Asianet Suvarna News Asianet Suvarna News

ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ..! ಸಾಲ ನೀಡಿ ಮಾಹಿತಿ ಕದಿಯುತ್ತಿವೆ ಚೀನಿ ಕಂಪನಿಗಳು

ಮೊಬೈಲ್‌ ಆ್ಯಪ್‌ ಮೂಲಕ ಕುಳಿತಲ್ಲೇ ಸಿಗುತ್ತೆ ಸಾಲ| ಅಪ್ಲೋಡ್‌ ಮಾಡಿದ ಮಾಹಿತಿ ಮೂಲಕ ಮೊಬೈಲ್‌ ಹ್ಯಾಕ್| ಭಾರತೀಯರ ಮಾಹಿತಿ ಕದ್ದು ಚೀನಾದಿಂದ ದುರ್ಬಳಕೆ| ಚೀನಿ ಲೋನ್‌ ಆ್ಯಪ್‌ ಕಂಪನಿಗಳ ಮೇಲೆ ಸಿಐಡಿ ದಾಳಿ| 
 

Chinese Companies are Stealing Information About Customers grg
Author
Bengaluru, First Published Dec 26, 2020, 11:16 AM IST

ಎನ್‌.ಲಕ್ಷ್ಮಣ್‌

ಬೆಂಗಳೂರು(ಡಿ.26): ಇತ್ತೀಚೆಗೆ ಚೀನಾ ದೇಶದ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿರುವ ಸುದ್ದಿ ಹಸಿರಾಗಿರುವಾಗಲೇ ಆ ದೇಶದ ಕಂಪನಿಗಳು ರಹಸ್ಯವಾಗಿ ಭಾರತೀಯರಿಗೆ ‘ಮೈಕ್ರೋ’ (ಸಣ್ಣ ಮೊತ್ತದ ಸಾಲ) ಸಾಲ ನೀಡುವ ಮೂಲಕ ಗ್ರಾಹಕರ ವೈಯಕ್ತಿಕ ‘ಗೌಪ್ಯ’ ಮಾಹಿತಿ ಕಳವು ಮಾಡುತ್ತಿವೆ ಎಂಬ ಆಘಾತಕಾರಿ ವಿಷಯ ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ಮಾತ್ರವಲ್ಲದೆ, ದೇಶದ ಪ್ರಮುಖ ರಾಜ್ಯಗಳನ್ನು ಗುರಿಯಾಗಿಸಿಕೊಂಡು ನೆರೆ ರಾಷ್ಟ್ರ ಚೀನಾ ಕಳ್ಳ ಕೃತ್ಯ ಎಸಗುತ್ತಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಮೂಲಕ ಚೀನಿಯರು ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆ (ಐಬಿ) ಈ ಮೈಕ್ರೋ ಸಾಲ ನೀಡುತ್ತಿರುವ ಬ್ಯಾಂಕೇತರ ವ್ಯಕ್ತಿಗಳ ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಸಿಐಡಿ ತನಿಖಾಧಿಕಾರಿಗಳಿಂದ ಕೂಡ ಮಾಹಿತಿ ಪಡೆದುಕೊಂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಚೀನಾ ಕಂಪನಿಗಳ ಅಡಿಯಲ್ಲಿ ಬರುವ ಹತ್ತಾರು ಬ್ಯಾಂಕೇತರ ಸಂಸ್ಥೆಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಅಕ್ರಮ ಕಂಪನಿಗಳು ಗ್ರಾಹಕನಿಗೆ ಕುಳಿತಿರುವ ಸ್ಥಳಕ್ಕೆ ಸಾಲ ತಲುಪುವಂತೆ ಮಾಡುತ್ತವೆ. ಸಾಲ ನೀಡುವ ಸೋಗಿನಲ್ಲಿ ಈ ಕಂಪನಿಗಳು ಗ್ರಾಹಕನಿಂದ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿವೆ. ಹಣದ ಅಗತ್ಯವಿರುವ ವ್ಯಕ್ತಿ ಯಾವುದೇ ಆಲೋಚನೆ ಮಾಡದೆ ವೈಯಕ್ತಿಕ ದಾಖಲೆಗಳನ್ನು ನೀಡುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕಂಪನಿಗಳು ಹೆಚ್ಚಿನ ಬಡ್ಡಿದರಲ್ಲಿ ಸಾಲ ನೀಡುವ ಮೂಲಕ ಮಾಹಿತಿ ಕಳವು ಮಾಡುತ್ತಿವೆ.

