ತುರ್ತು ಸಾಲ ಆ್ಯಪ್ ದಂಧೆ: ಚೀನಿ ಸೇರಿ ನಾಲ್ವರ ಬಂಧನ | 11 ಆ್ಯಪ್ ಬಳಸಿ ಅಮಾಯಕರ ಸುಲಿಗೆ
ಹೈದರಾಬಾದ್(ಡಿ.26): ತುರ್ತು ಸಾಲ ನೀಡುವ 11 ಮೊಬೈಲ್ ಆ್ಯಪ್‌ಗಳನ್ನು ಬಳಸಿಕೊಂಡು ಸಾಲ ಪಡೆದವರಿಂದ ದಬ್ಬಾಳಿಕೆಯ ಮೂಲಕ ಸಾಲ ವಸೂಲಿ ಮಾಡುತ್ತಿದ್ದ ಓರ್ವ ಚೀನಾ ಪ್ರಜೆ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
ಇನ್ನೊಬ್ಬ ಚೀನಾ ಪ್ರಜೆ ಸೇರಿ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ಯಾಂಗ್ ದಿಢೀರ್ ಸಾಲ ನೀಡುವ 11 ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ, ಜನರಿಗೆ ಸಾಲದ ಆಫರ್ ನೀಡುತ್ತಿದ್ದರು.
ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ..! ಸಾಲ ನೀಡಿ ಮಾಹಿತಿ ಕದಿಯುತ್ತಿವೆ ಚೀನಿ ಕಂಪನಿಗಳು
ಒಂದು ವೇಳೆ ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗದೆ ಇದ್ದರೆ ಭಾರೀ ದಂಡ ವಿಧಿಸಿ ದಬ್ಬಾಳಿಕೆಯ ಮೂಲಕ ಸಾಲ ವಸೂಲಿ ಮಾಡಲಾಗುತ್ತಿತ್ತು. ನಕಲಿ ಕೋರ್ಟ್ ನೋಟಿಸ್ ನೀಡಿ ಸಾಲಗಾರರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಈ ಸಂಬಂಧ ಪೊಲೀಸರು ಇತ್ತೀಚೆಗೆ ಈ ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಬೆಂಗಳೂರಿನಲ್ಲಿಯೂ ಇದೇ ರೀತಿಯ ಆ್ಯಪ್ ಆಧರಿತ ಸಾಲ ನೀಡಿಕೆ ಜಾಲವನ್ನು ಪೊಲೀಸರು ಭೇದಿಸಿ ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಸೇರಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಈ ಮುನ್ನ ಹೈದರಾಬಾದ್‌ನಲ್ಲಿ ಇಂಥದ್ದೊಂದು ದಂಧೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರ್‌ಬಿಐ ತುರ್ತು ಸಾಲ ನೀಡುವ ಆ್ಯಪ್ ಹಾಗೂ ವೆಬ್‌ಗಳ ಬಗ್ಗೆ ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿದೆ.