ಡ್ರಗ್ಸ್‌ ದಂಧೆ: 1.4 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

Kannadaprabha News   | Asianet News
Published : Jan 22, 2021, 07:23 AM IST
ಡ್ರಗ್ಸ್‌ ದಂಧೆ: 1.4 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಸಾರಾಂಶ

ಪೆಡ್ಲರ್‌ಗಳಿಬ್ಬರ ಬಂಧನ| 9,310 ಎಲ್‌ಎಸ್‌ಡಿ ಸ್ಟ್ರಿಪ್ಸ್‌ ವಶಕ್ಕೆ| ದೇಶದ ವಿವಿಧ ಗ್ರಾಹಕರಿಗೆ ಆ್ಯಪ್‌’ನಲ್ಲಿ ಮುಖೇನ ಡ್ರಗ್ಸ್‌ ಪೂರೈಸುತ್ತಿದ್ದ ಸಂಗತಿ ಬಯಲು| ದಾಳಿ ನಡೆಸಿದ ವೇಳೆ 21 ಗ್ರಾಹಕರಿಗೆ ಕಳುಹಿಸಬೇಕಾದ ಡ್ರಗ್ಸ್‌ ಪತ್ತೆ| ಇನ್ನುಳಿದ ಪಾರ್ಸಲ್‌ಗಳ ಮೇಲೆ ಹರಿಯಾಣ, ಪಂಜಾಬ್‌, ದೆಹಲಿ, ಮುಂಬೈನ ವಿಳಾಸ ನಮೂದು| 

ಬೆಂಗಳೂರು(ಜ.22):  ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಗ್ರಾಹಕರಿಗೆ ‘ಆ್ಯಪ್‌’ ಮೂಲಕ ಡ್ರಗ್ಸ್‌ ಪೂರೈಸುತ್ತಿದ್ದ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು, ಬೆಳ್ಳಿ ವ್ಯಾಪಾರಿ ಸೇರಿದಂತೆ ಇಬ್ಬರನ್ನು ಬಂಧಿಸಿ 1.39 ಕೋಟಿ ರು. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಬಿಟಿಎಂ ಲೇಔಟ್‌ನ ರಾಹುಲ್‌ ತುಳಸಿರಾಮ್‌ ಶರ್ಮಾ (28) ಹಾಗೂ ತಮಿಳುನಾಡಿನ ಸೇಲಂನ ಸಿ.ಬಾಲಾಜಿ (48) ಬಂಧಿತರು. ಈ ಪೆಡ್ಲರ್‌ಗಳಿಂದ 1.39 ಕೋಟಿ ಮೌಲ್ಯದ 9,310 ಎಲ್‌ಎಸ್‌ಡಿ ಸ್ಟ್ರೀಫ್ಸ್‌, ಮೊಬೈಲ್‌, ಲ್ಯಾಪ್‌ ಟಾಪ್‌ಗಳು ಹಾಗೂ 27.50 ಲಕ್ಷ ಜಪ್ತಿ ಮಾಡಿದ್ದಾರೆ. ಮೂರು ದಿನಗಳ ಹಿಂದೆ ದಯಾನಂದ ಸಾಗರ್‌ ಆಸ್ಪತ್ರೆ ಸಮೀಪ ರಾಹುಲ್‌ ಡ್ರಗ್ಸ್‌ ಮಾರಾಟಕ್ಕೆ ಯತ್ನಿಸಿದಾಗ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ತಮಿಳುನಾಡಿನ ಸೇಲಂನಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ದಂಧೆಕೋರ ಬಾಲಾಜಿಯನ್ನು ವಶಕ್ಕೆ ಪಡೆಯಲಾಯಿತು. ಡಾರ್ಕ್ ವೆಬ್‌ ಬಳಸಿ ವಿದೇಶದಿಂದ ಡ್ರಗ್ಸ್‌ ಖರೀದಿಸಿ ಬಳಿಕ ದೇಶದ ವಿವಿಧ ಗ್ರಾಹಕರಿಗೆ ‘ಆ್ಯಪ್‌’ನಲ್ಲಿ ಮುಖೇನ ಬಾಲಾಜಿ ಪೂರೈಸುತ್ತಿದ್ದ ಸಂಗತಿ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ವೇಳೆ ಡ್ರಗ್ಸ್‌ ಪಾರ್ಸಲ್‌:

ಬಿ.ಕಾಂ. ಪದವೀಧರನಾಗಿರುವ ಬಾಲಾಜಿ, ವೃತ್ತಿಯಲ್ಲಿ ಬೆಳ್ಳಿ ವ್ಯಾಪಾರ ನಡೆಸುತ್ತಿದ್ದಾನೆ. ಹಣದಾಸೆಗೆ ಡ್ರಗ್ಸ್‌ ದಂಧೆಗಿಳಿದ ಆತ, ನಾಲ್ಕೈದು ವರ್ಷಗಳಿಂದ ಸಕ್ರಿಯವಾಗಿ ಡ್ರಗ್ಸ್‌ ಪೂರೈಕೆದಾರನಾಗಿದ್ದಾನೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆ್ಯಪ್‌ವೊಂದರ ಮೂಲಕ ಗ್ರಾಹಕರನ್ನು ಬಾಲಾಜಿ ಸಂಪರ್ಕಿಸುತ್ತಿದ್ದ. ಡಾರ್ಕ್ ವೆಬ್‌ ಬಳಸಿ ನೆದರ್‌ ಲ್ಯಾಂಡ್‌ನಿಂದ ಡ್ರಗ್ಸ್‌ ಖರೀದಿಸುತ್ತಿದ್ದ ಆತ, ಬಳಿಕ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳ ಗ್ರಾಹಕರಿಗೆ ಅಂಚೆ ಮೂಲಕ ಡ್ರಗ್ಸ್‌ ತಲುಪಿಸುತ್ತಿದ್ದ. ಆ್ಯಪ್‌ನಲ್ಲಿ ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ಪಡೆಯುತ್ತಿದ್ದ. ಸೇಲಂ ನಗರದಲ್ಲಿ ರಾತ್ರಿ ವೇಳೆ ಕಾರ್ಯನಿರ್ವಹಿಸುವ ಅಂಚೆ ಕಚೇರಿಯೊಂದರಿಂದ ಆತ ಪಾರ್ಸಲ್‌ ಕಳುಹಿಸುತ್ತಿದ್ದ. ಹಗಲು ಹೊತ್ತಿನಲ್ಲಿ ಸಭ್ಯಸ್ಥನಂತೆ ಬೆಳ್ಳಿ ವ್ಯವಹಾರದಲ್ಲಿ ತೊಡಗುತ್ತಿದ್ದ. ರಾತ್ರಿ 9ರ ಬಳಿಕ ಆತ ಡ್ರಗ್ಸ್‌ ಸಾಗಾಣಿಕೆ ಶುರುವಾಗುತ್ತಿತ್ತು ಎಂದು ಪೊಲೀಸರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಡ್ರಗ್ಸ್‌ ಮಾರುತ್ತಿದ್ದ ಕಾಂಗೋ, ನೈಜೀರಿಯಾ ಪ್ರಜೆಗಳ ಬಂಧನ

ಅಂತೆಯೇ ಆ್ಯಪ್‌ ಮೂಲಕ ಬಾಲಾಜಿಗೆ ಬೆಂಗಳೂರಿನ ಪೆಡ್ಲರ್‌ ರಾಹುಲ್‌ ಸಂಪರ್ಕವಾಗಿತ್ತು. ರಾಹುಲ್‌ ಸಹ ಎಲ್‌ಎಸ್‌ಎಸ್‌ಡಿ ಡ್ರಗ್ಸ್‌ಗೆ ಬೇಡಿಕೆ ಇಟ್ಟಿದ್ದ. ದಯಾನಂದ ಸಾಗರ್‌ ಕಾಲೇಜು ಬಳಿ ಸೋಮವಾರ ಡ್ರಗ್ಸ್‌ ಮಾರಾಟದ ವೇಳೆ ರಾಹುಲ್‌ ಸಿಕ್ಕಿಬಿದ್ದಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಅಂದೆ ರಾತ್ರಿ ಸೇಲಂಗೆ ತೆರಳಿದ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು, ಅಂದೇ ರಾತ್ರಿ ಅಂಚೆ ಕಚೇರಿಗೆ ಪಾರ್ಸಲ್‌ ಕಳುಹಿಸಲು ಬಂದ ಬಾಲಾಜಿಯನ್ನು ಬಂಧಿಸಿದ್ದಾರೆ.
ನಂತರ ಬಾಲಾಜಿ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ವಿವಿಧ ನಗರಗಳಿಗೆ ಪೂರೈಸಲು ಸಂಗ್ರಹಿಸಿಟ್ಟಿದ್ದ 1.39 ಕೋಟಿ ಮೌಲ್ಯದ ಡ್ರಗ್ಸ್‌, ನಗದು ಹಣ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಬಳಿಕ ನಗರಕ್ಕೆ ಕರೆದು ತಂದು ಬಾಲಾಜಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಜಾಲವನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಪಿ.ಶಿವಕುಮಾರ್‌, ಇನ್ಸ್‌ಪೆಕ್ಟರ್‌ ಎಸ್‌.ನಂಜೇಗೌಡ, ಸಬ್‌ ಇನ್ಸ್‌ಪೆಕ್ಟರ್‌ಗಳಾದ ಪಿ.ಸುಬ್ರಹ್ಮಣಿ, ವಿದ್ಯಾ ಹಾಗೂ ನಾಗೇಶ್‌ ತಂಡ ಪತ್ತೆ ಹಚ್ಚಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.