ಭಾರತದಲ್ಲಿ ಆಲಿಬಾಬ, ಮ್ಯಾಂಗೋ ಟಿವಿ ಸೇರಿದಂತೆ 43 ಮೊಬೈಲ್ ಆ್ಯಪ್ ಬ್ಯಾನ್!

ರಾಷ್ಟ್ರ ರಾಜಧಾನಿ ಸಹ ಟಾರ್ಗೆಟ್‌:

ಕೇವಲ ಕರ್ನಾಟಕ ಮಾತ್ರವಲ್ಲದೆ, ರಾಷ್ಟ್ರ ರಾಜಧಾನಿಯಲ್ಲೂ ಈ ಕಂಪನಿಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಹರಿಯಾಣದ ಗುರಗಾಂವ್‌, ಹೈದರಾಬಾದ್‌ ಸೇರಿದಂತೆ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುವ ನಗರವನ್ನೇ ಗುರಿಯಾಗಿಸಿಕೊಂಡಿದೆ. ಹೈದ್ರಾಬಾದ್‌, ದೆಹಲಿ ಹಾಗೂ ಗುರಗಾಂವ್‌ನಲ್ಲಿ ಅಲ್ಲಿನ ಪೊಲೀಸರು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಈ ಕಂಪನಿಗಳು ಸುಮಾರು ನಾಲ್ಕೈದು ವರ್ಷಗಳಿಂದ ಮೈಕ್ರೋ ಸಾಲ ನೀಡುತ್ತಿವೆ. ಸಾಲದ ನೆಪದಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡುತ್ತಿರುವ ಸಾವಿರಾರು ಪ್ರಕರಣ ಬೆಳಕಿಗೆ ಬಂದಿವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ಕೊಟ್ಟ ಮೇಲೆ ಹ್ಯಾಕ್‌:

ಕಂಪನಿಗಳು ಸಾಲ ನೀಡಲು ‘ಪೈಸಾಲೋನ್‌’ ಸೇರಿದಂತೆ ಇನ್ನಿತರ ಹೆಸರಿನ ಆ್ಯಪ್‌ಗಳನ್ನು ಹೊಂದಿವೆ. ಸಾಲ ಪಡೆಯುವ ಗ್ರಾಹಕರು ಪ್ಲೇ ಸ್ಟೋರ್‌ಗಳ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಆ್ಯಪ್‌ ಕೇಳುವ ಆಧಾರ್‌ ಸಂಖ್ಯೆ, ಪ್ಯಾನ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ, ಇಬ್ಬರು ಪರಿಚಯಸ್ಥರ ಮೊಬೈಲ್‌ ಸಂಖ್ಯೆ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳನ್ನು ಬಳಕೆದಾರರು ನಮೂದಿಸಬೇಕು. ಕಾಂಟಾಕ್ಟ್$್ಸ, ಎಸ್‌ಎಂಎಸ್‌, ಕರೆ ವಿವರದ ಗೌಪ್ಯ ಮಾಹಿತಿಯನ್ನು ಬಳಸಿಕೊಳ್ಳಲು ಅನಿವಾರ್ಯವಾಗಿ ಅನುಮತಿಯನ್ನು ಗ್ರಾಹಕ ನೀಡಬೇಕು. ಒಂದು ವೇಳೆ ಈ ಮಾಹಿತಿಗೆ ಅನುಮತಿ ನೀಡದಿದ್ದರೆ ಸಾಲ ಪಡೆಯಲು ಆಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಚೀನಿ ಕಂಪನಿಗಳು ಭಾರತೀಯರ ಬ್ಯಾಂಕ್‌, ಪ್ಯಾನ್‌ ಸಂಖ್ಯೆ ಸೇರಿದಂತೆ ಹಲವು ಮಾಹಿತಿಯನ್ನು ಹ್ಯಾಕ್‌ ಮಾಡಿದೆ. ಸಾಲದ ನೆಪದಲ್ಲಿ ವೈಯಕ್ತಿಕ ದಾಖಲೆ ಕದ್ದಿರುವುದರ ಹಿಂದೆ ಬೇರೆಯದ್ದೆ ಉದ್ದೇಶ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ಚೀನಾದಲ್ಲಿಯೇ ಆ್ಯಪ್‌ ಸಿದ್ಧ

