ಕುಣಿಗಲ್‌ ಕಾಡಲ್ಲಿ ಶ್ರೀಗಂಧ ಕದ್ದು ಬೆಂಗ್ಳೂರಲ್ಲಿ ಮಾರಲೆತ್ನ: ನಾಲ್ವರ ಬಂಧನ

By Kannadaprabha NewsFirst Published Jan 10, 2023, 9:44 AM IST
Highlights

ಆರೋಪಿಗಳಿಂದ 16.50 ಲಕ್ಷ ಮೌಲ್ಯದ 330 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ಜಪ್ತಿ.

ಬೆಂಗಳೂರು(ಜ.10):  ಮೀಸಲು ಅರಣ್ಯ ಪ್ರದೇಶದಿಂದ ಶ್ರೀಗಂಧದ ಮರಗಳನ್ನು ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮಲಾನಗರ ನಿವಾಸಿ ಪೊನ್ನರಾಜ್‌ ಅಲಿಯಾಸ್‌ ಪೊನ್ನ(35), ಲಗ್ಗೆರೆ ಪ್ರೇಮನಗರ ನಿವಾಸಿ ಧೃವಕುಮಾರ್‌(29), ಮೀನಾಕ್ಷಿ ನಗರದ ಸಿದ್ದಪ್ಪ(27) ಹಾಗೂ ಮಾಗಡಿಯ ಹರೀಶ್‌(34) ಬಂಧಿತರು. ಆರೋಪಿಗಳಿಂದ 16.50 ಲಕ್ಷ ಮೌಲ್ಯದ 330 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ.6ರಂದು ಸಂಜೆ 6.30ರ ಸುಮಾರಿಗೆ ಕಾಮಾಕ್ಷಿಪಾಳ್ಯದ ಕಾವೇರಿಪುರ ಗುಡ್ಡದ ಬಳಿ ಗೂಡ್‌್ಸ ವಾಹನದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಇರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎಎಸ್‌ಐ ಶ್ರೀನಿವಾಸ್‌ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಮಾಲು ಸಹಿತ ಆರೋಪಿಗಳಾದ ಪೊನ್ನರಾಜ್‌ ಮತ್ತು ಧೃವಕುಮಾರ್‌ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಸಿದ್ದಪ್ಪ ಮತ್ತು ಹರೀಶ್‌ನನ್ನು ಬಂಧಿಸಲಾಗಿದೆ.

Yashwanthpur Railway Station: ಡ್ರಮ್‌ನಲ್ಲಿ ಯುವತಿ ಶವ ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು

ಆರೋಪಿಗಳು ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟಕ್ಕೆ ಬೆಂಗಳೂರಿಗೆ ತಂದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಯಾರಿಗೆ ಮಾರಾಟ ಮಾಡಲು ತಂದಿದ್ದರು? ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಹೆಚ್ಚಿನ ವಿಚಾರಣೆ ಬಳಿಕ ಬಯಲಾಗಲಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!