2013ರ ಜನವರಿ 22 ರಂದು 7 ವರ್ಷದ ಹುಡುಗಿಯೊಬ್ಬಳನ್ನು ಮುಂಬೈನ ಅಂಧೇರಿಯಲ್ಲಿ ಅಪಹರಣ ಮಾಡಲಾಗಿತ್ತು. ಶಾಲೆಗೆ ಹೋಗಿದ್ದ ಹುಡುಗಿಯನ್ನು ವ್ಯಕ್ತಿಯೊಬ್ಬ ಕಿಡ್ನಾಪ್ ಮಾಡಿದ್ದ. ಬಾಲಕಿಯ ಕುಟುಂಬ ಆಕೆಗಾಗಿ ಹುಡುಕಾಟ ಮಾಡಿದ ಜಾಗಗಳಿಲ್ಲ. ಕೊನೆಗೆ ಪೊಲೀಸ್ ದೂರನ್ನು ನೀಡಿದ್ದರು. ಪೊಲೀಸರು ಕೂಡ ವರ್ಷಗಳ ಕಾಲ ಹುಡುಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರ ನಡುವೆ ಸರ್ಕಾರಿ ದಾಖಲೆಗಳಲ್ಲಿ ಈ ಪ್ರಕರಣ ಮಿಸ್ಸಿಂಗ್ ಗರ್ಲ್ ನಂಬರ್ 166 ಎಂದೇ ಗುರುತಿಸಿಕೊಂಡಿತ್ತು.
ಮುಂಬೈ (ಆ. 6): ಅಂದಾಜು 10 ವರ್ಷಗಳ ಹಿಂದೆ ಮುಂಬೈ ಮಹಾನಗರಿಯ ಅಂಧೇರಿಯಲ್ಲಿ 7 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಆದರೆ, ಮುಂಬೈ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಧೋಂಡು ಭೋಸ್ಲೆ ಅವರ ಅವಿರತ ಶ್ರಮದ ಫಲವಾಗಿ 2022ರ ಆಗಸ್ಟ್ 4 ರಂದು ತನ್ನ ಕುಟುಂಬವನ್ನು ಕೂಡಿಕೊಂಡಿದ್ದಾಳೆ. ಸರಿಯಾಗಿ 9 ವರ್ಷ 7 ತಿಂಗಳು ಆಕೆ ನಾಪತ್ತೆಯಾಗಿದ್ದಳು. ಇದಕ್ಕಿಂತ ಅಚ್ಚರಿಯ ವಿಚಾರವೇನೆಂದರೆ, 7 ವರ್ಷದವಳಾಗಿದ್ದಾಗ ನಾಪತ್ತೆಯಾಗಿದ್ದ ಹುಡುಗಿ ಪತ್ತೆಯಾಗುವ ವೇಳೆ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ವಾಸವಾಗಿದ್ದಳು. ಗುರುವಾರ ರಾತ್ರಿ 8.20ರ ವೇಳೆಗೆ ಈಗ 16 ವರ್ಷದ ಹುಡುಗಿಯಾಗಿರುವ ಆಕೆ ತನ್ನ ಕುಟುಂಬವನ್ನು ಕೂಡಿಕೊಂಡಿದ್ದಾಳೆ. ಈ ಕಥೆಯು 9 ವರ್ಷಗಳ ಕಾಲ ತನ್ನ ಗುರುತಿನೊಂದಿಗೆ ಹೋರಾಡಿದ ಹುಡುಗಿಯ ಕುರಿತಾಗಿದೆ. ಮಗುವಿನ ಆಸೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ವ್ಯಕ್ತಿಯೊಬ್ಬ ಈಕೆಯ ಅಪಹರಣ ಮಾಡಿದ್ದ. ಆ ವ್ಯಕ್ತಿ ತನ್ನ ಸ್ವಂತ ಮಗುವನ್ನು ಹೊಂದಿದ್ದ ಹೊರತಾಗಿಯೂ ಈ ಬಾಲಕಿಯನ್ನು ಮನೆಗೆಲಸದವಳಾಗಿ ಇರಿಸಿಕೊಂಡಿದ್ದ. ಆರೋಪಿಯ ಪತ್ನಿ ಕೂಡ ಬಾಲಕಿಗೆ ಥಳಿಸುತ್ತಿದ್ದಳು. ಒಮ್ಮೆ ಕುಡಿದ ಅಮಲಿನಲ್ಲಿ ಹುಡುಗಿಗೆ ನೀನು ನನ್ನ ಮಗುವಲ್ಲ ನಿನ್ನ ಬೆಳೆಸಿದ್ದು ನಾನು ಎಂದಷ್ಟೇ ಹೇಳಿದ್ದಾನೆ.
ಮುಂಬೈನ ಏಳು ವರ್ಷದ ಪೂಜಾ ಗೌಡ ತನ್ನ ಸಹೋದರನೊಂದಿಗೆ 22 ಜನವರಿ 2013 ರಂದು ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಪಾಕೆಟ್ ಮನಿ ವಿಚಾರದಲ್ಲಿ ಸಹೋದರನೊಂದಿಗೆ ಜಗಳ ನಡೆದು, ರಸ್ತೆಯಲ್ಲಿ ಹಿಂದೆ ಬರುತ್ತಿದ್ದಳು. ಈ ಹಂತದಲ್ಲಿ ಆರೋಪಿ ಜೋಸೆಫ್ ಡಿಸೋಜಾ ಶಾಲೆಯ ಬಳಿ ಓಡಾಡುತ್ತಿದ್ದ ಈ ಬಾಲಕಿಯನ್ನು ನೋಡಿದ್ದಾನೆ. ಜೋಸೆಫ್‌ನ ಪತ್ನಿ ಸೋನಿ ಬಹಳ ದಿನಗಳಿಂದ ತನಗೊಂದು ಮಗು ಬೇಕು ಹೇಳುತ್ತಿದ್ದ ಕಾರಣಕ್ಕೆ ಈ ಬಾಲಕಿಯ ಅಪಹರಣ ಮಾಡಿದ್ದ.
ಶಿಕ್ಷೆಗೆ ಹೆದರಿ ಮಗುವನ್ನು ಕರ್ನಾಟಕಕ್ಕೆ ಕಳಿಸಿದ್ದ: ಪೊಲೀಸ್ ತನಿಖೆ ತೀವ್ರವಾಗಿದ್ದಲ್ಲದೆ, ಮಾಧ್ಯಮಗಳು ಕೂಡ ಈ ಕುರಿತಾಗಿ ತೀವ್ರವಾಗಿ ವರದಿಗಾರಿಕೆ ಆರಂಭ ಮಾಡಿದ್ದವು. ಸ್ಥಳೀಯ ಪೊಲೀಸರು ಕೂಡ ಈ ಬಗ್ಗೆ ಅಭಿಯಾನ ಆರಂಭಿಸಿದ್ದರು. ಆರೋಪಿ ಡಿಸೋಜಾ ಇದರಿಂದ ಹೆದರಿದ್ದ. ಹಾಗೇನಾದರೂ, ಮಗು ಸಿಕ್ಕಲ್ಲಿ ತಾನು ಹಾಗೂ ಪತ್ನಿ ಇಬ್ಬರೂ ಜೈಲಿಗೆ ಸೇರಬಹುದು ಎನ್ನುವ ಕಾರಣಕ್ಕೆ, ಪೂಜಾ ಗೌಡಳನ್ನು ಕರ್ನಾಟಕದ ರಾಯಚೂರಿನಲ್ಲಿರುವ ಹಾಸ್ಟೆಲ್‌ಗೆ ಕಳಿಸಿದ್ದ.
ತನಗೆ ಮಗು ಹುಟ್ಟಿದ ಬಳಿಕ ಶಿಶಿವಿಹಾರ ಆರಂಭಿಸಿದ್ದ: 2016ರಲ್ಲಿ ಜೋಸೆಫ್ ಡಿಸೋಜಾ ಹಾಗು ಸೋನಿಗೆ ಸ್ವಂತ ಮಗುವಾಗಿತ್ತು. ಈ ವೇಳೆ ಜೋಸೆಫ್, ರಾಯಚೂರಿನಲ್ಲಿ ಕಲಿಯುತ್ತಿದ್ದ ಪೂಜಾಳನ್ನು ಮುಂಬೈಗೆ ವಾಪಸ್ ಕರೆಸಿದ್ದ. ಆದರೆ, ಈ ವೇಳೆಗಾಗಲೇ ಇಬ್ಬರು ಮಕ್ಕಳನ್ನು ಸಾಕುವುದು ಕುಟುಂಬಕ್ಕೆ ಕಷ್ಟವಾಗಿತ್ತು. ಈ ವೇಳೆ ಬೇಬಿಸಿಟ್ಟಿಂಗ್ ಅಥವಾ ಶಿಶುವಿಹಾರವನ್ನು ಆರಂಭಿಸಿ, ಅದನ್ನು ನೋಡಿಕೊಳ್ಳಲು ಪೂಜಾಳನ್ನು ನೇಮಿಸಿದ್ದ. ಈ ಹಂತದಲ್ಲಿ ಮನೆಯನ್ನು ಕೂಡ ಬದಲು ಮಾಡಿದ್ದ ಜೋಸೆಫ್ ಡಿಸೋಜಾ, ಅಂಧೇರಿ ಪೂರ್ವದ ಗಿಲ್ಬರ್ಟ್ ಹಿಲ್ ಏರಿಯಾದಲ್ಲಿ ಮನೆ ಮಾಡಿದ. ಅಚ್ಚರಿ ಎಂದರೆ, ಪೂಜಾರ ತಂದೆ-ತಾಯಿ ಕೂಡ ಇದೇ ಏರಿಯಾದಲ್ಲಿ ವಾಸವಿದ್ದರು.
ಡಿ.ಎನ್.ನಗರದ ಹಿರಿಯ ಇನ್ಸ್‌ಪೆಕ್ಟರ್ ಮಿಲಿಂದ್ ಕುರ್ಡೆ, 'ಹುಡುಗಿ ಬೆಳೆದಂತೆ ಯಾರೂ ಗುರುತಿಸುವುದಿಲ್ಲ ಎಂದು ಡಿಸೋಜಾ ಭಾವಿಸಿದ್ದ. ಅಲ್ಲದೆ ‘ಕಾಣೆಯಾದವರಿಗಾಗಿ ಹುಡುಕುತ್ತಿದ್ದೇವೆ’ ಎಂಬ ಆಕೆಯ ಪೋಸ್ಟರ್‌ಗಳನ್ನೂ ತೆಗೆದುಹಾಕಲಾಗಿತ್ತು. ಈ ನಡುವೆ ಆ ಪ್ರದೇಶದಲ್ಲಿ ಯಾರೊಂದಿಗೂ ಮಾತನಾಡುವಂತಿಲ್ಲ ಎಂದು ಬಾಲಕಿಗೆ ಡಿಸೋಜಾ ಸೂಚನೆ ನೀಡಿದ್ದ ಪೊಲೀಸರು ಹೇಳಿದ್ದಾರೆ. ಪೂಜಾರ ಚಿಕ್ಕಪ್ಪ ಹೇಳುವ ಪ್ರಕಾರ, ಜೋಸೆಫ್ ಡಿಸೋಜಾ ಪತ್ನಿ ಸೋನಿ ಪ್ರತಿ ದಿನವೂ ಪೂಜಾ ಮೇಲೆ ಹಲ್ಲೆ ಮಾಡುತ್ತಿದ್ದರು. ಒಂದೊಮ್ಮೆ ಕುಡಿದ ಮತ್ತಿನಲ್ಲಿ, ನಿನ್ನನ್ನು ನಾನು ಕಿಡ್ನಾಪ್ ಮಾಡಿದ್ದು ಎಂದು ಪೂಜಾಗೆ ಹೇಳಿದ್ದ. ಅಲ್ಲಿಯವರೆಗೂ ಪೂಜಾ, ಜೋಸೆಫ್ ಡಿಸೋಜಾ ಹಾಗೂ ಸೋನಿಯನ್ನೇ ತನ್ನ ತಂದೆ ತಾಯಿ ಎನಿಸಿಕೊಂಡಿದ್ದವು. ಆದರೆ, ಮನೆಯಿಂದ ಓಡಿಹೋಗುವ ಮಾರ್ಗಗಳು ಗೊತ್ತಿರದ ಕಾರಣ ಸುಮ್ಮನಿದ್ದಳು.
ಗೂಗಲ್ ಮೂಲಕ ತಿಳಿದ ಪೂಜಾ: ಪೂಜಾ 7 ತಿಂಗಳ ಕಾಲ ಬೇಬಿ ಸಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ, ಆ ಮನೆಯವರು ಪೂಜಾಗೆ ಸಹಾಯ ಮಾಡಿದರು. ಪೂಜಾಳ ಕಥೆಯನ್ನು ಕೇಳಿದ ಹೌಸ್‌ಹೆಲ್ಪ್, ಹುಡುಗಿಯ ಹೆಸರು, ಕಾಣೆಯಾದ ಮತ್ತು ಡಿಸೋಜಾ ಅವರ ಹೆಸರನ್ನು ನಮೂದಿಸಿ ಗೂಗಲ್‌ನಲ್ಲಿ ಹುಡುಕಿದಾಗ, ಆ ಸಮಯದಲ್ಲಿ ಹುಡುಗಿಯ ಹುಡುಕಾಟ ಅಭಿಯಾನಕ್ಕೆ ಸಂಬಂಧಿಸಿದ ಲೇಖನಗಳು ಕಂಡುಬಂದವು. ಆ ಲೇಖನಗಳಲ್ಲಿ ಅವರ ಚಿತ್ರವನ್ನು ನೋಡಿದ ನಂತರ ಪೂಜಾಗೆ ಎಲ್ಲವೂ ನೆನಪಾಯಿತು ಎಂದು ಪೂಜಾ ಅವರ ಚಿಕ್ಕಪ್ಪ ಹೇಳಿದ್ದಾರೆ. ಪಕ್ಕದಲ್ಲೇ ಇದ್ದ ತನ್ನ ಮನೆಯನ್ನೂ ನೆನಪಿಸಿಕೊಂಡಿದ್ದಾರೆ. ಕಾಣೆಯಾದ ಪೋಸ್ಟರ್‌ನಲ್ಲಿ ಪೂಜಾ ಐದು ಫೋನ್ ಸಂಖ್ಯೆಗಳನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ನಾಲ್ಕು ಸಂಖ್ಯೆ ಕೆಲಸ ಮಾಡುತ್ತಿರಿಲ್ಲ. ಆದರೆ ಐದನೇ ನಂಬರ್ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ರಫೀಕ್ ಅವರದ್ದಾಗಿತ್ತು. ಆ ಸಂಖ್ಯೆ ಕೆಲಸ ಮಾಡುತ್ತಿತ್ತು.
ಪ್ರೀತಿ ನಿರಾಕರಿಸಿದ್ದಕ್ಕೆ 15 ಮಂದಿಯಿಂದ ಮಹಿಳೆಯ ಕಿಡ್ನ್ಯಾಪ್: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ವಿಡಿಯೋ ಕಾಲ್ ಮೂಲಕ ಕುಟುಂಬದೊಂದಿಗೆ ಸೇರಿದ ಪೂಜಾ: ಈ ವೇಳೆ ರಫೀಕ್‌ಗೆ ಪೂಜಾ ಕಾಲ್ ಮಾಡಿದ್ದರು. ಆದರೆ, ರಫೀಕ್ ಇದನ್ನು ಮೊದಲು ನಂಬಿರಲಿಲ್ಲ. ಪೂಜಾಳ ಚಿತ್ರವನ್ನು ಕೊಡುವಂತೆ ಹೇಳಿದ್ದ. ಗುರುವಾರ ಬೆಳಿಗ್ಗೆ, ಪೂಜಾ ಹೌಸ್ ಹೆಲ್ಪ್ ಸಹಾಯದಿಂದ ವೀಡಿಯೊ ಕರೆ ಮಾಡಿದ್ದರು. ಅದರ ಸ್ಕ್ರೀನ್‌ಶಾಟ್ ಅನ್ನು ರಫೀಕ್ ಪೂಜಾ ಅವರ ತಾಯಿ ಮತ್ತು ಚಿಕ್ಕಪ್ಪನಿಗೆ ತೋರಿಸಿದರು. ಚಿತ್ರದಲ್ಲಿ ಪೂಜಾಳನ್ನು ನೋಡಿ ಇಬ್ಬರೂ ಕಣ್ಣೀರಿಟ್ಟಿದ್ದರು. ಪೂಜಾಳ ಮನೆಯವರು ಆಕೆ ಕೆಲಸ ಮಾಡುವ ಸ್ಥಳದ ವಿವರ ಪಡೆದು ಡಿಎನ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲ್ಲಿಗೆ ತಲುಪಿದಾಗ, ಪೂಜಾ ತಾನು ಕುಳಿತಿದ್ದ ಮಗುವನ್ನು ಆಟವಾಡಿಸುವ ನೆಪದಲ್ಲಿ ಕೆಳಗಿಳಿದಿದ್ದಾಳೆ. ಪೂಜಾ ಮತ್ತು ಅವರ ತಾಯಿ 9 ವರ್ಷಗಳ ನಂತರ ರಾತ್ರಿ 8.20 ಕ್ಕೆ ಭೇಟಿಯಾಗಿದ್ದಾರೆ.
ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾದ ಎದುರು ಮನೆಯ ಆಂಟಿ!
ಮಾನವ ಕಳ್ಳಸಾಗಣೆ ಪ್ರಕರಣ: ಡಿಸೋಜಾ ದಂಪತಿ ವಿರುದ್ಧ ಪೊಲೀಸರು ಅಪಹರಣ, ಮಾನವ ಕಳ್ಳಸಾಗಣೆ, ಅಕ್ರಮ ಕಾರ್ಮಿಕ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೋಸೆಫ್ ಡಿಸೋಜಾ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ, ಆದರೆ ಅವರ ಪತ್ನಿ ಸೋನಿ ಅವರ ಆರು ವರ್ಷದ ಮಗುವನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಇನ್ನೂ ಬಂಧಿಸಲಾಗಿಲ್ಲ. ಸದ್ಯ ಪೊಲೀಸರು 16 ವರ್ಷದ ಪೂಜಾಗೆ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುವುದು, ನಂತರ ಅವರನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಕರ್ನಾಟಕಕ್ಕೂ ಪೊಲೀಸರು ತಂಡವನ್ನು ಕಳುಹಿಸಿದ್ದು, ಪೂಜಾ ಅವರನ್ನು ಎಲ್ಲಿ ಇರಿಸಲಾಗಿದೆ ಎಂಬ ನಿಖರ ಮಾಹಿತಿ ಸಿಗಲಿದೆ.