ಸ್ಯಾಂಟ್ರೋ ರವಿ ಪತ್ನಿ ಬಂಧಿಸಿದ್ದ ಇನ್‌ಸ್ಟೆಕ್ಟರ್‌ಗೆ ಕುತ್ತು..!

By Kannadaprabha NewsFirst Published Jan 10, 2023, 6:32 AM IST
Highlights

ದರೋಡೆ ಕೇಸ್‌ನಲ್ಲಿ ರವಿಯ ಪತ್ನಿಯ ವಿರುದ್ಧ ಸುಳ್ಳು ಕೇಸ್‌ ಹಾಕಿದ್ದ ಜೈಲಿಗೆ ತಳ್ಳಿದ್ದ ಕಾಟನ್‌ಪೇಟೆ ಇನ್‌ಸ್ಪೆಕ್ಟರ್‌, ಡಿಸಿಪಿ ತನಿಖೆಯಲ್ಲಿ ಇನ್‌ಸ್ಪೆಕ್ಟರ್‌ನ ಕಳ್ಳಾಟ ಬಯಲು, ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮಕ್ಕೆ ಡಿಜಿಪಿಗೆ ಡಿಸಿಪಿ ಶಿಫಾರಸು

ಬೆಂಗಳೂರು(ಜ.10):  ದರೋಡೆ ಪ್ರಕರಣದಲ್ಲಿ ಪಾತ್ರವಿಲ್ಲದಿದ್ದರೂ ಕುಖ್ಯಾತ ವಂಚಕ ಸ್ಯಾಂಟ್ರೋ ರವಿ ಪತ್ನಿ ಹಾಗೂ ಆಕೆಯ ಸೋದರ ಸಂಬಂಧಿ ಮಹಿಳೆಯನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳುಹಿಸಿದ ಆರೋಪದ ಮೇರೆಗೆ ಶಿಸ್ತು ಕ್ರಮ ಜರುಗಿಸುವಂತೆ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್‌ ವಿರುದ್ಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ವರದಿ ಸಲ್ಲಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಪ್ರವೀಣ್‌ ವಿರುದ್ಧ ಆರೋಪ ಬಂದಿದ್ದು, ಕೆಲ ದಿನಗಳ ಹಿಂದೆ ಕಾಟನ್‌ಪೇಟೆ ಠಾಣೆಯಿಂದ ರಾಜ್ಯ ಗುಪ್ತದಳಕ್ಕೆ ಅವರು ವರ್ಗಾವಣೆಯಾಗಿದ್ದಾರೆ. ಆದರೆ ಗುಪ್ತದಳದಲ್ಲಿ ಅವರು ಇನ್ನೂ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಇತ್ತೀಚೆಗೆ ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ವಂಚನೆ ದೂರು ದಾಖಲಿಸಿದ್ದ ಆತನ ಪತ್ನಿ, ಕಳೆದ ನವೆಂಬರ್‌ನಲ್ಲಿ ತನ್ನ ಮೇಲೆ ರವಿ ಕುಮ್ಮಕ್ಕಿನಿಂದ ಪೊಲೀಸರು ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಬಂಧಿಸಿದ್ದರು ಎಂದು ಆರೋಪ ಮಾಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಅವರು, ಕೂಡಲೇ ಸ್ವಯಂಪ್ರೇರಿತವಾಗಿ ರವಿ ಪತ್ನಿ ಮೇಲೆ ದಾಖಲಾಗಿದ್ದ ದರೋಡೆ ಪ್ರಕರಣವನ್ನು ಅವಲೋಕಿಸಿದಾಗ ಇನ್‌ಸ್ಪೆಕ್ಟರ್‌ ಕಳ್ಳಾಟ ಬಯಲಾಗಿದೆ. ಈ ಬಗ್ಗೆ ನಗರ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರಿಗೆ ಡಿಸಿಪಿ ವರದಿ ಸಲ್ಲಿಸಿದರು. ಕರ್ತವ್ಯ ಲೋಪದ ವೆಸಗಿದ ಪಿಐ ಪ್ರವೀಣ್‌ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಡಿಜಿಪಿ ಅವರಿಗೆ ಆಯುಕ್ತರು ಶಿಫಾರಸು ಮಾಡಿದ್ದಾರೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸ್ಯಾಂಟ್ರೋ ರವಿ ಬಗ್ಗೆ ಆಳವಾದ ತನಿ​ಖೆಗೆ ಸೂಚ​ನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ದರೋಡೆ ಕೇಸಲ್ಲಿ ರವಿ ಪತ್ನಿ ಫಿಟ್‌

2022ರ ನವೆಂಬರ್‌ನಲ್ಲಿ ಸ್ಯಾಂಟ್ರೋ ರವಿ ಪತ್ನಿ ಬಳಿ .5 ಲಕ್ಷ ಸಾಲವನ್ನು ಅವರ ಬಂಧುವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಪ್ರಕಾಶ್‌ ಕೇಳಿದ್ದರು. ಆಗ ಮೂರು ತಿಂಗಳೊಳಗೆ ಹಣ ಮರಳಿಸುವಂತೆ ಹೇಳಿದ ಆಕೆ, ‘.5 ಲಕ್ಷ ನೀಡುತ್ತೇನೆ’ ಎಂದು ಹೇಳಿ ಮೆಜೆಸ್ಟಿಕ್‌ ಸಮೀಪ ಖೋಡೆ ಸರ್ಕಲ್‌ ಬಳಿಗೆ ಪ್ರಕಾಶ್‌ರನ್ನು ಕರೆಸಿಕೊಂಡಿದ್ದರು. ನ.23ರಂದು ರವಿ ಪತ್ನಿ ಭೇಟಿಗೆ ತಮ್ಮ ಗೆಳೆಯ ಮುನಿರಾಜು ಜತೆ ಪ್ರಕಾಶ್‌ ತೆರಳಿದ್ದರು. ಅಂದು ಮೈಸೂರಿನಿಂದ ತಮ್ಮ ಸೋದರ ಸಂಬಂಧಿಯ ಮಗಳು ಹಾಗೂ ಶೇಕ್‌ ಎಂಬಾತನ ಜತೆ ರವಿ ಪತ್ನಿ ಬಂದು ಭೇಟಿಯಾಗಿದ್ದರು.

ಸ್ಯಾಂಟ್ರೋ ರವಿ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಬಿ.ಎಸ್‌.ಯಡಿಯೂರಪ್ಪ

ಹಣದ ಭದ್ರತೆಗೆ ಸಹಿ ಮಾಡಿದ ಬ್ಯಾಂಕ್‌ ಚೆಕ್‌ ನೀಡುವಂತೆ ರವಿ ಪತ್ನಿ ಪ್ರಕಾಶ್‌ಗೆ ಸೂಚಿಸಿದ್ದರು. ಮೊದಲು ಹಣ ಕೊಡಿ, ಆಮೇಲೆ ಚೆಕ್‌ ಕೊಡುತ್ತೇನೆ ಎಂದು ಪ್ರಕಾಶ್‌ ಹೇಳಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಹಂತದಲ್ಲಿ ಕೆರಳಿದ ರವಿ ಪತ್ನಿ, ಪ್ರಕಾಶ್‌ಗೆ ಚಾಕುವಿನಿಂದ ಬೆದರಿಸಿ 13 ಗ್ರಾಂ ಚಿನ್ನದ ಸರ ಹಾಗೂ .9 ಸಾವಿರ ಕಸಿದುಕೊಂಡಿದ್ದರು. ಬಳಿಕ ಪ್ರಕಾಶ್‌ ಕೈ ಹಾಗೂ ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಘಟನೆ ಸಂಬಂಧ ಪ್ರಕಾಶ್‌ ದೂರು ಆಧರಿಸಿ ಕಾಟನ್‌ಪೇಟೆ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಯಿತು. ಎಫ್‌ಐಆರ್‌ನಲ್ಲಿ ರವಿ ಪತ್ನಿ ಮೊದಲ ಆರೋಪಿಯಾಗಿದ್ದರೆ, ಎರಡನೇ ಆರೋಪಿ ಆಕೆಯ ಸೋದರ ಸಂಬಂಧಿಯ ಪುತ್ರಿಯಾಗಿದ್ದಳು. ಮೂರನೇ ಆರೋಪಿ ಜೆ.ಜೆ.ನಗರದ ಶೇಕ್‌ ಎಂದು ಉಲ್ಲೇಖವಾಗಿತ್ತು. ಆನಂತರ ಪ್ರಕರಣದಲ್ಲಿ ಮೂವರನ್ನು ಬಂಧಿಸಿ ಪ್ರವೀಣ್‌ ಜೈಲಿಗೆ ಕಳುಹಿಸಿದ್ದರು. 20 ದಿನಗಳ ಬಳಿಕ ಜಾಮೀನು ಪಡೆದು ರವಿ ಪತ್ನಿ ಹಾಗೂ ಆಕೆಯ ಸಂಬಂಧಿ ಬಿಡುಗಡೆಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ರವಿ ಕುಮ್ಮಕ್ಕಿನಿಂದ ಪ್ರಕರಣ

ಈ ದರೋಡೆ ಕೃತ್ಯ ನಡೆದಿರುವುದು ನಿಜ. ಆದರೆ ಪ್ರಕರಣದಲ್ಲಿ ರವಿ ಪತ್ನಿ ಹಾಗೂ ಆಕೆಯ ಸಂಬಂಧಿ ಪಾತ್ರವಿರಲಿಲ್ಲ. ಪ್ರಕರಣದ ಮೂರನೇ ಆರೋಪಿ ಶೇಕ್‌ ಜತೆ ಸ್ಯಾಂಟ್ರೋ ರವಿಗೆ ಸ್ನೇಹವಿತ್ತು. ತನ್ನ ‘ದಂಧೆ’ಯ ವಿರುದ್ಧ ತಿರುಗಿ ಬಿದ್ದಿದ್ದ ಪತ್ನಿಗೆ ಪಾಠ ಕಲಿಸಲು ರವಿ, ಸಂಚು ರೂಪಿಸಿ ದರೋಡೆ ಪ್ರಕರಣದಲ್ಲಿ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್‌ ಪ್ರವೀಣ್‌ ಮೇಲೆ ಒತ್ತಡ ಹೇರಿ ಪತ್ನಿ ಹಾಗೂ ಆಕೆಯ ಸಂಬಂಧಿ ಮಹಿಳೆಯನ್ನು ಸಿಲುಕಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಟನ್‌ಪೇಟೆ ಠಾಣೆಗೆ ಪೋಸ್ಟಿಂಗ್‌ ಪಡೆಯಲು ಪ್ರವೀಣ್‌ಗೆ ರವಿ ನೆರವಾಗಿದ್ದ. ಆ ಠಾಣೆಯಿಂದ ಒಂದು ವರ್ಷದ ಅವಧಿ ಪೂರೈಸಿದ ಕಾರಣಕ್ಕೆ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಪ್ರವೀಣ್‌, ಮತ್ತೆ ಬೆಂಗಳೂರಿನ ಬೇರೊಂದು ಠಾಣೆಗೆ ರವಿ ಮೂಲಕ ಯತ್ನಿಸಿದ್ದ. ಹೀಗಾಗಿ ರವಿ ಮಾತಿನಂತೆ ಇನ್‌ಸ್ಪೆಕ್ಟರ್‌ ಪ್ರಕರಣ ದಾಖಲಿಸಿರುವುದು ಇಲಾಖಾ ಮಟ್ಟದ ವಿಚಾರಣೆ ವೇಳೆ ಬಯಲಾಗಿದೆ ಎಂದು ಮೂಲಗಳು ಹೇಳಿವೆ.

click me!