
ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆದಾರರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡಲು ಒಂದಲ್ಲ, ಒಂದು ಹೊಸ ಹೊಸ ಹಾದಿ ಹಿಡಿಯುತ್ತಿದ್ದಾರೆ. ಈಗ ಅವರು ಪುಟ್ಟ ಮಕ್ಕಳನ್ನು ಕೂಡ ಈ ಜಾಲದಲ್ಲಿ ಭಾಗಿಯಾಗಲು ಬಳಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಹೌದು ದ್ವೀಪರಾಷ್ಟ್ರ ಮಾರಿಷಸ್ ಏರ್‌ಪೋರ್ಟ್‌ನಲ್ಲಿ 6 ವರ್ಷದ ಬಾಲಕನೂ ಸೇರಿದಂತೆ ಒಟ್ಟು 7ಜನರನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಾಲಕನ ಸೂಟ್‌ಕೇಸ್‌ನಲ್ಲಿ 14 ಕೇಜಿ ಗಾಂಜಾ ಇತ್ತು. ಈ 7 ಜನರಿಂದ ಸುಮಾರು 161 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದರ ಮೊತ್ತ 1.6 ಮಿಲಿಯನ್ ಪೌಂಡ್ ಅಂದರೆ ಅಂದಾಜು 18.8 ಕೋಟಿ ಭಾರತೀಯ ರೂಪಾಯಿಗಳು. ಬಾಲಕನೂ ಸೇರಿದಂತೆ ಈ ಪ್ರಕರಣದಲ್ಲಿ ಬಂಧಿತರಾದ ಎಲ್ಲರೂ ಬ್ರಿಟಿಷ್ ಪ್ರಜೆಗಳಾಗಿದ್ದಾರೆ. ಈ ಗಾಂಜಾವನ್ನು ಸೆಲೋಫೇನ್‌ನಿಂದ ಸಂಪೂರ್ಣವಾಗಿ ಕವರ್ ