Bengaluru: ಬೆಟ್ಟಿಂಗ್‌ ಬೆದರಿಕೆಯೊಡ್ಡಿ ಸುಲಿಗೆ: ಐವರು ಪೊಲೀಸರು ಅಮಾನತು

By Kannadaprabha News  |  First Published Oct 9, 2022, 1:26 PM IST

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿರುವುದಾಗಿ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಬೆದರಿಸಿ ಮಿಲ್ಕ್‌ ಪಾರ್ಲರ್‌ ಮಾಲೀಕನೊಬ್ಬನಿಂದ .1 ಲಕ್ಷ ಸುಲಿಗೆ ಮಾಡಿದ ಆರೋಪದ ಮೇರೆಗೆ ಸದಾಶಿವನಗರ ಠಾಣೆ ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌ಗಳು ಸೇರಿ ಐವರು ಪೊಲೀಸರನ್ನು ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅಮಾನತುಗೊಳಿಸಿದ್ದಾರೆ.


ಬೆಂಗಳೂರು (ಅ.09): ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿರುವುದಾಗಿ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಬೆದರಿಸಿ ಮಿಲ್ಕ್‌ ಪಾರ್ಲರ್‌ ಮಾಲೀಕನೊಬ್ಬನಿಂದ .1 ಲಕ್ಷ ಸುಲಿಗೆ ಮಾಡಿದ ಆರೋಪದ ಮೇರೆಗೆ ಸದಾಶಿವನಗರ ಠಾಣೆ ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌ಗಳು ಸೇರಿ ಐವರು ಪೊಲೀಸರನ್ನು ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅಮಾನತುಗೊಳಿಸಿದ್ದಾರೆ.

ಪಿಎಸ್‌ಐಗಳಾದ ಬಸವರಾಜು, ಮೋಹನ್‌, ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌, ಕಾನ್‌ಸ್ಟೇಬಲ್‌ಗಳಾದ ನಾಗರಾಜ್‌ ಹಾಗೂ ಪರಶುರಾಮ್‌ ಅಮಾನತುಗೊಂಡಿದ್ದು, ಇತ್ತೀಚಿಗೆ ಸಹಕಾರ ನಗರದ ಹಾಲಿನ ವ್ಯಾಪಾರಿಯನ್ನು ವಶಕ್ಕೆ ಪಡೆದು ಬೆದರಿಸಿ ಆರೋಪಿತ ಪೊಲೀಸರು ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಇಲಾಖೆ ಆಂತರಿಕ ಮಟ್ಟದ ವಿಚಾರಣೆ ನಡೆಸಿದ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಅಂತೆಯೇ ತಪ್ಪಿತಸ್ಥ ಪೊಲೀಸರ ತಲೆ ದಂಡವಾಗಿದೆ.

Tap to resize

Latest Videos

Bengaluru: ಚಿಕಿತ್ಸೆಗೆ ಬಂದ ಯುವತಿ ಗುಪ್ತಾಂಗ ಮುಟ್ಟಿ ಕಾಮುಕ ವೈದ್ಯನಿಂದ ವಿಕೃತಿ

3 ಲಕ್ಷಕ್ಕೆ ಬೇಡಿಕೆ ಇಟ್ಟು 1 ಲಕ್ಷ ಸುಲಿಗೆ: ಸೆ.4 ರಂದು ಏಷ್ಯಾಕಪ್‌ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ ಆರೋಪದ ಮೇರೆಗೆ ಸಹಕಾರ ನಗರದ ಮಿಲ್ಕ್‌ ಪಾರ್ಲರ್‌ ಮಾಲೀಕನನ್ನು ಸದಾಶಿವನಗರ ಠಾಣೆ ಪೊಲೀಸರು ವಶಕ್ಕೆ ಪಡೆದರು. ಬಳಿಕ ಪ್ರಕರಣ ದಾಖಲಿಸದೇ ಇರಲು 3 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಆತ 1 ಲಕ್ಷ ಹಣವಿದೆ ಎಂದು ಹೇಳಿದ್ದನು. ಇದಕ್ಕೊಪ್ಪಿದ ಪೊಲೀಸರು, ಆತನಿಂದ 1 ಲಕ್ಷ ವಸೂಲಿ ಮಾಡಿ ಬಿಟ್ಟು ಕಳುಹಿಸಿದ್ದರು.

ಮರುದಿನ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿಅವರಿಗೆ ಸದಾಶಿವನಗರ ಠಾಣೆ ಪೊಲೀಸರ ಸುಲಿಗೆ ಬಗ್ಗೆ ಸಂತ್ರಸ್ತ ದೂರು ಸಲ್ಲಿಸಿದ್ದ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಅವರು, ಸಂತ್ರಸ್ತನನ್ನು ಕರೆದು ಮತ್ತೆ ಪ್ರಶ್ನಿಸಿದಾಗ ಸುಲಿಗೆ ನಡೆದಿರುವುದು ರುಜುವಾತಾಗಿದೆ. ಅಲ್ಲದೆ ಇದಕ್ಕೆ ಪೂರಕವಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ಕೆಲವು ಸಾಂದರ್ಭಿಕ ಪುರಾವೆಗಳು ಲಭ್ಯವಾಗಿವೆ. ಪ್ರಕರಣ ವಿಚಾರಣೆ ಮುಗಿಸಿದ ಡಿಸಿಪಿ ಅವರು, ಆಯುಕ್ತ ಪ್ರತಾಪ್‌ ರೆಡ್ಡಿ ಅವರಿಗೆ ಆರೋಪಿತ ಪೊಲೀಸರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಿದರು. ಈ ವರದಿ ಪರಿಗಣಿಸಿದ ಆಯುಕ್ತರು, ಪೊಲೀಸರನ್ನು ಅಮಾನತುಗೊಳಿಸಿ ಸಿಸಿಬಿ ಡಿಸಿಪಿ ಅವರಿಗೆ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಟ್ಟಿಂಗ್‌ ನಡೆದಿದ್ದರೆ ಎಫ್‌ಐಆರ್‌ ಯಾಕಿಲ್ಲ?: ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಸಹಕಾರ ನಗರದಲ್ಲಿ ಸಂತ್ರಸ್ತ ವ್ಯಕ್ತಿ ನೆಲೆಸಿದ್ದಾನೆ. ತಮ್ಮ ಠಾಣಾ ಸರಹದ್ದು ಮೀರಿ ಆತನ ಪಾರ್ಲರ್‌ ಬಳಿ ತೆರಳಿ ತನಿಖೆ ನಡೆಸಿ ಸದಾಶಿವನಗರ ಠಾಣೆ ಪಿಎಸ್‌ಐಗಳಾದ ಮೋಹನ್‌, ಬಸವರಾಜು, ಎಎಸ್‌ಐ ಹಾಗೂ ಕಾನ್‌ಸ್ಟೇಬಲ್‌ಗಳು ಕರ್ತವ್ಯ ಲೋಪ ಮಾಡಿದ್ದಾರೆ. ಕ್ರಿಕೆಟ್‌ ಬೆಟ್ಟಿಂಗ್‌ ನಡೆದಿದ್ದ ಬಗ್ಗೆ ಮಾಹಿತಿ ಇದ್ದರೆ ಎಫ್‌ಐಆರ್‌ ದಾಖಲಿಸಿ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕಿತ್ತು. ಆದರೆ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ಬಿಟ್ಟು ಕಳುಹಿಸಿದ ಕಾರಣವೇನು, ಕ್ರಿಕೆಟ್‌ ಬೆಟ್ಟಿಂಗ್‌ ನಡೆದಿದೆ ಎಂಬುದಕ್ಕೆ ಆರೋಪಿತ ಸದಾಶಿವನಗರ ಠಾಣೆಯ ಐವರು ಪೊಲೀಸರು ಸೂಕ್ತ ಪುರಾವೆ ನೀಡಿಲ್ಲ ಎಂದು ಡಿಸಿಪಿ ವರದಿಯಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.

Bengaluru: ಮಕ್ಕಳ ಕಳ್ಳನೆಂದು ಭಾವಿಸಿ ಕಾರ್ಮಿಕನ ಬಡಿದು ಕೊಂದರು!

ಪೊಲೀಸರ ನಡುವೆ ತಿಕ್ಕಾಟ?: ಕ್ರಿಕೆಟ್‌ ಬೆಟ್ಟಿಂಗ್‌ ಮೇಲಿನ ದಾಳಿ ಪ್ರಕರಣದಲ್ಲಿ ಸದಾಶಿವನಗರ ಹಾಗೂ ಕೊಡಿಗೇಹಳ್ಳಿ ಠಾಣೆಗಳ ಪೊಲೀಸರ ನಡುವಿನ ತಿಕ್ಕಾಟವೇ ಅಮಾನತಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಆಂತರಿಕ ಕಲಹವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

click me!