ಮೈಕ್ರೋ ಸಾಲ ನೀಡಲು ಇರುವ ಆ್ಯಪ್‌ಗಳನ್ನು ಚೀನಾದಲ್ಲಿಯೇ ಸಿದ್ಧಪಡಿಸಿರುವ ಬಗ್ಗೆ ದಾಖಲೆಗಳು ಕೂಡ ಸಿಐಡಿಗೆ ದಾಳಿ ವೇಳೆ ಸಿಕ್ಕಿವೆ. ಭಾರತದ ಹಲವು ರಾಜ್ಯಗಳಲ್ಲಿ ಏಜೆನ್ಸಿಗಳಾಗಿ ನೇಮಕಗೊಂಡಿರುವ ವ್ಯಕ್ತಿಗಳನ್ನು ಚೀನಾದಲ್ಲಿಯೇ ಕುಳಿತು ಸಂದರ್ಶನ ಮಾಡಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಈ ಏಜೆನ್ಸಿಗಳು ಗ್ರಾಹಕ ನಿಗದಿತ ಸಮಯದಲ್ಲಿ ಸಾಲ ವಾಪಸ್‌ ಮಾಡದಿದ್ದ ವೇಳೆ ಗ್ರಾಹಕನಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದವು. ಅಲ್ಲದೆ, ಸಾಲಗಾರರ ಮೊಬೈಲ್‌ ದತ್ತಾಂಶಗಳನ್ನು ಹ್ಯಾಕ್‌ ಮಾಡಿ ಅವುಗಳನ್ನು ಬಳಸಿಕೊಂಡು ಸಾಲ ಪಡೆದವರ ಕಾಂಟ್ಯಾಕ್ಟ್ನಲ್ಲಿರುವ ಎಲ್ಲ ವ್ಯಕ್ತಿಗಳನ್ನು ಒಳಗೊಂಡಂತೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ಸಾಲ ಪಡೆದವರ ವೈಯಕ್ತಿಕ ಫೋಟೋಗಳೊಂದಿಗೆ ‘ಚೋರ್‌, ಫ್ರಾಡ್‌, ಡಿಫಾಲ್ಟರ್‌’ ಎಂಬಿತ್ಯಾದಿ ತಲೆ ಬರಹಗಳೊಂದಿಗೆ ನಿಂದನೆ ಮಾಡುತ್ತಿದ್ದರು. ಈ ಸಂಬಂಧ ಕಂಪನಿಗೆ ಸೇರಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಲಕ್ಷಾಂತರ ವೈಯಕ್ತಿಕ ಮಾಹಿತಿ ಕಳವು?

ಈ ಕಂಪನಿಗಳು ಮೂರ್ನಾಲ್ಕು ವರ್ಷದಿಂದ ಈ ರೀತಿ ಮೈಕ್ರೋ ಸಾಲ ನೀಡುವ ವ್ಯವಹಾರದಲ್ಲಿ ತೊಡಗಿದ್ದು, ಕೋಟ್ಯಂತರ ರುಪಾಯಿ ಸಾಲವನ್ನು ಗ್ರಾಹಕರಿಗೆ ನೀಡಿದೆ. ಅಂದಿನಿಂದಲೇ ಲಕ್ಷಾಂತರ ಗ್ರಾಹಕರ ವೈಯಕ್ತಿಕ ಮಾಹಿತಿ ಕಳವು ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಗುಪ್ತಚಾರ ಇಲಾಖೆ (ಐಬಿ) ಸೇರಿದಂತೆ ಹಲವು ರಾಷ್ಟ್ರೀಯ ತನಿಖಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ.

ಸಾಲ ಕೊಡುವುದು ಅದು ಒಂದು ರೀತಿಯ ವ್ಯವಹಾರವಾಗಿದೆ. ಆದರೆ ವ್ಯಕ್ತಿಯ ಮೊಬೈಲ್‌ನ್ನು ಹ್ಯಾಕ್‌ ಮಾಡಿ ವೈಯಕ್ತಿಕ ದಾಖಲೆಗಳನ್ನು ಕಳವು ಮಾಡುತ್ತಿರುವುದು ಅಪರಾಧ. ಹೀಗಾಗಿ ಈ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ವಿದೇಶಿ ಕಂಪನಿಗಳು ಎಂಬುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಎಸ್ಪಿ (ಸೈಬರ್‌) ಎಂ.ಡಿ.ಶರತ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios