ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ 1.3 ಕೋಟಿ ಹಣ ತೆಗೆದುಕೊಂಡು ನೌಕರ ಪರಾರಿ

By Kannadaprabha NewsFirst Published Feb 7, 2023, 8:30 AM IST
Highlights

ಚಿನ್ನಮ್ಮ ಲೇಔಟ್‌ ನಿವಾಸಿ ರಾಜೇಶ್‌ ಮೆಸ್ತಾ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ಕೋರಮಂಗಲದ ವ್ಯಾಪ್ತಿಯಲ್ಲಿ ಎಟಿಎಂ ಘಟಕಗಳಿಗೆ ಹಣ ತುಂಬಬೇಕಿದ್ದ ಹಣವನ್ನು ತೆಗೆದುಕೊಂಡು ಮೆಸ್ತಾ ಪರಾರಿ. 

ಬೆಂಗಳೂರು(ಫೆ.07):  ಎಟಿಎಂ ಕೇಂದ್ರಗಳಿಗೆ ತುಂಬಬೇಕಿದ್ದ 1.03 ಕೋಟಿ ಹಣವನ್ನು ತೆಗೆದುಕೊಂಡು ಪತ್ನಿ ಸಮೇತ ಖಾಸಗಿ ಏಜೆನ್ಸಿ ನೌಕರನೊಬ್ಬ ಪರಾರಿಯಾಗಿರುವ ಘಟನೆ ಮಡಿವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿನ್ನಮ್ಮ ಲೇಔಟ್‌ ನಿವಾಸಿ ರಾಜೇಶ್‌ ಮೆಸ್ತಾ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ಕೋರಮಂಗಲದ ವ್ಯಾಪ್ತಿಯಲ್ಲಿ ಎಟಿಎಂ ಘಟಕಗಳಿಗೆ ಹಣ ತುಂಬಬೇಕಿದ್ದ ಹಣವನ್ನು ತೆಗೆದುಕೊಂಡು ಮೆಸ್ತಾ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ರಾಜೇಶ್‌ ಮೆಸ್ತಾ, ಒಂದೂವರೆ ವರ್ಷದಿಂದ ಸೆಕ್ಯೂರ್‌ ವ್ಯಾಲ್ಯೂ ಇಂಡಿಯಾ ಲಿಮಿಟೆಡ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಏಜೆನ್ಸಿಯು ವಿವಿಧ ಬ್ಯಾಂಕ್‌ಗಳಲ್ಲಿ ಹಣ ಸಂಗ್ರಹಿಸಿ ಬಳಿಕ ಎಟಿಎಂ ಘಟಕಗಳಿಗೆ ತುಂಬಿಸುವ ಗುತ್ತಿಗೆ ಪಡೆದಿದೆ. ಅಂತೆಯೇ ಪ್ರತಿದಿನ ವಿವಿಧ ಬ್ಯಾಂಕ್‌ಗಳ ಶಾಖೆಯಲ್ಲಿ ಹಣ ಸಂಗ್ರಹಿಸಿ ಎಟಿಎಂ ಘಟಕಗಳಿಗೆ ಹಣ ತುಂಬುವ ಕೆಲಸಕ್ಕೆ ರಾಜೇಶ್‌ ಮೆಸ್ತಾನನ್ನು ಏಜೆನ್ಸಿ ನಿಯೋಜಿಸಿತ್ತು.

Mangaluru: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ!

ಕಳೆದ ಡಿಸೆಂಬರ್‌ 28ರಿಂದ ಬಿಟಿಎಂ ಲೇಔಟ್‌, ಬನ್ನೇರುಘಟ್ಟರಸ್ತೆ ಹಾಗೂ ಕೋರಮಂಗಲ ವಲಯ ಜವಾಬ್ದಾರಿ ವಹಿಸಿಕೊಂಡಿದ್ದ ಆತ, ಫೆ.1ರಿಂದ ರಜೆಯೂ ಪಡೆಯದೆ ಯಾರಿಗೂ ಮಾಹಿತಿ ನೀಡದೆ ಏಕಾಏಕಿ ಕರ್ತವ್ಯಕ್ಕೆ ಗೈರಾಗಿದ್ದ. ಆಗ ಅನುಮಾನಗೊಂಡ ಏಜೆನ್ಸಿಯ ಅಧಿಕಾರಿಗಳು, ಆರೋಪಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌್ಡ ಆಫ್‌ ಆಗಿತ್ತು. ಇದರಿಂದ ಗುಮಾನಿಗೊಂಡ ಅವರು, ಮೆಸ್ತಾ ನಿರ್ವಹಿಸುತ್ತಿದ್ದ ವಲಯದ ಎಟಿಎಂಗಳ ಹಣದ ವಿವರದ ಬಗ್ಗೆ ಲೆಕ್ಕಪರಿಶೋಧಿಸಿದಾಗ ವ್ಯತ್ಯಾಸ ಕಂಡು ಬಂದಿದೆ. ಎಟಿಎಂ ಕೇಂದ್ರಗಳಿಗೆ ತುಂಬಬೇಕಿದ್ದ 1.03 ಕೋಟಿ ಹಣವನ್ನು ಆತ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಡಿವಾಳ ಠಾಣೆಗೆ ಸೆಕ್ಯೂರ್‌ ವ್ಯಾಲ್ಯೂ ಇಂಡಿಯಾ ಏಜೆನ್ಸಿಯ ಮಡಿವಾಳ ಶಾಖೆಯ ಉಪ ವ್ಯವಸ್ಥಾಪಕ ಎಸ್‌.ಎ.ರಾಘವೇಂದ್ರ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!