Aadhaar Fraud: ಆಧಾರ್‌ ಪಡೆದು ಮೆಗಾ ಮೋಸ: ಕಂಗಾಲಾದ ಜನ..!

By Kannadaprabha News  |  First Published Dec 6, 2021, 6:36 AM IST

*  ಚೈನ್‌ಲಿಂಕ್‌ ಸ್ಕೀಂ ಹೆಸರಲ್ಲಿ ಆಧಾರ್‌, ಪ್ಯಾನ್‌ಕಾರ್ಡ್‌ ಪಡೆಯುತ್ತಿದ್ದ ಗ್ಯಾಂಗ್‌
*  ಪ್ರತಿ ತಿಂಗಳು ಹಣ ಬರುತ್ತದೆ ಎಂದು ನಂಬಿಸಿ ವಂಚನೆ
*  ಮೋಸ ಮಾಡಿದ್ದ ವ್ಯಕ್ತಿ ದುಬೈಗೆ ಎಸ್ಕೇಪ್‌, 25 ಜನರಿಗೆ ಟೋಪಿ
 


ಬೆಂಗಳೂರು(ಡಿ.06):  ಪ್ರತಿ ತಿಂಗಳು ಹಣ ಬರುವ ಸ್ಕೀಂ ಹೆಸರಿನಲ್ಲಿ ಹಲವರಿಂದ ಆಧಾರ್‌(Aadhaar), ಪಾನ್‌ ಕಾರ್ಡ್‌(PAN Card) ಪಡೆದು ದ್ವಿಚಕ್ರ ವಾಹನ ಹಾಗೂ ಮೊಬೈಲ್‌ ಫೋನ್‌ ಖರೀದಿಸಿ ವಂಚಿಸಿರುವ(Fraud) ಘಟನೆಯೊಂದು ಪುಲಿಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಂ.ಎಸ್‌.ಪಾಳ್ಯ ನಿವಾಸಿ ನಯೀಮ್‌ ತಾಜ್‌ ಎಂಬುವವರು ನೀಡಿದ ದೂರಿನ ಮೇರೆಗೆ ಮೊಹಮದ್‌ ಜೈನ್‌, ಲೋಕೇಶ, ಕಾರ್ತಿಕ್‌, ಮುಜಾಹಿದ್‌, ಹಫೀಜ್‌, ಮನ್ಸೂರ್‌ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌(FIR) ದಾಖಲಾಗಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Tap to resize

Latest Videos

Job Fraud Busted: ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ನೇಮಕ: ಹತ್ತು ಮಂದಿ ಅರೆಸ್ಟ್‌

ಪ್ರಕರಣದ ವಿವರ:

ಟೇಲರಿಂಗ್‌ ಕೆಲಸ ಮಾಡುವ ನಯೀಮ್‌ ತಾಜ್‌ ಅವರಿಗೆ ಕಳೆದ ಮಾರ್ಚ್‌ನಲ್ಲಿ ಲಾಕ್‌ಡೌನ್‌(Lockdown) ಸಂದರ್ಭದಲ್ಲಿ ರೇಷನ್‌ ಹಂಚುವಾಗ ಗುಲ್ಜರ್‌ ಬಾನು ಎಂಬುವವರ ಪರಿಚಯವಾಗಿದೆ. ಈ ವೇಳೆ ಗುಲ್ಜರ್‌ ಬಾನು ಒಂದು ಸ್ಕೀಂ ಇದ್ದು, ನೀವು ಪಾಲುದಾರರಾದರೆ ಪ್ರತಿ ತಿಂಗಳು ಹಣ ಬರಲಿದೆ ಎಂದು ಹೇಳಿದ್ದಾಳೆ. ಸ್ಕೀಂ ಪಾಲುದಾರರಾಗಲು ನಯೀಮ್‌ ತಾಜ್‌ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಅವರನ್ನು ಕಳೆದ ಏಪ್ರಿಲ್‌ನಲ್ಲಿ ಪುಲಿಕೇಶಿ ನಗರದ ಸಂಗೀತಾ ಮೊಬೈಲ್‌ ಶೋ ರೂಮ್‌ಗೆ ಕರೆದುಕೊಂಡು ಹೋಗಿರುವ ಗುಲ್ಜರ್‌ ಬಾನು, ಮಹಮದ್‌ ಇಮ್ರಾನ್‌ ಎಂಬಾತನ ಪರಿಚಯ ಮಾಡಿಸಿದ್ದಾಳೆ.

ಬಳಿಕ ಮಹಮದ್‌ ಇಮ್ರಾನ್‌ ಸ್ಕೀಂ ಬಗ್ಗೆ ವಿವರಿಸಿ, ನಯೀಮ್‌ ತಾಜ್‌ ಅವರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಪಡೆದುಕೊಂಡಿದ್ದಾನೆ. ಬಳಿಕ ಆ ದಾಖಲೆಗಳನ್ನು ಸಂಗೀತಾ ಶೋ ರೂಮ್‌ನ ಮ್ಯಾನೇಜರ್‌ ಕಾರ್ತಿಕ್‌ ಹಾಗೂ ಸಿಸ್ಟಮ್‌ ಆಪರೇಟರ್‌ ಮುಜಾಹಿದ್‌ಗೆ ಕೊಡಲಾಗಿದೆ. ಈ ವೇಳೆ ಈ ಇಬ್ಬರು ನಯೀಮ್‌ ಅವರ ಸಹಿ ಪಡೆದು ಮೊಬೈಲ್‌ಗೆ ಓಟಿಪಿ ಸಂಖ್ಯೆ ಕಳುಹಿಸಿದ್ದಾರೆ. ಬಳಿಕ ಮೊಬೈಲ್‌ನಲ್ಲಿ ಆಕೆಯ ಫೋಟೋ ತೆಗೆದುಕೊಂಡು ಸ್ಕೀಂಗೆ ಲಾಗಿನ್‌ ಆಗಿರುವುದಾಗಿ ತಿಳಿಸಿದ್ದಾರೆ. ನೀವು ಸ್ಕೀಂನ ಗ್ರಾಹಕರಾಗಿರುವುದಾಗಿ ನಯೀಮ್‌ ತಾಜ್‌ಗೆ ತಿಳಿಸಿ 1 ಸಾವಿರವನ್ನು ಫೋನ್‌ ಪೇ(Phone Pay) ಮೂಲಕ ಕಳುಹಿಸಿದ್ದಾರೆ. ಇದೇ ರೀತಿ ನೀವು ಬೇರೆಯವರನ್ನು ಕರೆದುಕೊಂಡು ಬಂದು ಗ್ರಾಹಕರಾಗಿ ಮಾಡಿದರೆ ಹೆಚ್ಚಿನ ಹಣ ಸಿಗಲಿದೆ ಎಂದು ಹೇಳಿ ಕಳುಹಿಸಿದ್ದಾರೆ.

Fraud: ಸರ್ಕಾರಿ ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ವಂಚನೆ..!

ಮೊಬೈಲ್‌, ಬೈಕ್‌ ಶೋ ರೂಮ್‌ನಲ್ಲಿ ಲಾಗಿನ್‌

ಕೆಲ ದಿನಗಳ ಬಳಿಕ ಮಹಮದ್‌ ಜೈನ್‌ ಹಾಗೂ ಗುಲ್ಜರ್‌ ಬಾನು ಅವರು ನಯೀಮ್‌ ತಾಜ್‌ ಅವರನ್ನು ಆರ್‌.ಟಿ.ನಗರದ ಆರ್ಯನ್‌ ಬೈಕ್‌ ಶೋ ರೂಮ್‌ಗೆ ಕರೆದುಕೊಂಡು ಹೋಗಿ ಮಾಲೀಕ ಹಫೀಜ್‌ನನ್ನು ಪರಿಚಯಿಸಿದ್ದಾರೆ. ಇಲ್ಲಿಯೂ ಸಹ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಪಡೆದು ಮೊಬೈಲ್‌ಗೆ ಓಟಿಪಿ(OTP) ಕಳುಹಿಸಿ ಲಾಗಿನ್‌ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದ್ದಾರೆ. ಇದೇ ರೀತಿ ಆರ್‌.ಟಿ.ನಗರ ಪಾಪುಲರ್‌ ಮೋಟ​ರ್ಸ್‌ ಶೋ ರೂಮ್‌ಗೆ ಕರೆದುಕೊಂಡು ಹೋಗಿ ಮಾಲೀಕ ಮನ್ಸೂರ್‌ನನ್ನು ಪರಿಚಯಿಸಿ ಲಾಗಿನ್‌ ಪ್ರಕ್ರಿಯೆ ಮುಗಿಸಿದ್ದಾರೆ. ಬೇರೆಯವನ್ನು ಕರೆತಂದು ಹೀಗೆ ಲಾಗಿನ್‌ ಮಾಡಿದರೆ ಹೆಚ್ಚಿನ ಹಣ ನೀಡುವುದಾಗಿ ಹೇಳಿದ್ದಾರೆ.

ಇವರ ಮಾತಿನಂತೆ ನಯೀಮ್‌ ತಾಜ್‌ ಅವರು ಸಂಬಂಧಿಕರು, ಪರಿಚಯಸ್ಥರು ಸೇರಿದಂತೆ ಸುಮಾರು 24 ಮಂದಿಯನ್ನು ಸಂಗೀತಾ ಮೊಬೈಲ್‌ ಶೋ ರೂಮ್‌ ಹಾಗೂ 23 ಮಂದಿಯನ್ನು ಆರ್‌.ಟಿ.ನಗರದ ಆರ್ಯನ್‌ ಮೋಟ​ರ್‍ಸ್ ಹಾಗೂ ಪಾಪುಲರ್‌ ಬೈಕ್‌ ಶೋ ರೂಮ್‌ಗೆ ಕರೆದೊಯ್ದು ಸ್ಕೀಂನ ಗ್ರಾಹಕರಾಗಿ ಮಾಡಿದ್ದಾರೆ. ನಯೀಮ್‌ ತಾಜ್‌ ಅವರನ್ನು ಸ್ಕೀಂಗೆ ಸೇರಿಸಿದ್ದ ಗುಲ್ಜರ್‌ ಬಾನು ಈ ಹಿಂದೆ 9 ಜನರನ್ನು ಗ್ರಾಹಕರನ್ನಾಗಿ ಮಾಡಿದ್ದಾರೆ.

ಇಎಂಐ ಕಟ್ಟುವಂತೆ ಬ್ಯಾಂಕ್‌ಗಳಿಂದ ಕರೆ

ಈ ಎಲ್ಲ ಬೆಳವಣಿಗೆ ಬಳಿಕ ವಿವಿಧ ಬ್ಯಾಂಕ್‌ಗಳಿಂದ ಇಎಂಐ ಪಾವತಿಸುವಂತೆ ನಯೀಮ್‌ ತಾಜ್‌ ಸೇರಿದಂತೆ ಅವರು ಸ್ಕೀಂಗೆ ಸೇರ್ಪಡೆ ಮಾಡಿದ್ದ ಇತರರಿಗೆ ಕರೆಗಳು ಬರಲಾರಂಭಿಸಿವೆ. ಈ ವೇಳೆ ಸ್ಕೀಂ ಬಗ್ಗೆ ಅನುಮಾನಗೊಂಡು ಬ್ಯಾಂಕ್‌ನವರನ್ನು ವಿಚಾರಿಸಿದಾಗ, ನಿಮ್ಮ ಹೆಸರಿನಲ್ಲಿ ಮೊಬೈಲ್‌(Mobile), ಬೈಕ್‌ಗಳನ್ನು(Bike) ಖರೀದಿ ಮಾಡಲಾಗಿದೆ. ಹೀಗಾಗಿ ಪ್ರತಿ ತಿಂಗಳು ಇಎಂಐ(EMI) ಕಟ್ಟುವಂತೆ ಹೇಳಿದ್ದಾರೆ. ಈ ಬಗ್ಗೆ ಮಹಮದ್‌ ಇಮ್ರಾನ್‌ನನ್ನು ಕೇಳಿದಾಗ, ನಾನು ದುಬೈಗೆ(Dubai) ಹೋಗುತ್ತಿರುವುದಾಗಿ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ(Accused) ಬಂಧನಕ್ಕೆ(Arrest) ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!