ದೇಶದಲ್ಲೇ ಅಧಿಕ ಎಲ್‌ಎಸ್‌ಡಿ ಪತ್ತೆ

ದೇಶದಲ್ಲೇ ಅತಿ ಹೆಚ್ಚು ಎಸ್‌ಎಲ್‌ಸಿ ಡ್ರಗ್ಸ್‌ ಬಾಲಾಜಿ ಬಳಿ ಪತ್ತೆಯಾಗಿದೆ. ಈ ಮೊದಲು ದೆಹಲಿ ಪೊಲೀಸರು 2 ಸಾವಿರ ಹಾಗೂ ಬೆಂಗಳೂರಿನ ಸಿಸಿಬಿ 1 ಸಾವಿರ ಎಲ್‌ಎಸ್‌ಡಿ ವಶಪಡಿಸಿಕೊಂಡಿದ್ದರು. ಆದರೆ ಬಾಲಾಜಿ ಬಳಿ 1.39 ಕೋಟಿ ಮೌಲ್ಯದ 9,310 ಎಲ್‌ಎಸ್‌ಡಿ ಸ್ಟ್ರೀಫ್ಸ್‌ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಗೂಗಲ್‌ ನೋಡಿ ದಂಧೆ

ತನಗೆ ಬೆಳ್ಳಿ ವ್ಯಾಪಾರದಲ್ಲಿ ತುಂಬಾ ನಷ್ಟವಾಯಿತು. ಇದಕ್ಕಾಗಿ ಸ್ನೇಹಿತರ ಸಲಹೆ ಮೇರೆಗೆ ಡ್ರಗ್ಸ್‌ ದಂಧೆ ಶುರುಮಾಡಿದೆ. ಡ್ರಗ್ಸ್‌ ಖರೀದಿ ಮತ್ತು ಮಾರಾಟದ ಬಗ್ಗೆ ಗೂಗಲ್‌ ಸರ್ಚ್‌ನಲ್ಲಿ ಮಾಹಿತಿ ಪಡೆದು ಕಲಿತುಕೊಂಡೆ ಎಂದು ವಿಚಾರಣೆ  ವೇಳೆ ಬಾಲಾಜಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ಬಿಕಾಂ ಓದಿರುವ ಬಾಲಾಜಿಗೆ ತಾಂತ್ರಿಕವಾಗಿ ನಿಪುಣನಾಗಿದ್ದಾನೆ. ಈ ಬುದ್ಧಿವಂತಿಕೆಯಿಂದಲೇ ಡ್ರಗ್ಸ್‌ ದಂಧೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದ. ಡಾರ್ಕ್‌ನೆಟ್‌ನಲ್ಲಿ ಕೇವಲ 250ಗೆ ಎಲ್‌ಎಸ್‌ಡಿ ಖರೀದಿಸಿ ಬಳಿಕ ಗ್ರಾಹಕರಿಗೆ ಅದನ್ನೇ 5 ಸಾವಿರಕ್ಕೆ ಮಾರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೈಸೂರು, ಬೆಂಗಳೂರು ಗ್ರಾಹಕರು ಪತ್ತೆ

ಬಾಲಾಜಿ ಮನೆ ಮೇಲೆ ದಾಳಿ ನಡೆಸಿದಾಗ 21 ಗ್ರಾಹಕರಿಗೆ ಕಳುಹಿಸಬೇಕಾದ ಡ್ರಗ್ಸ್‌ ಪತ್ತೆಯಾಯಿತು. ಇದರಲ್ಲಿ ಬೆಂಗಳೂರಿನ ಓರ್ವ ಹಾಗೂ ಮೈಸೂರಿನ ಇಬ್ಬರು ಗ್ರಾಹಕರು ಸೇರಿದ್ದಾರೆ. ಇನ್ನುಳಿದ ಪಾರ್ಸಲ್‌ಗಳ ಮೇಲೆ ಹರಿಯಾಣ, ಪಂಜಾಬ್‌, ದೆಹಲಿ, ಮುಂಬೈನ ವಿಳಾಸಗಳು ನಮೂದಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!