ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ಮೂರನೇ ದಿನ ಗುರುವಾರ ಸಹ ಮುಂದುವರೆಸಿದ್ದಾರೆ.
ಬೆಂಗಳೂರು (ಜೂ.14): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ಮೂರನೇ ದಿನ ಗುರುವಾರ ಸಹ ಮುಂದುವರೆಸಿದ್ದಾರೆ. ವಿಚಾರಣೆ ವೇಳೆ ಹೆಚ್ಚಾಗಿ ದರ್ಶನ್ ‘ಮೌನ’ವನ್ನೇ ಉತ್ತರವಾಗಿ ನೀಡುತ್ತಿದ್ದರೆ, ಅವರ ಸಹಚರರು ಎಲ್ಲ ವಿಷಯಗಳನ್ನು ಬಾಯಿ ಬಿಡುತ್ತಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲೇ ಆರೋಪಿಗಳನ್ನು ಪೊಲೀಸರು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕೃತ್ಯ ನಡೆದ ಹಾಗೂ ಮೃತದೇಹ ಬಿಸಾಡಿದ್ದ ಸ್ಥಳಗಳಿಗೆ ಕರೆದೊಯ್ದು ಆರೋಪಿಗಳ ಸಮ್ಮುಖದಲ್ಲಿ ಬುಧವಾರ ಮಹಜರ್ ನಡೆಸಿದ್ದರು. ಹೀಗಾಗಿ ಕೃತ್ಯದಲ್ಲಿ ಪ್ರತಿಯೊಬ್ಬರ ಪಾತ್ರದ ಕುರಿತು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ದರ್ಶನ್ ಮೌನ, ಸಹಚರರ ಮಾತು: ವಿಚಾರಣೆಗೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ಸ್ಪಂದಿಸುತ್ತಿದ್ದಾರೆ. ಹೆಚ್ಚಿನ ಸಮಯ ದರ್ಶನ್ ಮೌನವಾಗಿದ್ದರೆ, ಅವರ ಆಪ್ತರಾದ ಪಟ್ಟಣಗೆರೆ ವಿನಯ್, ಪ್ರದೋಷ್, ನಾಗರಾಜ, ಪವನ್ ಹಾಗೂ ರಾಘವೇಂದ್ರ ಸೇರಿದಂತೆ ಇನ್ನುಳಿದ ಸಹಚರರು ಕೃತ್ಯದ ಬಗ್ಗೆ ಇಂಚಿಂಚು ಮಾಹಿತಿ ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟ ದರ್ಶನ್ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್!
ಸಂಚು ರೂಪಿಸಿಲ್ಲ: ‘ರೇಣುಕಾಸ್ವಾಮಿಗೆ ಸಂಚು ರೂಪಿಸಿ ಹತ್ಯೆ ಮಾಡಿಲ್ಲ. ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ಆತನಿಗೆ ಬೆದರಿಕೆ ಹಾಕಲು ಚಿತ್ರದುರ್ಗದಿಂದ ಆರೋಪಿಗಳು ಕರೆತಂದಿದ್ದರು. ಆದರೆ ಪ್ರಚೋದನೆಗೊಳಗಾಗಿ ಆತನ ಮೇಲೆ ಆರೋಪಿಗಳು ಮನಂಬದಂತೆ ಹಲ್ಲೆ ನಡೆಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.