ಹುಬ್ಬಳ್ಳಿ: ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ಸಾವು; ತನಿಖೆ ತೀವ್ರ

By Kannadaprabha NewsFirst Published Aug 8, 2020, 12:53 PM IST
Highlights

ಸಿಸಿ ಕ್ಯಾಮೆರಾ, ಮೊಬೈಲ್‌ ಕರೆಗಳು, ಕೆಲ ದಿನಗಳ ಹಿಂದಿನ ಗಲಾಟೆ ಸುತ್ತ ತನಿಖೆ| ಗುರುವಾರ ಸಂಜೆ ನಾಲ್ಕು ಸುತ್ತಿನಿಂದ ನಡೆದ ಗುಂಡಿನ ದಾಳಿಯಲ್ಲಿ ಸ್ಥಳದಲ್ಲೆ ಕುಸಿದಿದ್ದ ಇರ್ಫಾನ್‌| ಇರ್ಫಾನ್‌ ತಲೆ ಮತ್ತು ಕಾಲಿಗೆ ಬುಲೆಟ್‌ ಹೊಕ್ಕಿದ್ದರಿಂದ ತೀವ್ರ ರಕ್ತಸ್ರಾವದಿಂದ ಉಂಟಾಗಿ ಸಾವು|
 

ಹುಬ್ಬಳ್ಳಿ(ಆ.08): ಏಕಾಏಕಿ ಗುಂಡಿನ ದಾಳಿಗೆ ತುತ್ತಾಗಿದ್ದ ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ತಡರಾತ್ರಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ಕೋವಿಡ್‌-19 ತಪಾಸಣೆಯನ್ನೂ ಮಾಡಲಾಗಿದೆ. ವರದಿ ಇನ್ನೂ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲೇ ಅಂತ್ಯಸಂಸ್ಕಾರ ನಡೆಯಿತು. ಇನ್ನೊಂದೆಡೆ ಪೊಲೀಸ್‌ ತಂಡ ವಿವಿಧ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿದ್ದು, ಶೀಘ್ರವೇ ಆರೋಪಿಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಗುರುವಾರ ಸಂಜೆ ನಾಲ್ಕು ಸುತ್ತಿನಿಂದ ನಡೆದ ಗುಂಡಿನ ದಾಳಿಯಲ್ಲಿ ಸ್ಥಳದಲ್ಲೆ ಕುಸಿದಿದ್ದ ಇರ್ಫಾನ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆತ ತಡರಾತ್ರಿ ಮೃತಪಟ್ಟಿದ್ದಾಗಿ ಶುಕ್ರವಾರ ಬೆಳಗ್ಗೆ ವೈದ್ಯರು ಘೋಷಿಸಿದ್ದಾರೆ. ಇರ್ಫಾನ್‌ ತಲೆ ಮತ್ತು ಕಾಲಿಗೆ ಬುಲೆಟ್‌ ಹೊಕ್ಕಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಆತ ಬದುಕುಳಿಯಲಿಲ್ಲ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ಮೇಲೆ ಫೈರಿಂಗ್‌

ಕೋವಿಡ್‌ ಪಾಸಿಟಿವ್‌!:

ಮೃತಪಟ್ಟ ಫ್ರೂಟ್‌ ಇರ್ಫಾನ್‌ ಮರಣೋತ್ತರ ಪರೀಕ್ಷೆ ಇಲ್ಲಿನ ಕಿಮ್ಸ್‌ನಲ್ಲಿ ನಡೆಯಿತು. ಈ ವೇಳೆ ಕೋವಿಡ್‌-19 ತಪಾಸಣೆಯನ್ನೂ ನಡೆಸಲಾಗಿದೆ. ವರದಿ ಇನ್ನು ಬಂದಿಲ್ಲ. ಆದರೆ ಧಾರವಾಡದಲ್ಲಿ ಅಂತ್ಯಸಂಸ್ಕಾರ ನಡೆಸಿದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ. ಆದ ಕಾರಣ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಅಂತ್ಯಸಂಸ್ಕಾರ ಮಾಡುವುದನ್ನು ಕೈಬಿಟ್ಟು ಹುಬ್ಬಳ್ಳಿಯ ಖಬರಸ್ತಾನ್‌ನಲ್ಲಿ ನಡೆಸಲು ತಿರ್ಮಾನಿಸಲಾಯಿತು. ನಿನ್ನೆಯಿಂದ ಆಸ್ಪತ್ರೆಯಲ್ಲಿ, ಕಿಮ್ಸ್‌ ಶವಾಗಾರದ ಬಳಿ ಕಾದಿದ್ದ ಕುಟುಂಬಸ್ಥರಿಗೆ ಈ ಸಂಗತಿ ಶಾಕ್‌ ನೀಡಿತು. ಹೀಗಾಗಿ ಅಂತ್ಯಸಂಸ್ಕಾರದಲ್ಲಿ ಹೆಚ್ಚಿನವರು ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ತಂಡದಲ್ಲಿ ಯಾರಾರ‍ಯರು?:

ಈ ನಡುವೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಡಿಸಿಪಿ ಆರ್‌.ಬಿ. ಬಸರಗಿ ನೇತೃತ್ವದಲ್ಲಿ ಹಳೆ ಹುಬ್ಬಳ್ಳಿ ಠಾಣೆ ಪಿಐ ಮಾರುತಿ ಗುಳ್ಳಾರಿ, ಶಹರ ಠಾಣೆಯ ಪಿಐ ಎಂ.ಎಸ್‌. ಪಾಟೀಲ್‌, ಧಾರವಾಡ ಶಹರದ ಪಿಐ ಶ್ರೀಧರ ಸತಾರೆ, ಧಾರವಾಡ ಉಪನಗರದ ಪಿಐ ಪಿ.ಸಿ. ಯಲಿಗಾರ್‌, ಇ ಆ್ಯಂಡ್‌ ಎನ್‌ಪಿಎಸ್‌ ಪಿಐ ಎನ್‌.ಸಿ. ಕಾಡದೇವರ ಹಾಗೂ ಸಿಸಿಬಿ ಪೊಲೀಸ್‌ ಅಧಿಕಾರಿಗಳ ತಂಡ ತನಿಖೆಗೆ ನಿಯೋಜಿತವಾಗಿದೆ.

ವಿವಿಧ ಆಯಾಮ:

ಫ್ರೂಟ್‌ ಇರ್ಫಾನ್‌‌ ಈ ಹಿಂದಿನ ಲಿಂಕ್‌ಗಳ ಮಾಹಿತಿಯನ್ನೆಲ್ಲ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಕೆಲವರನ್ನು ತೀವ್ರ ವಿಚಾರಣೆಗೂ ಒಳಪಡಿಸಿದ್ದಾಗಿ ಮೂಲಗಳು ತಿಳಿಸಿವೆ. ನಗರದಲ್ಲಿನ ಸಿಸಿ ಕ್ಯಾಮೆರಾ ಫೂಟೇಜ್‌, ಮೊಬೈಲ್‌ ಕರೆಗಳು, ಫ್ರೂಟ್‌ ಇರ್ಫಾನ್‌ ಕಳೆದ ಹತ್ತು ಹದಿನೈದು ದಿನಗಳ ಹಿಂದೆ ಯಾರಾರ‍ಯರ ಸಂಪರ್ಕದಲ್ಲಿದ್ದ? ಆತನ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌, ಕ್ಲಬ್‌ಗಳಿಗೆ ಫೈನಾನ್ಸ್‌ ಮಾಡುತ್ತಿದ್ದುದು, ಹಣ್ಣಿನ ವ್ಯಾಪಾರದ ಕುರಿತು ಹಿಂದಿನ ತಂಟೆಗಳ ಕುರಿತಂತೆಲ್ಲ ತನಿಖೆಗಳು ನಡೆಯುತ್ತಿವೆ.

ಫ್ರೂಟ್‌ ಇರ್ಫಾನ್‌ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ರಚಿಸಲಾದ ತಂಡದ ಮೂಲಕ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಶೀಘ್ರವೇ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ ಅವರು ತಿಳಿಸಿದ್ದಾರೆ. 
 

click me!