ಮಹಿಳೆಗೆ 1.16 ಲಕ್ಷ ರೂ. ವಂಚನೆ: ಬೆಂಗಳೂರಿನ ಜ್ಯೋತಿಷಿ ಬಂಧನ

By Kannadaprabha News  |  First Published Oct 9, 2022, 9:10 AM IST

ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಪೋನ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಹಿಳೆಗೆ ವಂಚಿಸಿ ಹಣ ವರ್ಗಾಯಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜ್ಯೋತಿಷಿ, ಬೆಂಗಳೂರಿನ ಗಣೇಶ್‌ ಗೊಂದಳೆ ವಂಚಕ ವ್ಯಕ್ತಿಯಾಗಿದ್ದಾನೆ.


ಚಿಕ್ಕಮಗಳೂರು (ಅ.9) : ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಪೋನ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಹಿಳೆಗೆ ವಂಚಿಸಿ ಹಣ ವರ್ಗಾಯಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜ್ಯೋತಿಷಿ, ಬೆಂಗಳೂರಿನ ಗಣೇಶ್‌ ಗೊಂದಳೆ ವಂಚಕ ವ್ಯಕ್ತಿಯಾಗಿದ್ದಾನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಫೇಸ್‌ಬುಕ್‌ ಪೇಜ್‌ನಲ್ಲಿ ಜಾಹೀರಾತೊಂದು ನೋಡಿದ್ದ ಮಹಿಳೆಯು, ತನ್ನ ಕುಟುಂಬದಲ್ಲಿದ್ದ ಸಮಸ್ಯೆ ಪರಿಹಾರಕ್ಕಾಗಿ ಜಾಹೀರಾತಿನಲ್ಲಿದ್ದ ಫೋನ್‌ ನಂಬರ್‌ಗಳಿಗೆ ಕರೆ ಮಾಡಿದ್ದಾರೆ. ಅಲ್ಲದೇ, ತನ್ನ ಕುಟುಂಬದ ಸಮಸ್ಯೆ ಸರಿ ಮಾಡಿಕೊಡಿ ಎಂದು ಜ್ಯೋತಿಷಿ ಎನ್ನಲಾದ ವ್ಯಕ್ತಿಗೆ ಕೇಳಿಕೊಂಡಿದ್ದಾರೆ.

ಜ್ಯೋತಿಷ್ಯದ ನೆಪದಲ್ಲಿ ಮನೆಗೆ ಕನ್ನ: ಕಲಬುರಗಿಗೆ ಶುರುವಾಗಿದೆ ಮಹಾರಾಷ್ಟ್ರ ಕಂಟಕ

Latest Videos

undefined

ಆಗ ಜ್ಯೋತಿಷಿಯು, ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ .7 ಸಾವಿರ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಆಗ ಮಹಿಳೆಯು ಗೂಗಲ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಜ್ಯೋತಿಷಿಯು ಪುನಃ ಬೇರೆ ಬೇರೆ ಪೂಜೆ ಮಾಡಬೇಕು, ಆಗ ಸಮಸ್ಯೆ ಸರಿ ಆಗುತ್ತೆ ಎಂದು ನಂಬಿಸಿ, ಹಂತ ಹಂತವಾಗಿ ಮಹಿಳೆಯಿಂದ ಒಟ್ಟು .1,16,001 ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಇಷ್ಟಾದರೂ ಇನ್ನು ಹಲವು ಸಮಸ್ಯೆಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಕೂಡಲೇ ಹಣ ಕಳುಹಿಸಿ ಎಂದು ಮಹಿಳೆಗೆ ಹೇಳಿದ್ದಾನೆ. ಆಗ ಜ್ಯೋತಿಷಿಯ ಹಣದಾಹದ ಬಗ್ಗೆ ಮಹಿಳೆ ಅನುಮಾನಗೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್‌. ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗತ್ಯ ಕ್ರಮ ಜರುಗಿಸಲು ಮುಂದಾಗಿದ್ದರು. ಈಗ ನಕಲಿ ಜ್ಯೋತಿಷಿ ಪೊಲೀಸರ ಅತಿಥಿಯಾಗಿದ್ದಾನೆ.

ಎಲ್ಲ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡು, ಮಹಿಳೆಗೆ ಮೋಸ ಮಾಡಿದ್ದ ಈ ಆರೋಪಿ ಗಣೇಶ್‌ ಗೊಂದಳೆ ಬೆಂಗಳೂರಿನ ಸಹಕಾರ ನಗರದ ನಿವಾಸಿಯಾಗಿದ್ದಾನೆ. ಈತನನ್ನು ಬಂಧಿಸಿರುವ ಪೊಲೀಸರು .87,500 ನಗದು, ಮೊಬೈಲ್‌ ಪೋನ್‌, ಎರಡು  ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವಂಚನೆಗಳ ಜಾಲಕ್ಕೆ ಬೀಳದೇ, ಎಚ್ಚರ ವಹಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ನಕಲಿ ಎಟಿಎಂ ಕಾರ್ಡ್‌ ನೀಡಿ ವಂಚನೆ: ಬಂಧನ

ದಾವಣಗೆರೆ: ಎಟಿಎಂನಿಂದ ಹಣ ಬಿಡಿಸುವಂತೆ ಹೇಳುತ್ತಿದ್ದ ಮುಗ್ಧರಿಗೆ ನಕಲಿ ಎಟಿಎಂ ಕಾರ್ಡ್‌ ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಬಸವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಅರುಣಕುಮಾರ (35) ಬಂಧಿತ ಆರೋಪಿ. ಹಿರಿಯ ನಾಗರಿಕರಿಗೆ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅವರ ಪಿನ್‌ ನಂಬರ್‌ ತಿಳಿದು ಅವರಿಂದ ಎಟಿಎಂ ಪಡೆದು ಅದೇ ಮಾದರಿಯ ಬೇರೆ ಎಟಿಎಂ ಕಾರ್ಡ್‌ನ್ನು ನೀಡಿ ಅವರಿಗೆ ವಂಚಿಸಿ, ಬೇರೊಂದು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿಕೊಳ್ಳುವ ಮೂಲಕ ಮೋಸ ಮಾಡುತ್ತಿದ್ದ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗೆ ಗ್ರಾಮಾಂತರ ಡಿವೈಎಸ್‌ಪಿ ಕನಿಕಾ ಸಕ್ರಿವಾಲ್‌ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಸತೀಶ ಕುಮಾರ್‌, ಪಿಎಸ್‌ಐ ಚಿದಾನಂದಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹರಿಹರ ನಗರದ ಎಸ್‌ಬಿಐ ಬ್ಯಾಂಕ್‌ ಎಟಿಎಂ ಹತ್ತಿರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 3 ಲಕ್ಷ ರೂ ನಗದು, 32 ಎಟಿಎಂ ಕಾರ್ಡ್‌ಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹರಿಹರ, ದಾವಣಗೆರೆ ಬಸವನಗರ, ಬಡಾವಣೆ ವ್ಯಾಪ್ತಿಯ ವಿವಿಧ ಪ್ರಕರಣಗಳಲ್ಲಿ ಅರುಣಕುಮಾರ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪೂಜೆಗೆ ಬಂದವಳ ಮೇಲೆ ಜ್ಯೋತಿಷಿಯಿಂದ ರೇಪ್‌, ದೋಷ ಪರಿಹಾರ ಮಾಡೋದಾಗಿ ನಂಬಿಸಿ ದ್ರೋಹ..!

ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳಾದ ಮಂಜುನಾಥ, ಮಂಜುನಾಥ ಕ್ಯಾತಮ್ಮನವರ, ಹನುಮಂತಪ್ಪ ಗೋಪನಾಳ ಇತರರು ಭಾಗವಹಿಸಿದ್ದರು. ಪ್ರಕರಣಗಳನ್ನು ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್‌, ಹೆಚ್ಚುವರಿ ಎಸ್ಪಿ ಆರ್‌. ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

click me!