ವಾಹನ ಸಾಗಿಸುವುದಾಗಿ ಹಣ ಪಡೆದು ವಂಚನೆ: ಖತರ್ನಾಕ್‌ ಖದೀಮರ ಸೆರೆ

By Kannadaprabha NewsFirst Published Jul 21, 2022, 3:30 AM IST
Highlights

ನಾಲ್ವರು ಅಂತರ್‌ ರಾಜ್ಯ ವಂಚಕರನ್ನು ಬಂಧಿಸಿದ ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು
 

ಬೆಂಗಳೂರು(ಜು.21):  ದೂರದ ಊರುಗಳಿಂದ ವಾಹನಗಳನ್ನು ಸಾಗಿಸುವುದಾಗಿ ಪ್ರತಿಷ್ಠಿತ ಕೊರಿಯರ್‌ ಸಂಸ್ಥೆಗಳ ಹೆಸರಿನಲ್ಲಿ ಗೂಗಲ್‌ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿ ಹಣ ಪಡೆದು ವಂಚಿಸುತ್ತಿದ್ದ ನಾಲ್ವರು ಅಂತರ್‌ ರಾಜ್ಯ ವಂಚಕರನ್ನು ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಪೂರನ್‌ ಸಿಂಗ್‌ ಚೌವ್ಹಾಣ್‌(25), ನರೇಂದ್ರ(32), ಧರ್ಮೇಂದರ್‌(21) ಹಾಗೂ ಹರಿಯಾಣ ಮೂಲದ ಧರ್ಮವೀರ್‌(24) ಬಂಧಿತರು.

ಆರೋಪಿಗಳು ಹೆಸರಾಂತ ಕೋರಿಯರ್‌ ಸಂಸ್ಥೆಗಳಾದ ಗತಿ, ವಿಆರ್‌ಎಲ್‌ ಮೊದಲಾದ ಸಂಸ್ಥೆಗಳ ಹೆಸರಿನಲ್ಲಿ ಗೂಗಲ್‌ ವೆಬ್‌ಪೇಜ್‌ನಲ್ಲಿ ಜಾಹೀರಾತು ನೀಡುತ್ತಿದ್ದರು. ದೂರುದಾರರು ಬೆಂಗಳೂರಿನಿಂದ ಹುಬ್ಬಳ್ಳಿಗೆ ತಮ್ಮ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಸಾಗಿಸಲು ಗೂಗಲ್‌ನಲ್ಲಿ ಹುಡುಕುವಾಗ ಮೊಬೈಲ್‌ ಸಂಖ್ಯೆಯೊಂದು ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ದ್ವಿಚಕ್ರ ವಾಹನ ಸಾಗಿಸಲು .4 ಸಾವಿರ ಕೇಳಿದ್ದಾರೆ. ದೂರುದಾರರು ಹಣ ನೀಡಿದ್ದಾರೆ. ಆರೋಪಿಗಳು ಮನೆಗೆ ಬಂದ ರಾಯಲ್‌ ಎನ್‌ಫೀಲ್ಡ್‌ ಪ್ಯಾಕ್‌ ಮಾಡಿಕೊಂಡು ತೆರಳಿದ್ದರು.

ಸಿಡಿಲು ಬಡಿದ ತಂಬಿಗೆ ಹೆಸರಿನಲ್ಲಿ ವಂಚನೆಗೆ ಯತ್ನ: ಐವರು ಆರೋಪಿಗಳ ಬಂಧನ

ಆದರೆ, ಹೇಳಿದ ಸಮಯಕ್ಕೆ ದ್ವಿಚಕ್ರ ವಾಹನ ಡೆಲಿವರಿ ನೀಡಿಲ್ಲ. ಇದನ್ನು ಪ್ರಶ್ನಿಸಿದಾಗ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸಿದ್ದರು. ಹಣ ನೀಡಿದರೂ ಪದೇ ಪದೇ ಹಣ ಕೇಳುತ್ತಿದ್ದರು. 20 ದಿನ ಕಳೆದರೂ ಆರೋಪಿಗಳು ದ್ವಿಚಕ್ರ ವಾಹನ ಡೆಲಿವರಿ ನೀಡದೆ ಆಟವಾಡಿಸುತ್ತಿದ್ದರು. ಈಶಾನ್ಯ ಸೈಬರ್‌ ಕ್ರೈಂ ಠಾಣೆಗೆ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ಹುಡುಕುವಾಗ ಎಚ್ಚರ: ಅಧಿಕಾರಿಗಳು

ಸಾರ್ವಜನಿಕರು ಗೂಗಲ್‌ನಲ್ಲಿ ಯಾವುದೇ ಮಾಹಿತಿ ಹುಡುಕುವಾಗ ಎಚ್ಚರ ವಹಿಸಬೇಕು. ವಂಚಕರು ವೆಬ್‌ಸೈಟ್‌ಗಳಲ್ಲಿ ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ವಂಚಿಸುವ ಸಾಧ್ಯತೆಯಿದೆ. ಗೂಗಲ್‌ನಲ್ಲಿ ಲಭ್ಯವಾಗುವ ಎಲ್ಲಾ ಮಾಹಿತಿ ಸತ್ಯವಾಗಿರುವುದಿಲ್ಲ. ಹೀಗಾಗಿ ಸಾರ್ವಜನಿಕರು ಯಾವುದೇ ಮಾಹಿತಿ ಪಡೆಯುವಾಗ ಸಂಬಂಧಪಟ್ಟಅಸಲಿ ವೆಬ್‌ಸೈಟ್‌ ಮೂಲಕವೇ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
 

click me!