ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ನಡೆದ ಘಟನೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಸವರಾಜ ಬಿರಾದಾರ.
ಯಾದಗಿರಿ(ಮಾ.04): ಮಗನ ಸಾವಿನ ಆಘಾತದಿಂದ ತಂದೆಯೂ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಬಸವರಾಜ ಬಿರಾದಾರ ಎಂಬುವರೇ ಬಾವಿಗೆ ಹಾರಿ ಆತ್ಮಹತ್ಯೆ ದುರ್ದೈವಿಯಾಗಿದ್ದಾರೆ.
ಬಸವರಾಜ ಬಿರಾದಾರ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದವರಾಗಿದ್ದಾರೆ. ಇಂದು ನಸುಕಿನ ಜಾವ ಬಸವರಾಜ ಬಿರಾದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಸವರಾಜನ ಪುತ್ರ ಶಿವಕುಮಾರ ಬಿರಾದರ (34) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಊಟದಲ್ಲಿ ಇಲಿ ಪಾಷಾಣ ಹಾಕಿ ಹೆಂಡತಿ, ಮಕ್ಕಳನ್ನು ಕೊಂದ ಪಾಪಿ ತಂದೆ: ತಾನೂ ಆತ್ಮಹತ್ಯೆಗೆ ಯತ್ನ
ನಿನ್ನೆ ರಾತ್ರಿ ಮದ್ದರಕಿ ಗ್ರಾಮದ ಹೊರಭಾಗದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶಿವಕುಮಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಶಿವಕುಮಾರ ಸಾವಿನಿಂದ ಮನನೊಂದಿದ್ದ ತಂದೆ ಬಸವರಾಜ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗ ಹೋದ ಮೇಲೆ ನಾನು ಇರಲ್ಲ ಅಂತ ಮೃತ ಬಸವರಾಜ ತನ್ನ ನೋವು ತೊಡಿಕೊಂಡಿದ್ದರಂತೆ. ನಸುಕಿನ ಜಾವ ಮೂತ್ರ ವಿಸರ್ಜನೆಗೆಂದು ಹೊರಗಡೆ ಹೋಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೀಮರಾಯನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.