ಫೇಸ್‌ಬುಕ್‌ನಲ್ಲಿ ಪರಿಚಿತನಾದ ಯುವಕನಿಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಗರಕ್ಕೆ ಕರೆಸಿಕೊಂಡು ಬಳಿಕ ಬೆದರಿಸಿ 6.18 ಲಕ್ಷ ಹಾಕಿಸಿಕೊಂಡು ವಂಚಿಸಿದ್ದ ಹೊರರಾಜ್ಯದ ನಾಲ್ವರು ಸುಲಿಗೆಕೋರರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.04): ಫೇಸ್‌ಬುಕ್‌ನಲ್ಲಿ ಪರಿಚಿತನಾದ ಯುವಕನಿಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಗರಕ್ಕೆ ಕರೆಸಿಕೊಂಡು ಬಳಿಕ ಬೆದರಿಸಿ 6.18 ಲಕ್ಷ ಹಾಕಿಸಿಕೊಂಡು ವಂಚಿಸಿದ್ದ ಹೊರರಾಜ್ಯದ ನಾಲ್ವರು ಸುಲಿಗೆಕೋರರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ಮೂಲದ ಮಲ್ಲು ಶಿವಶಂಕರ್ ರೆಡ್ಡಿ ಅಲಿಯಾಸ್ ಗೋಪಿಚಂದ್(26), ಗುಂಜ ಮಂಗರಾವ್(35), ಶೇಖ್ ಶಹಬಾಷಿ(30), ಎನ್‌ಟಿಆರ್ ಜಿಲ್ಲೆಯ ಮಹೇಶ್(21) ಬಂಧಿತರು. ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡಿದ್ದ .5.95 ಲಕ್ಷ ಫ್ರೀಜ್ ಮಾಡಲಾಗಿದೆ.
ಆರೋಪಿಗಳು ಜ.11ರಂದು ತೆಲಂಗಾಣ ಮೂಲದ ಬಿಇ ಪದವೀಧರ ಪ್ರದೀಪ್ ಅಸಂವರ್‌ಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಬಳಿಕ ಬೆದರಿಸಿ ಹಣ ಹಾಕಿಸಿಕೊಂಡು ವಂಚಿಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿನಿ ಆತ್ಮಹತ್ಯೆ
ಏನಿದು ಪ್ರಕರಣ?: ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಉದ್ಯೋಗ ಜಾಹೀರಾತು ಹಾಕಿದ್ದ. ಈ ಜಾಹೀರಾತು ನೋಡಿದ ಬಿಇ ಪದವಿಧರ ಪ್ರದೀಪ್, ಜಾಹೀರಾತಿನಲ್ಲಿದ್ದ ಸಂಪರ್ಕ ಸಂಖ್ಯೆಗೆ ಸಂಪರ್ಕಿಸಿ ಶಿವಶಂಕರ್ ರೆಡ್ಡಿ ಬಳಿ ಕೆಲಸದ ಬಗ್ಗೆ ವಿಚಾರಿಸಿದ್ದ. ಈ ವೇಳೆ ಆರೋಪಿ ಶಿವಶಂಕರ್ ರೆಡ್ಡಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಖಾಲಿಯಿದೆ ಎಂದು ಮಾಹಿತಿ ನೀಡಿದ್ದ. ಅದರಂತೆ ಜ.11ರಂದು ಕಂಪನಿಯಲ್ಲಿ ಸಂದರ್ಶನವಿರುವುದಾಗಿ ತಿಳಿಸಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದ. ಈತನ ಮಾತು ನಂಬಿದ ಪ್ರದೀಪ್, ಜ.11ರಂದು ಮುಂಜಾನೆ ಹೆಬ್ಬಾಳ ಕೆರೆ ಬಳಿಯ ಕಾರ್ ಶೋರೂಮ್ ಬಳಿ ಬಂದಿದ್ದ.
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆದರಿಕೆ: ಆರೋಪಿಗಳು ಸ್ವಿಫ್ಟ್‌ಕಾರಿನಲ್ಲಿ ಪ್ರದೀಪ್‌ನನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದರು. ಏರ್‌ಪೋರ್ಚ್ ರಸ್ತೆಯಲ್ಲಿ ಕಂಪನಿಯ ಮ್ಯಾನೇಜರ್ ಭೇಟಿ ಮಾಡಿಸುವುದಾಗಿ ಯಲಹಂಕ ಕಡೆಗೆ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಬಳಿಕ ಮಾರ್ಗ ಮಧ್ಯೆ ಪ್ರದೀಪ್‌ಗೆ ತಿಂಡಿ ಕೊಡಿಸಿ ಸುತ್ತಾಡಿಸಿ ಬಳಿಕ ಯಲಹಂಕ ತಾಲೂಕಿನ ಕುದುರೆಗೆರೆ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಡಾಕ್ಯುಮೆಂಟ್ ಜಾಜ್‌ರ್ .30 ಸಾವಿರ ಕೊಡುವಂತೆ ಪ್ರದೀಪ್‌ಗೆ ಕೇಳಿದ್ದಾರೆ. ಈ ವೇಳೆ ಪ್ರದೀಪ್ ಅನುಮಾನಗೊಂಡು ಹಣ ನೀಡಲು ಹಿಂದೇಟು ಹಾಕಿದ್ದಾನೆ. ಈ ವೇಳೆ ಆರೋಪಿಗಳು ಪ್ರದೀಪ್‌ನನ್ನು ಬೆದರಿಸಿದ್ದಾರೆ. ಫೋನ್ ಪೇ ಮೂಲಕ ಹಣ ಕಳುಹಿಸುವಂತೆ ಸೂಚಿಸಿದ್ದಾರೆ. ಫೋನ್ ಪೇ ವರ್ಕ್ ಆಗದ್ದಕ್ಕೆ ಪ್ರದೀಪ್‌ನ ಎಟಿಎಂ ಕಾರ್ಡ್ ಕಿತ್ತುಕೊಂಡು ಪಿನ್ ಪಡೆದು ಸಾದಗಹಳ್ಳಿ ಗೇಟ್ ಬಳಿ ಎಟಿಎಂ ಕೇಂದ್ರದಲ್ಲಿ .30 ಸಾವಿರ ಡ್ರಾ ಮಾಡಿದ್ದಾರೆ.
