ರೋಗಿಯ ಎದೆ ಸ್ಪರ್ಶಿಸಿ ಮುತ್ತಿಟ್ಟ ವೈದ್ಯ: ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

By Kannadaprabha NewsFirst Published Jun 14, 2024, 8:05 AM IST
Highlights

ವೈದ್ಯಕೀಯ ತಪಾಸಣೆ ನಡೆಸುವ ನೆಪದಲ್ಲಿ ಮಹಿಳೆಯೊಬ್ಬರ ಎದೆಭಾಗ ಸ್ಪರ್ಶಿಸಿ ಮುತ್ತಿಡುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌.

ಬೆಂಗಳೂರು (ಜೂ.14): ವೈದ್ಯಕೀಯ ತಪಾಸಣೆ ನಡೆಸುವ ನೆಪದಲ್ಲಿ ಮಹಿಳೆಯೊಬ್ಬರ ಎದೆಭಾಗ ಸ್ಪರ್ಶಿಸಿ ಮುತ್ತಿಡುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ರೋಗಿಯ ದೇಹ ಮುಟ್ಟಲು ವೈದ್ಯರಿಗೆ ಇರುವ ಅಧಿಕಾರ ಪವಿತ್ರವಾದದ್ದು. ಅದರ ದುರ್ಬಳಕೆ ಸಲ್ಲದು ಎಂದು ಅಭಿಪ್ರಾಯಪಟ್ಟಿದೆ. ಈ ಸಂಬಂಧ ತಮ್ಮ ವಿರುದ್ಧದ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬೆಂಗಳೂರಿನ ಡಾ। ಎಸ್.ಚೇತನ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ವೈದ್ಯ ವೃತ್ತಿಯಲ್ಲಿರುವವರಿಗೆ ರೋಗಿಯ ದೇಹ ಮುಟ್ಟಿ ತಪಾಸಣೆ ನಡೆಸಲು ಅವಕಾಶವಿದೆ. ಅದೊಂದು ಪವಿತ್ರವಾದ ಕಾರ್ಯ. ಆ ಅಧಿಕಾರವನ್ನು ಗುಣಪಡಿಸುವ ಉದ್ದೇಶಕ್ಕೆ ಮಾತ್ರ ಬಳಸುವಂತಿರಬೇಕು. ದುರುದ್ದೇಶ ಪೂರ್ವಕವಾಗಿ ಬಳಕೆ ಮಾಡಿದಲ್ಲಿ ಅದು ಲೈಂಗಿಕ ಕಿರುಕುಳ ನೀಡಿದಂತಾಗಲಿದೆ. ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ಸಂದರ್ಭಗಳಲ್ಲಿ ಮಾತ್ರ ವೈದ್ಯರಲ್ಲಿಗೆ ಬರುತ್ತಾರೆ ಎಂಬ ಅಂಶವನ್ನು ವೈದ್ಯರಾದವರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

Latest Videos

ನಟ ದರ್ಶನ್‌ ಗ್ಯಾಂಗ್‌ ಚಿತ್ರಹಿಂಸೆ ಪೋಸ್ಟ್‌ಮಾರ್ಟಂನಲ್ಲಿ ಪತ್ತೆ: ವೈದ್ಯರು ಹೇಳಿದ್ದೇನು?

ರೋಗಿಯು ವೈದ್ಯರ ಮೇಲಿನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ರೋಗಿಯ ದೇಹ ಪರಿಶೀಲಿಸಲು ಇರುವ ಅಧಿಕಾರವನ್ನು ಲೈಂಗಿಕ ಕಿರುಕುಳ ನೀಡಲು ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ರೀತಿಯ ಕೃತ್ಯ ಬೆಳಕಿಗೆ ಬಂದಲ್ಲಿ ವೈದ್ಯರು ಮತ್ತು ರೋಗಿಯ ನಡುವೆ ವಿಶ್ವಾಸದ ಸಂಬಂಧಗಳು ನಾಶವಾಗಲಿದೆ. ಆದ್ದರಿಂದ ಪ್ರಕರಣದ ಕುರಿತು ಕನಿಷ್ಠ ತನಿಖೆ ನಡೆಯಬೇಕಿದೆ ಎಂದು ಪೀಠ ಹೇಳಿದೆ.

ಪ್ರಕರಣದ ವಿವರ: ಅರ್ಜಿದಾರ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗೆ ಎದೆ ನೋವು ಸಮಸ್ಯೆಯಿಂದ ಮಹಿಳೆಯೊಬ್ಬರು ಪರೀಕ್ಷೆಗೆ ಬಂದಿದ್ದರು. ಆಕೆಯನ್ನು ತಪಾಸಣೆ ನಡೆಸಿದ್ದ ಅರ್ಜಿದಾರ, ಇಸಿಜಿ ಮತ್ತು ಎಕ್ಸ್‌-ರೇ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು. ಈ ವೇಳೆ ಆಕೆ ಮೊಬೈಲ್ ಸಂಖ್ಯೆ ಪಡೆದು ವಾಟ್ಸ್‌ ಆ್ಯಪ್ ಮೂಲಕ ಇಸಿಜಿ ಮತ್ತು ಎಕ್ಸ್‌ರೇ ಪರೀಕ್ಷೆಯ ವರದಿ ಕಳುಹಿಸಿದ್ದರು. ಜೊತೆಗೆ, ಹೆಚ್ಚಿನ ತಪಾಸಣೆಗೆ ತನ್ನ ಖಾಸಗಿ ಕ್ಲಿನಿಕ್‌ಗೆ ಬಂದು ಭೇಟಿಯಾಗುವಂತೆ ಸಲಹೆ ನೀಡಿದ್ದರು.

ಅದರಂತೆ ತಪಾಸಣೆಗೆ ಮಹಿಳಾ ರೋಗಿಯು 2024ರ ಮಾ.21ರಂದು ಕ್ಲಿನಿಕ್‌ಗೆ ಒಬ್ಬರೇ ಹೋಗಿದ್ದರು. ಆಕೆಯನ್ನು ಕೊಠಡಿಗೆ ಕರೆದೊಯ್ದು ಹಾಸಿಗೆ ಮೇಲೆ ಮಲಗಲು ಅರ್ಜಿದಾರ ತಿಳಿಸಿದ್ದರು. ನಂತರ ಆಕೆಯ ಎದೆಯ ಭಾಗದ ಮೇಲೆ ಸ್ಟೆಥಸ್ಕೋಪ್‌ನ್ನಿಟ್ಟು ಪರಿಶೀಲಿಸಿದ್ದರು. ಬಳಿಕ ಆಕೆಯ ಉಡುಪುಗಳನ್ನು ಮೇಲಕ್ಕೆ ಸರಿಸಿದ್ದ ವೈದ್ಯ, ಎದೆಭಾಗ ಸ್ಪರ್ಶಿಸಿದ್ದರು. ಎಡಭಾಗದ ಸ್ತನಕ್ಕೆ ಮುತ್ತಿಟ್ಟಿದ್ದರು. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಮಹಿಳೆ ಕ್ಲಿನಿಕ್‌ನಿಂದ ಹೊರ ಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಪೋಕ್ಸೋ ಕೇಸ್‌ನಲ್ಲಿ ಅಗತ್ಯ ಬಿದ್ದರೆ ಬಿಎಸ್‌ವೈ ಬಂಧನ: ಗೃಹ ಸಚಿವ ಪರಮೇಶ್ವರ್‌

ಮರು ದಿನ ಆ ಮಹಿಳೆ ವೈದ್ಯನ ಮೇಲೆ ಪುಟ್ಟೇನಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಲೈಂಗಿಕ ಕಿರುಕುಳದ ಆರೋಪ ಸಂಬಂಧ ಅರ್ಜಿದಾರನ ಮೇಲೆ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದರಿಂದ ಎಫ್‌ಐಆರ್‌ ರದ್ದತಿಗೆ ಕೋರಿ ವೈದ್ಯ ಹೈಕೋರ್ಟ್ ಮೆಟ್ಟಿಲು ಏರಿದ್ದರು.

click me!