Bengaluru: ಬಸ್‌ ನಿಲ್ಲಿಸುವ ವಿಚಾರಕ್ಕೆ ಚಾಲಕನ ಹೊಡೆದು ಕೊಂದ: ಆರೋಪಿ ಬಂಧನ

By Kannadaprabha NewsFirst Published Jan 19, 2023, 5:41 AM IST
Highlights

ರಸ್ತೆ ಬದಿ ರಾತ್ರಿ ಬಸ್‌ ನಿಲ್ಲಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಖಾಸಗಿ ಬಸ್‌ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಬಸ್ಸಿನಲ್ಲೇ ಹತ್ಯೆಗೈದು ಪರಾರಿಯಾಗಿದ್ದ ಮತ್ತೊಬ್ಬ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜ.19): ರಸ್ತೆ ಬದಿ ರಾತ್ರಿ ಬಸ್‌ ನಿಲ್ಲಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಖಾಸಗಿ ಬಸ್‌ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಬಸ್ಸಿನಲ್ಲೇ ಹತ್ಯೆಗೈದು ಪರಾರಿಯಾಗಿದ್ದ ಮತ್ತೊಬ್ಬ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆನಿವಾಸಿ ಸಿ.ವೆಂಕಟಸ್ವಾಮಿ (52) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿ ಪರಾರಿಯಾಗಿದ್ದ ಮಾಗಡಿ ರಸ್ತೆಯ ಕೊಡಿಗೇಹಳ್ಳಿಯ ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಸುಂಕದಕಟ್ಟೆಸಮೀಪ ಚರಂಡಿಯಲ್ಲಿ ಜ.13ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಲೋಹಿತ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಮೂರ್ತಿ ನೇತೃತ್ವದ ತಂಡ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಮೃತನ ಗುರುತು ಪತ್ತೆ ಹಚ್ಚಿ, ಹಂತಕನನ್ನು ಸೆರೆ ಹಿಡಿದಿದೆ.

ಬಸ್ಸಿನ ಗಾಳಿ ತೆಗೆದ ಎಂದು ಗಲಾಟೆ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆಕಲ್ಲು ಗ್ರಾಮದ ವೆಂಕಟಸ್ವಾಮಿ, ಶ್ರೀ ಸತ್ಯಸಾಯಿ ಟೂ​ರ್‍ಸ್ನಲ್ಲಿ ಬಸ್‌ ಚಾಲಕರಾಗಿದ್ದರು. ಸುಂಕದಕಟ್ಟೆಸಮೀಪ ಆತನ ಕುಟುಂಬದ ನೆಲೆಸಿತ್ತು. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ವೆಂಕಟೇಶ್‌, ಪುಷ್ಪಕ್‌ ಟ್ರಾವೆಲ್ಸ್‌ನಲ್ಲಿ ಬಸ್‌ ಚಾಲಕನಾಗಿದ್ದ. ಖಾಸಗಿ ಕಂಪನಿಗೆ ಬಾಡಿಗೆ ಓಡಿಸುತ್ತಿದ್ದ ವೆಂಕಟಸ್ವಾಮಿ, ರಾತ್ರಿ ಮಾಗಡಿ ರಸ್ತೆಯ ಸುಂಕದಕಟ್ಟೆಸಮೀಪದ ಜಿ.ಟಿ.ಇಂಡಸ್ಟ್ರೀಯಲ್‌ ಕಾಂಪ್ಲೆಕ್ಸ್‌ ಹತ್ತಿರ ಬಸ್‌ ನಿಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ರಾತ್ರಿ ಬಸ್‌ ನಿಲ್ಲಿಸಿದ್ದಾಗ ಕಿಡಿಗೇಡಿಗಳು ಅವರ ಬಸ್ಸಿನ ಚಕ್ರದಲ್ಲಿ ಗಾಳಿ ತೆಗೆದಿದ್ದರು. ಇದರಿಂದ ಬೇಸರಗೊಂಡು ಅವರು, ಬೇರೆಡೆ ಬಸ್‌ ನಿಲ್ಲಿಸುತ್ತಿದ್ದರು. ನಂತರ ಆ ಜಾಗದಲ್ಲಿ ರಾತ್ರಿ ವೇಳೆ ವೆಂಕಟೇಶ್‌ ತನ್ನ ಬಸ್‌ ನಿಲ್ಲಿಸುತ್ತಿದ್ದ.

