
ಬೆಂಗಳೂರು (ಅ.18): ನಿರ್ದೇಶಕನ ಗುರುತಿನ ನಂಬರ್ (ಡಿಐಎನ್) ಅನರ್ಹವಾಗಿದ್ದರೂ ನಿಯಮ ಬಾಹಿರವಾಗಿ ನಿಗಮದ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಆರೋಪದಡಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (ಕೆಎಸ್‌ಎಚ್‌ಡಿಸಿಎಲ್) ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಸೇರಿ ಇಬ್ಬರ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾರಾಯಣ ಕೆ.ನಾಯ್ಕ್ ನೀಡಿದ ದೂರಿನ ಮೇರೆಗೆ ಬೇಳೂರು ರಾಘವೇಂದ್ರ ಶೆಟ್ಟಿಮತ್ತು ಕಂಪನಿ ಸೆಕ್ರೆಟರಿ ಪರಮೇಶ್ವರ ಗಣಪತಿ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಕಂಪನಿ ಕಾಯ್ದೆಯಡಿ ನೋಂದಣಿ ಆಗಿದೆ. 2020ರ ನವೆಂಬರ್ 24ರಂದು ಬೇಳೂರು ರಾಘವೇಂದ್ರ ಶೆಟ್ಟಿಅವರು ನಿಗಮದ ನಿರ್ದೇಶಕ ಮತ್ತು ಅಧ್ಯಕ್ಷರಾಗಿ ನೇಮಕ ಆಗಿದ್ದರು. ರಾಜ್ಯ ಸರ್ಕಾರ 2022ರ ಜುಲೈ 12ರಂದು ಇವರನ್ನು ಅಧ್ಯಕ್ಷ ಸ್ಥಾನದಿಂದ ರದ್ದುಪಡಿಸಿ ಆದೇಶಿಸಿತ್ತು. ಈ ನಡುವೆ ರಾಘವೇಂದ್ರ ಶೆಟ್ಟಿಅವರ ನಿರ್ದೇಶಕ ಗುರುತಿನ ನಂಬರ್ ಅನರ್ಹವಾಗಿದೆ. ಕಂಪನಿ ಕಾಯ್ದೆ ಪ್ರಕಾರ ಡಿಐಎನ್ ಅನರ್ಹ ಆದ ವ್ಯಕ್ತಿ ಯಾವುದೇ ಕಂಪನಿಗೆ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುವಂತಿಲ್ಲ. ಆದರೂ ಈ ವಿಷಯವನ್ನು ಸರ್ಕಾರ ಮತ್ತು ನಿಗಮಕ್ಕೆ ಮುಚ್ಚಿಟ್ಟು, ನಿಗಮದ ಅಧ್ಯಕ್ಷ ಮತ್ತು ನಿರ್ದೇಶಕರಾಗಿ ರಾಘವೇಂದ್ರ ಶೆಟ್ಟಿ20 ತಿಂಗಳ ಕಾಲ ಅಧಿಕಾರ ನಡೆಸಿದ್ದಾರೆ.