ಸ್ನೇಹಿತರಿಗೆ ಸುಳ್ಳು ಹೇಳಿಸಿ ಹಣ ವರ್ಗಾ: ಆರೋಪಿಗಳು, ‘ನಿನ್ನ ಸ್ನೇಹಿತರಿಗೆ ಕರೆ ಮಾಡಿ, ನನಗೆ ಕೆಲಸ ಸಿಕ್ಕಿದೆ ಎಂದು ಸುಳ್ಳು ಹೇಳು. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಖಾಲಿಯಿದ್ದು, ನಿಮಗೂ ಕೆಲಸ ಸಿಗಲಿದೆ. ಮೊದಲಿಗೆ ಡಾಕ್ಯುಮೆಂಟ್ ಚಾರ್ಜ್ ಕಳುಹಿಸುವಂತೆ ಕೇಳು’ ಎಂದು ಧಮಕಿ ಹಾಕಿದ್ದಾರೆ. ಗಾಬರಿಗೊಂಡು ಪ್ರದೀಪ್ ಆರೋಪಿಗಳು ಹೇಳಿದಂತೆ ತನ್ನ ಕೆಲ ನಿರುದ್ಯೋಗಿ ಸ್ನೇಹಿತರನ್ನು ಸಂಪರ್ಕಿಸಿ ಫೋನ್ ಪೇ, ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಾನೆ. ಬಳಿಕ ಆರೋಪಿಗಳೇ ಪ್ರದೀಪ್‌ನ ಮೊಬೈಲ್ ಕಸಿದುಕೊಂಡು ಆತನ ಕೆಲ ಸ್ನೇಹಿತರಿಗೆ ಕೆಲಸದ ವಿಚಾರ ತಿಳಿಸಿ ಹಣ ಹಾಕಿಸಿಕೊಳ್ಳುತ್ತಾರೆ. ಹೀಗೆ ಆರೋಪಿಗಳು ಒಟ್ಟು .6.18 ಲಕ್ಷ ಪಡೆಯುತ್ತಾರೆ. ಬಳಿಕ ರಾತ್ರಿ 8.30ರ ಸುಮಾರಿಗೆ ಪ್ರದೀಪ್‌ನನ್ನು ಡೆಕಾತ್ಲಾನ್ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಜ್ಯೂನಿಯರ್ ಆರ್ಟಿಸ್ಟ್ ಸಾವು: ಪೋಷಕರ ಆರೋಪ?
ಆನ್‌ಲೈನ್ ಬೆಟ್ಟಿಂಗ್, ಶೋಕಿಗಾಗಿ ವಂಚನೆ: ಬಂಧಿತ ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಬಿಇ ಪದವಿಧರನಾಗಿದ್ದು, ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡು ಊರು ಸೇರಿದ್ದ. ಈ ವೇಳೆ ಊರಿನಲ್ಲಿ ಇಸ್ಪೀಟ್ ಆಡುವಾಗ ಪಕ್ಕದ ಊರಿನ ನಿವಾಸಿ ಆರೋಪಿ ಗುಂಜ ಮಂಗರಾವ್ ಪರಿಚಿತನಾಗಿದ್ದ. ಈತನಿಗೂ ಯಾವುದೇ ಕೆಲಸವಿರಲಿಲ್ಲ. ಈತನಿಗೆ ಆರೋಪಿಗಳಾದ ಬಿಟೆಕ್ ವಿದ್ಯಾರ್ಥಿ ಮಹೇಶ್ ಮತ್ತು ಶೇಖ್ ಶಹಬಾಷಿ ಸ್ನೇಹಿತರಾಗಿದ್ದರು. ಬಳಿಕ ನಾಲ್ವರು ಪರಸ್ಪರ ಸ್ನೇಹಿತರಾಗಿ ಆನ್‌ಲೈನ್ ಬೆಟ್ಟಿಂಗ್ ಹಾಗೂ ಶೋಕಿಗಾಗಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ವಂಚನೆ ಎಸಗಲು ಯೋಜಿಸಿದ್ದರು.