ನೇಣಿಗೆ ಶರಣಾದ ಪ್ರೇಮಿಗಳು: ಕೊನೆಯಾಸೆಯಂತೆ ತಾಳಿ ಕಟ್ಟಿಸಿಕೊಂಡೇ ಪ್ರಾಣಬಿಟ್ಟ ಯುವತಿ..!

ಜ.12ರಂದು ಬಸ್‌ ನಿಲ್ಲಿಸಿ ವೆಂಕಟೇಶ್‌ ಮಲಗಿದ್ದ ವೇಳೆ ಅಲ್ಲಿಗೆ ಬಂದ ವೆಂಕಟಸ್ವಾಮಿ, ‘ನನ್ನ ಬಸ್ಸಿನ ಗಾಳಿ ತೆಗೆದು ಪಂಕ್ಚರ್‌ ಮಾಡಿ. ಈಗ ನಿನ್ನ ಬಸ್‌ ನಿಲ್ಲಿಸುತ್ತೀದ್ದಿಯಾ’ ಎಂದು ಹೇಳಿ ಗಲಾಟೆ ಮಾಡಿ ಬಸ್ಸಿಗೆ ಕಲ್ಲು ತೂರಿದ್ದರಿಂದ ಆತ ನಿದ್ರೆಯಿಂದ ಎಚ್ಚರಗೊಂಡಿದ್ದಾನೆ. ಬಸ್‌ ಹತ್ತಿದ ವೆಂಕಟಸ್ವಾಮಿ, ವೆಂಕಟೇಶ್‌ನನ್ನು ಹೊಡೆಯಲು ಮುಂದಾಗಿದ್ದಾರೆ. ಆಗ ‘ಪೊಲೀಸ್‌ ಠಾಣೆಗೆ ಹೋಗೋಣ’ ಎಂದು ಹೇಳಿ ವೆಂಕಟೇಶ್‌ ಬಸ್ಸನ್ನು ಚಲಾಯಿಸಿದ್ದಾನೆ. ಸುಂಕದಕಟ್ಟೆದಾಟಿ ಕೊಟ್ಟಿಗೆಪಾಳ್ಯ ಜಂಕ್ಷನ್‌ಗೆ ಬಂದಾಗ ವೆಂಕಟೇಶ್‌ಗೆ ಮತ್ತೆ ವೆಂಕಟಸ್ವಾಮಿ ಹೊಡೆದಿದ್ದಾರೆ. ಇದರಿಂದ ಕೆರಳಿದ ಆತ, ವೆಂಕಟಸ್ವಾಮಿ ಅವರನ್ನು ಜೋರಾಗಿ ದೂಡಿದಾಗ ಫುಟ್‌ಬೋರ್ಡ್‌ಗೆ ಹೋಗಿ ಬಿದ್ದಿದ್ದಾರೆ. ಅಲ್ಲಿ ಆವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ವೆಂಕಟಸ್ವಾಮಿ ಅವರನ್ನು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆ ಬಳಿಕ ಕಂಠ ಮಟ್ಟ ಮದ್ಯ ಸೇವಿಸಿದ ಚಾಲಕ: ಹತ್ಯೆ ಬಳಿಕ ವೆಂಕಟೇಶ ಕಾಮಾಕ್ಷಿಪಾಳ್ಯದ ಹೂವಿನ ಮಾರ್ಕೆಟ್‌ ಬಳಿ ಬಸ್‌ ತಂದು ನಿಲ್ಲಿಸಿದ್ದಾನೆ. ನಂತರ ಸಮೀಪದ ಬಾರ್‌ನಲ್ಲಿ ಕಂಠಮಟ ಮದ್ಯ ಸೇವಿಸಿ ಅಲ್ಲಿಂದ ಹೊರಟು ಸುಂಕದಕಟ್ಟೆಹತ್ತಿರ ಬಂದಿದ್ದಾನೆ. ಅಲ್ಲಿ ಮೃತದೇಹವನ್ನು ರಸ್ತೆ ಬದಿಯ ಚರಂಡಿ ಎಸೆದು ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾನೆ. ಇತ್ತ ಚರಂಡಿಯಲ್ಲಿ ಅಪರಿಚಿತನ ಮೃತದೇಹ ನೋಡಿ ಪೊಲೀಸರಿಗೆ ಪೌರ ಕಾರ್ಮಿಕರು ಮಾಹಿತಿ ನೀಡಿದ್ದರು.

