ಕೇಂದ್ರ ಮಧ್ಯಪ್ರವೇಶಿಸಿ ಠೇವಣಿದಾರರಿಗೆ(Depositors) 5 ಲಕ್ಷ ರು.ವರೆಗಿನ ಠೇವಣಿ ವಿಮೆ ಮೊತ್ತವನ್ನು ಮರುಪಾವತಿ ಮಾಡುವುದಾಗಿ ತಿಳಿಸಿದೆ. ಬ್ಯಾಂಕ್‌ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390ರಷ್ಟು ಮಂದಿ ಐದು ಲಕ್ಷ ರು.ವರೆಗೆ ಠೇವಣಿ ಮಾಡಿದ್ದಾರೆ. ಬ್ಯಾಂಕ್‌ನ ಒಟ್ಟು ಠೇವಣಿ 2403.21 ಕೋಟಿ ರು.ನಷ್ಟಿದ್ದರೆ, ನೀಡಿರುವ ಸಾಲದ ಮೊತ್ತವು 1438 ಕೋಟಿ ರುಪಾಯಿ. 25ಕ್ಕೂ ಹೆಚ್ಚು ಸಾಲಗಾರರಿಂದ ಬ್ಯಾಂಕ್‌ಗೆ ನಷ್ಟವಾಯಿತು ಎಂದು ಹೇಳಲಾಗಿದೆ.

Guru Raghavendra Bank: ಒಂದೇ ದಿನ ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ 400 ಕೋಟಿ ಸಂದಾಯ

ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರ ಹಿತ ರಕ್ಷಣೆಗೆ ಸರ್ಕಾರ ಬದ್ಧ: ಎಸ್‌ಟಿಎಸ್‌

ನಗರದ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಶ್ರೀ ವಸಿಷ್ಟ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವಿವಿಧ ರೀತಿಯ ತನಿಖೆ ನಡೆಯುತ್ತಿದ್ದು, ಠೇವಣಿದಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌(ST Somashekhar) ಭರವಸೆ ನೀಡಿದ್ದಾರೆ.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರ(Scam) ಪ್ರಕರಣವನ್ನು ಸಿಐಡಿ(CID) ತನಿಖೆ ಮಾಡುತ್ತಿದೆ. ಭಾರತೀಯ ರಿಸವ್‌ರ್‍ ಬ್ಯಾಂಕ್‌ ಸಲಹೆ ಮೇರೆಗೆ, ಹೈಕೋರ್ಟ್‌ ನಿರ್ದೇಶನ ಪ್ರಕಾರ ಅಶೋಕ್‌ ಎಂಬುವರನ್ನು ಬ್ಯಾಂಕಿನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕರ ಆಸ್ತಿ ಜಪ್ತಿ ಮಾಡಲಾಗಿದೆ. ಇ.ಡಿ. ಸಹ ತನಿಖೆ ಮಾಡುತ್ತಿದೆ. 2014-16ರಿಂದ ಆಡಿಟ್‌ ವರದಿ ತಪಾಸಣೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ 807 ಕೋಟಿ ರು. ಅವ್ಯವಹಾರವಾಗಿದೆ. ಅದೇ ರೀತಿ ನಂತರದ ವರ್ಷಗಳಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಇನ್ನೂ 2019-20 ಮತ್ತು 2020-21ನೇ ಸಾಲಿನ ಆಡಿಟ್‌ ವರದಿ ತಪಾಸಣೆ ಆಗಬೇಕಾಗಿದೆ ಎಂದು ವಿವರಿಸಿದರು.
 

click me!