ಮಾದಕ ವಸ್ತು ಮಾರಾಟ: ಒಡಿಶಾ ಮೂಲದ ವ್ಯಕ್ತಿ ಬಂಧನ, 16 ಕೇಜಿ ಗಾಂಜಾ ವಶ

By Kannadaprabha NewsFirst Published Aug 8, 2020, 7:52 AM IST
Highlights

ರೈಲಲ್ಲಿ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನ| ಆರೋಪಿಯಿಂದ ಸುಮಾರು 10 ಲಕ್ಷ ಮೌಲ್ಯದ 16 ಕೆ.ಜಿ. ಗಾಂಜಾ ಜಪ್ತಿ| ಒಡಿಶಾದ ಬಾಲಸೋರ್‌ ಜಿಲ್ಲೆಯ ಶಿಬಾನಿ ಒಂದೂವರೆ ವರ್ಷದಿಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ| 

ಬೆಂಗಳೂರು(ಆ.08):  ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಗೆರೆ ರಸ್ತೆಯ ನಿವಾಸಿ ಶಿಬಾನಿ ಶಂಕರ್‌ (26) ಬಂಧಿತ. ಆರೋಪಿಯಿಂದ ಸುಮಾರು 10 ಲಕ್ಷ ಮೌಲ್ಯದ 16 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಡಿಶಾದ ಬಾಲಸೋರ್‌ ಜಿಲ್ಲೆಯ ಶಿಬಾನಿ ಒಂದೂವರೆ ವರ್ಷದಿಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಸೆಕ್ಯೂರಿಟಿ ಏಜೆನ್ಸಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು ಜೊತೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಗಾಂಜಾ ಮಾರಾಟ ದಂಧೆಗೆ ಇಳಿದಿದ್ದ. ಕೊರೋನಾ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆ ಒಡಿಶಾದಿಂದ ಗಾಂಜಾವನ್ನು ರೈಲಿನಲ್ಲಿ ನಗರಕ್ಕೆ ತಂದಿದ್ದ. ಗುರುವಾರ ಮಧ್ಯಾಹ್ನ 3.40ರ ಸುಮಾರಿಗೆ ಆರೋಪಿ ವರ್ತೂರಿನ ಶೋಭಾ ಗೇಟ್‌ ಅಪಾರ್ಟ್‌ಮೆಂಟ್‌ ಬಳಿ ಚೀಲದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. 

ಶಿವಮೊಗ್ಗದಲ್ಲಿ ಗಾಂಜಾ ಮಾರಾಟ: ಮೂವರು ಆರೋಪಿಗಳು ಅಂದರ್

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದ. ಮೊದಲ ಬಾರಿಗೆ ಆರೋಪಿ ದಂಧೆಗೆ ಇಳಿದು ಬಂಧಿತನಾಗಿದ್ದಾನೆ. ನಗರದಲ್ಲಿ ಯಾರ ಸಂಪರ್ಕದಲ್ಲಿಯೂ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆತನ ಮೊಬೈಲ್‌ ಕರೆ ವಿವರಗಳನ್ನು ಪರಿಶೀಲನೆ ನಡೆಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರ್ತೂರು ಠಾಣೆ ಪೊಲೀಸರು ತಿಳಿಸಿದರು.

click me!