Bengaluru: ವಿವಾಹಿತನಿಂದ 2ನೇ ಮದುವೆಗೆ ಒತ್ತಡ: ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿ ಕುತ್ತಿಗೆಗೆ ಇರಿತ

150 ಸಿಸಿಟಿವಿ ಕ್ಯಾಮೆರಾ ಪರಿಶೀಲನೆ: ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಗೊಳಗಾಗಿ ವೆಂಕಟಸ್ವಾಮಿ ಹತ್ಯೆಗೀಡಾಗಿರುವುದು ಗೊತ್ತಾಯಿತು. ಅದೇ ವೇಳೆಗೆ ಮೃತ ವೆಂಕಟಸ್ವಾಮಿ ಕುಟುಂಬದವರು, ಕಾಮಾಕ್ಷಿಪಾಳ್ಯ ಠಾಣೆಗೆ ವೆಂಕಟಸ್ವಾಮಿ ಕಾಣೆಯಾಗಿರುವ ಬಗ್ಗೆ ದೂರು ಕೊಡಲು ಬಂದಾಗ ಸಿಕ್ಕಿರುವ ಅಪರಿಚಿತ ಮೃತದೇಹದ ಬಗ್ಗೆ ತಿಳಿಸಿದಾಗ ಗುರುತು ಪತ್ತೆ ಹಚ್ಚಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು, ಸುಂಕದಟ್ಟೆಯಿಂದ ಕಾಮಾಕ್ಷಿಪಾಳ್ಯದವರೆಗೆ ಸುಮಾರು 150ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆಗ ಸುಂಕದಕಟ್ಟೆಯ ತಿಮ್ಮಯ್ಯ ಕಾಲೇಜು ಸಮೀಪದ ಹೂವಿನ ಅಲಂಕಾರದ ಅಂಗಡಿಯ ಸಿಸಿಟಿವಿಯಲ್ಲಿ ಖಾಸಗಿ ಬಸ್ಸನ್ನು ವೆಂಕಟಸ್ವಾಮಿ ಹತ್ತುವುದು, ಕಾಮಾಕ್ಷಿಪಾಳ್ಯದ ಹೂವಿನ ಮಾರ್ಕೆಟ್‌ ಬಳಿ ಬಸ್ಸಿನಿಂದ ವೆಂಕಟೇಶ್‌ ಇಳಿದು ಬಾರ್‌ಗೆ ಹೋಗುವ ದೃಶ್ಯ ಸಿಕ್ಕಿತು. ಪುಷ್ಪಕ್‌ ಟ್ರಾವೆಲ್ಸ್‌ ಏಜೆನ್ಸಿಯಿಂದ ಚಾಲಕನ ವಿವರ ಸಿಕ್ಕಿತು. ಬಳಿಕ ಆತನನ್ನು ವಶಕ್ಕೆ ಪಡೆದಾಗ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ಮೃತನ ವಾಚ್‌, ಸರ ಹಾಗೂ ಪಸ್ರ್ಸನ್ನು ಆರೋಪಿ ಒಪ್ಪಿಸಿದ ಎಂದು ಪೊಲೀಸರು ವಿವರಿಸಿದ್ದಾರೆ.

click me!