* ವರ್ಷದ ಹಿಂದೆ 1 ಲಕ್ಷ ಸಾಲ ಪಡೆದಿದ್ದ ಮಹಿಳೆ
* ಸಕಾಲಕ್ಕೆ ಸಾಲ ಕಟ್ಟಲು ಆಗದೆ ಸಂಕಷ್ಟ
* ಮನೆಗೆ ನುಗ್ಗಿ ಬಟ್ಟೆ ಬಿಚ್ಚಿ, ದೊಣ್ಣೆಯಿಂದ ಹಲ್ಲೆ
ದೊಮ್ಮಸಂದ್ರ (ಜೂ.29): ಕೊಟ್ಟ ಸಾಲ ಹಿಂತಿರುಗಿಸದ್ದಕ್ಕೆ ಮಹಿಳೆಯೊಬ್ಬರ ಬಟ್ಟೆಬಿಚ್ಚಿ ಅವಮಾನಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ತಾಲೂಕಿನ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಘಟನೆ ನಡೆದು 2 ದಿನಗಳಾದರೂ ದೂರು ಸ್ವೀಕರಸಲು ಸರ್ಜಾಪುರ ಠಾಣೆಯ ಪೊಲೀಸರು ನಕಾರ ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೊಶ ವ್ಯಕ್ತವಾದ ಬಳಿಕ ದೂರು ಸ್ವೀಕರಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ.
ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ಅವರ ಪುತ್ರಿಯರಾದ ಶಾಂತಿ ಪ್ರಿಯಾ ಮತ್ತು ಭಾನುಪ್ರಿಯಾ ಅವರ ಮೇಲೆ ದೌರ್ಜನ್ಯ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾದ ತಂದೆ ರಾಮಕೃಷ್ಣಾ ರೆಡ್ಡಿ, ತಾಯಿ ಇಂದ್ರಮ್ಮ, ಇವರ ಪುತ್ರ ಸುನೀಲ್ ಕುಮಾರ್ ಮಹಿಳೆಯ ಬಟ್ಟೆಬಿಚ್ಚಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ಶಾಂತಿಪ್ರಿಯಾ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಮಕೃಷ್ಣಾ ರೆಡ್ಡಿ ಅವರಿಂದ ವರ್ಷದ ಹಿಂದೆ ಶೇಕಡ 30 ಬಡ್ಡಿ ದರದಲ್ಲಿ .1 ಲಕ್ಷ ಸಾಲವನ್ನು ಪಡೆದಿದ್ದರು. ಕಾಲ ಕಾಲಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ಅಸಲು ನೀಡುವಂತೆ ಸುನೀಲ್ ಒತ್ತಡ ಹಾಕಿದ್ದ.
ಪ್ರೇಮಕ್ಕೆ ವಿರೋಧ: ಗೆಳತಿ, ಆಕೆಯ ಸಹೋದರನನ್ನು ಸುತ್ತಿಗೆಯಿಂದ ಹೊಡೆದು ಕೊಂದ ವ್ಯಕ್ತಿ!
ಆದರೆ ಹಣ ಇಲ್ಲದ್ದರಿಂದ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ನಡೆದಿತ್ತು. ಅದರಂತೆ ಆಸ್ತಿ ಮಾಡಿ ಬಂದ ಹಣದಲ್ಲಿ ಸಾಲ ತೀರಿಸಲು ಒಪ್ಪಂದವಾಗಿತ್ತು. ಆದರೂ ಕೂಡ ಭಾನುವಾರ ಬೆಳಗ್ಗೆ ಶಾಂತಿಪ್ರಿಯಾ ಅವರ ಮನೆಗೆ ನುಗ್ಗಿದ ಸುನೀಲ್, ರಾಮಕೃಷ್ಣರೆಡ್ಡಿ, ಇಂದ್ರಮ್ಮ ಅವರು ಶಾಂತಿಪ್ರಿಯಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಾಂತಿಪ್ರಿಯಾ ಅವರ ಮೈಮೇಲಿದ್ದ ಬಟ್ಟೆಯನ್ನು ಬಿಚ್ಚಿದ ಸುನೀಲ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ರಾಮಕೃಷ್ಣರೆಡ್ಡಿ ಮತ್ತು ಇಂದ್ರಮ್ಮ ದೊಣ್ಣೆಯಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಶಾಂತಿಪ್ರಿಯಾ ಅವರು ತಮ್ಮ ಸಹೋದರಿಯೊಂದಿಗೆ ಸರ್ಜಾಪುರ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ.
ಆತ್ಮಹತ್ಯೆಯಲ್ಲ, ಮಾಟಗಾರ ನೀಡಿದ ಚಹಾದಿಂದ ಸಾವು ಕಂಡ ಒಂದೇ ಕುಟುಂಬದ 9 ಜನ!
ಆದರೆ ಠಾಣೆಯ ಇನ್ಸ್‌ಸ್ಪೆಕ್ಟರ್ ರಾಘವೇಂದ್ರ ಇಂಬ್ರಾಪುರ್, ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ರಾಜಿ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಮಾಧ್ಯಮಗಳ ಮುಂದೆ ಶಾಂತಿಪ್ರಿಯಾ ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆಗಾಗಲೇ ಮೈಮೇಲಿನ ಹಲ್ಲೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು. ಸಮಾಜದ ಗಣ್ಯರು, ಮಾಧ್ಯಮದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಶಾಂತಿಪ್ರಿಯಾ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಸಹೋದರಿಯಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.