* ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಎಳನೀರು ವ್ಯಾಪಾರಿ
* ಚಿನ್ನ ಮಾರಾಟ ಮಾಡುವ ನೆಪದಲ್ಲಿ ಚಿನ್ನದಂಗಡಿ ಮಾಲಿಕನಿಗೆ ಕರೆ
* ಹಣದೊಂದಿಗೆ ಬಂದ ಚಿನ್ನದ ವ್ಯಾಪಾರಿಯನ್ನು ಮನೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ
ಬೆಂಗಳೂರು(ಜ.27): ಚಿನ್ನ(Gold) ಮಾರುವ ನೆಪದಲ್ಲಿ ತಮ್ಮ ಮನೆಗೆ ಚಿನ್ನದ ವ್ಯಾಪಾರಿಯನ್ನು ಕರೆಸಿಕೊಂಡು ಬಳಿಕ ಆತನನ್ನು ಕೊಂದು(Murder) 5 ಲಕ್ಷ ನಗದು ದೋಚಿದ್ದ ಎಳನೀರು ವ್ಯಾಪಾರಿ ಹಾಗೂ ಆತನ ಸ್ನೇಹಿತನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ. ತುಮಕೂರು(Tumakuru) ಜಿಲ್ಲೆ ಕುಣಿಗಲ್ ತಾಲೂಕಿನ ಅರಕೆರೆ ಹೋಬಳಿ ಮೆಸನಹಳ್ಳಿ ಗ್ರಾಮದ ಮಂಜುನಾಥ್ (28) ಹಾಗೂ ಉತ್ತರಿ ಗ್ರಾಮದ ಮುನಿರಾಜು (24) ಬಂಧಿತರು(Arrest).
7 ತಿಂಗಳ ಹಿಂದೆ ಚಿನ್ನ ಮಾರಿದ್ದ:
ಕುಣಿಗಲ್(Kunigal) ತಾಲೂಕಿನ ಮಂಜುನಾಥ್, ಹಲವು ವರ್ಷಗಳಿಂದ ಮಾಗಡಿ ರಸ್ತೆಯ ಸುಂಕದಕಟ್ಟೆ ಸಮೀಪ ಎಳನೀರು ವ್ಯಾಪಾರ ಮಾಡುತ್ತಿದ್ದ. ಅಲ್ಲೇ ಸಮೀಪದ ದ್ವಾರಕ ನಗರದಲ್ಲಿ ತನ್ನ ಪತ್ನಿ ಜತೆ ಆತ ನೆಲೆಸಿದ್ದ. ಮತ್ತೊಬ್ಬ ಆರೋಪಿ ಮುನಿರಾಜು ಬಾರ್‌ನಲ್ಲಿ ಸಪ್ಲೈಯರ್ ಆಗಿದ್ದ. ಇತ್ತೀಚೆಗೆ ವ್ಯಾಪಾರದಲ್ಲಿ ನಷ್ಟವಾಗಿ ಮಂಜುನಾಥ್‌ಗೆ ಆರ್ಥಿಕ ಸಂಕಷ್ಟಎದುರಾಗಿತ್ತು. ಅಲ್ಲದೆ ಆತನ ಬಳಿಯಿದ್ದ ಸರಕು ಸಾಗಣೆ ಆಟೋವನ್ನು ಬ್ಯಾಂಕ್‌ನವರು ಜಪ್ತಿ ಮಾಡಿದ್ದರು.
Bagalkot: ತೋಟದ ಮನೆಯಲ್ಲಿ 500 ಕೆಜಿ ಸ್ಫೋಟಕ ವಸ್ತುಗಳು ಪತ್ತೆ..!
ಈ ಸಾಲದ(Loan) ಹಿನ್ನೆಲೆಯಲ್ಲಿ ಮಂಜುನಾಥ್, ಏಳು ತಿಂಗಳ ಹಿಂದೆ ತಮ್ಮ ಬಳಿ ಇದ್ದ 22 ಗ್ರಾಂ ಚಿನ್ನವನ್ನು ಮಾರಲು ಮುಂದಾದ. ಆಗ ಆನ್‌ಲೈನ್‌ನಲ್ಲಿ ಚಿನ್ನ ಖರೀದಿದಾರರನ್ನು ಹುಡುಕಿದಾಗ ದಿವಾಕರ್ ಅವರ ಎಸ್‌ಎಸ್‌ಆರ್ ಗೋಲ್ಡ್ ಕಂಪನಿಯ ನಂಬರ್ ಸಿಕ್ಕಿದೆ. ಆ ನಂಬರ್ ಕರೆ ಮಾಡಿದಾಗ ಕಚೇರಿಯ ಸಿಬ್ಬಂದಿ ಆರೋಪಿಗೆ ದಿವಾಕರ್ ಮೊಬೈಲ್ ಸಂಖ್ಯೆ ನೀಡಿದ್ದರು. ಕೊನೆಗೆ ಮಾತುಕತೆ ನಡೆದು ಏಳು ತಿಂಗಳ ಹಿಂದೆ ಆರೋಪಿ ಬಳಿ ಚಿನ್ನ ಸರವನ್ನು ದಿವಾಕರ್ ಖರೀದಿಸಿದ್ದರು. ಇತ್ತ ಮಂಜುನಾಥ್ ಹಣಕಾಸು ಸಮಸ್ಯೆ ಬಗೆಹರಿಯಲಿಲ್ಲ. ಇದರಿಂದ ಆತ, ದಿವಾಕರ್ ಅವರಿಂದ ಹಣ ದೋಚಲು ಸಂಚು ರೂಪಿಸಿದ. ಈ ಕೃತ್ಯಕ್ಕೆ ಆತನಿಗೆ ಸ್ನೇಹಿತ ಮುನಿರಾಜು ಸಾಥ್ ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಂತೆಯೇ ಜ.20ರಂದು ದಿವಾಕರ್ ಅವರಿಗೆ ಕರೆ ಮಾಡಿದ ಮಂಜುನಾಥ್, ‘ತಮ್ಮ ಬಳಿ 65 ಗ್ರಾಂ ಚಿನ್ನವಿದೆ. ತುರ್ತಾಗಿ ಹಣದ ಅವಶ್ಯಕತೆ ಇರುವ ಕಾರಣ ಮಾರಾಟ ಮಾಡುತ್ತಿದ್ದೇವೆ. ನೀವು ಕೊಳ್ಳುವುದಾದರೆ ನಾನು ಕೊಡುತ್ತೇವೆ’ ಎಂದಿದ್ದ. ಈಗಾಗಲೇ ಒಂದು ಬಾರಿ ಆರೋಪಿಯಿಂದ(Accused) ಚಿನ್ನ ಖರೀದಿಸಿದ್ದರಿಂದ ವಿಶ್ವಾಸಗೊಂಡ ದಿವಾಕರ್, ಮಂಜುನಾಥ್ ಮಾತಿಗೆ ಒಪ್ಪಿ ಚಿನ್ನ ಖರೀದಿ ಸಲುವಾಗಿ ಸುಂಕದಕಟ್ಟೆಗೆ .5 ಲಕ್ಷ ಸಮೇತ ಬೈಕ್‌ನಲ್ಲಿ ಹೋಗಿದ್ದಾರೆ. ಸುಂಕದಕಟ್ಟೆಯಲ್ಲಿ ಭೇಟಿಯಾದ ಬಳಿಕ ದಿವಾಕರ್ ಅವರಿಗೆ ಚಿನ್ನ ಹೆಚ್ಚಿದ್ದರಿಂದ ನಾನು ತರಲಿಲ್ಲ. ನೀವು ಹಣ ತಂದಿದ್ದರೆ ನಮ್ಮ ಮನೆ ಹತ್ತಿರದಲ್ಲೇ ಇದೆ. ಅಲ್ಲಿಗೆ ಬನ್ನಿ ಚಿನ್ನ ಕೊಡುತ್ತೇನೆ ಎಂದಿದ್ದಾನೆ. ಅದರಂತೆ ಆರೋಪಿ ಮನೆಗೆ ವ್ಯಾಪಾರಿಗೆ ಹೋಗಿದ್ದಾರೆ. ಆಗ ದಿವಾಕರ್ ಅವರನ್ನು ಕತ್ತು ಹಿಸುಕಿ ಕೊಂದ ಆರೋಪಿಗಳು, ಬಳಿಕ ಮೃತದೇಹವನ್ನು(Deadbody) ಮಾಗಡಿ ಸಮೀಪ ಹೊನ್ನಾಪುರ ಕೆರೆಯಲ್ಲಿ(Lake) ಬಿಸಾಡಿದ್ದರು.
ಕೊನೆ ಕರೆಯಲ್ಲಿ ಸಿಕ್ಕಿಬಿದ್ದ ಹಂತಕರು
ಇತ್ತ ಜ.20ರ ಬೆಳಗ್ಗೆ 10ಕ್ಕೆ ತಮ್ಮ ಪತ್ನಿ ಶಿವಗಾಮಿ ಅವರನ್ನು ಜೆ.ಪಿ.ನಗರದ 6ನೇ ಹಂತದಲ್ಲಿ ಬಿಟ್ಟು, ಕೆಲಸವಿದೆ ಎಂದು ಹೇಳಿ ಹೋಗಿದ್ದ ಮಗ ಮನೆಗೆ ಮರಳದೆ ಹೋದಾಗ ಆತಂಕಗೊಂಡ ಮೃತನ ತಾಯಿ ಲಕ್ಷ್ಮಿ, ಪುಟ್ಟೇನಹಳ್ಳಿ ಠಾಣೆಯಲ್ಲಿ ಕಣ್ಮೆರೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೃತನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಕೊನೆಯ ಕರೆ ಬಗ್ಗೆ ಶಂಕೆಗೊಂಡಿದ್ದಾರೆ. ಆ ಕರೆ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಮಂಜುನಾಥ್ ಸಿಕ್ಕಿಬಿದ್ದಿದ್ದಾನೆ. ಬಳಿಕ ವಿಚಾರಣೆ ವೇಳೆ ಕೊಲೆ ರಹಸ್ಯವನ್ನು ಆತ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್ ಕೊಡಿಸಲು ಶಿಷ್ಯರಿಂದ ಡ್ರಗ್ಸ್ ದಂಧೆ
ದಿವಾಕರ್ ಹತ್ಯೆ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ತುಂಬಿಕೊಂಡ ಆರೋಪಿಗಳು, ದಿವಾಕರ್‌ನ ಅವೇಜರ್ ಬೈಕ್‌ನಲ್ಲೇ ಇಟ್ಟುಕೊಂಡು ಮಾಗಡಿ ರಸ್ತೆ ಹೊನ್ನಾಪುರ ಕೆರೆ ತೆಗೆದುಕೊಂಡು ಹೋಗಿ ಬಿಸಾಡಿದ್ದರು. ಬಳಿಕ ಆತನ ಬೈಕನ್ನು ಸಹ ಅದೇ ಕೆರೆಯಲ್ಲಿ ಕಲ್ಲು ಕಟ್ಟಿ ಮುಳುಗಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಲ್ಲಿ ಆರೋಪಿ ಪತ್ನಿ ಪಾತ್ರ?
ದಿವಾಕರ್ ಹತ್ಯೆ ನಡೆದಾಗ ಮನೆಯಲ್ಲಿ ಮಂಜುನಾಥ್‌ನ ಪತ್ನಿ ರಕ್ಷಿತಾ ಇದ್ದಳು. ಹೀಗಾಗಿ ಹತ್ಯೆಯಲ್ಲಿ ಆಕೆಯೇ ಪಾತ್ರದ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ(Investigation) ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.