ಅಬ್ಬಾ ಗಂಡಸರೂ ಇಲ್ಲಿ ಸೇಫ್ ಅಲ್ಲ: ಗೂಗಲ್ ಮ್ಯಾನೇಜರ್‌ನ ಎತ್ಹಾಕ್ಕೊಂಡ್ ಹೋಗಿ ಮದ್ವೆ
ಅಲ್ಲದೆ, ನಿಗಮದಿಂದ ವೇತನ ಮತ್ತು ಭತ್ಯೆಗಳು ಸೇರಿ ಪ್ರತಿ ತಿಂಗಳು 1,52,111 ರು.ನಂತೆ ಒಟ್ಟು 33.68 ಲಕ್ಷ ರು. ಪಡೆದುಕೊಂಡಿದ್ದಾರೆ. ಹೀಗಾಗಿ ರಾಘವೇಂದ್ರ ಶೆಟ್ಟಿಮತ್ತು ಡಿಐಎನ್ ಅನರ್ಹವಾಗಿರುವ ವಿಚಾರವನ್ನು ಮುಚ್ಚಿಟ್ಟಿದ್ದ ಅಂದಿನ ಕಂಪನಿ ಸೆಕ್ರೆಟರಿ ಪರಮೇಶ್ವರ ಗಣಪತಿ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಡಿಎ ಹುದ್ದೆ ತೋರಿಸಿ 25 ಲಕ್ಷ ವಂಚಿಸಿದ ದಂಪತಿ: ಸರ್ಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 25 ಲಕ್ಷ ಪಡೆದು ವಂಚಿಸಿದ ದಂಪತಿ ಸೇರಿ ಮೂವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಜಯಪುರ ಮೂಲದ ಪಂಡಿತ್ ಪರಮಾನಂದ ಚೌಧರಿ (35) ಎಂಬುವವರು ನೀಡಿದ ದೂರಿನ ಮೇರೆಗೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯ ಚಂದ್ರಕಲಾ ಬಾಯಿ, ಆಕೆಯ ಪತಿ ಗಂಗಾಧರ್ ನಾಯಕ್ ಹಾಗೂ ಕಲಬುರಗಿ ಮೂಲದ ಶಶಿಕಾಂತ್ ಗಾನಟೆ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಡಿತ್ ಪರಮಾನಂದ ಚೌಧರಿಗೆ ಸ್ನೇಹಿತ ನಾಗಪ್ಪ ಎಂಬಾತನ ಮುಖಾಂತರ ಮೂವರು ಆರೋಪಿಗಳು ಪರಿಚಯವಾಗಿದ್ದಾರೆ. ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. 2014ರಿಂದ 2022ರ ವರೆಗೆ ವಿವಿಧ ಹಂತಗಳಲ್ಲಿ ಪಂಡಿತ್ ಅವರಿಂದ 25 ಲಕ್ಷವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ. ಬಳಿಕ ತಿಂಗಳು ಕಳೆದರೂ ಕೆಲಸ ಕೊಡಿಸದೇ ಇದ್ದಾಗ ಹಣ ವಾಪಾಸ್ ನೀಡುವಂತೆ ಪಂಡಿತ್ ಕೇಳಿದ್ದಾರೆ.
ಪೋಷಕರನ್ನು ಬಿಟ್ಟು ಬಂದ ಯುವತಿ: ಸ್ನೇಹಿತೆಯೇಬೇಕೆಂದು ಫಜೀತಿಗೆ ಸಿಲುಕಿದ ಯುವಕ
ಈ ನಡುವೆ 2015ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕ ಮಾಡಿರುವ ಆದೇಶ ಪತ್ರವನ್ನು ಪಂಡಿತ್ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಪಂಡಿತ್ ಆ ನೇಮಕಾತಿ ಪತ್ರ ಹಿಡಿದು ಸಂಬಂಧಪಟ್ಟಇಲಾಖೆಗೆ ತೆರಳಿ ವಿಚಾರಿಸಿದಾಗ, ಇದು ನಕಲಿ ಆದೇಶಪತ್ರ ಎಂಬುದು ಗೊತ್ತಾಗಿದೆ. ಈ ವೇಳೆ ಹಣ ವಾಪಾಸ್ ನೀಡುವಂತೆ ಪಂಡಿತ್ ಅರೋಪಿಗಳನ್ನು ಕೇಳಿದ್ದಾರೆ. ಆದರೆ, ಆರೋಪಿಗಳು ಹಣ ವಾಪಸ್ ನೀಡದೇ ವಿವಿಧ ಕಾರಣ ನೀಡಿ ಕಾಲ ದೂಡಿದ್ದಾರೆ. ಇತ್ತ ಕೆಲಸವೂ ಇಲ್ಲದೆ ಹಣವನ್ನೂ ಕಳೆದುಕೊಂಡ ಪಂಡಿತ್ ಇದೀಗ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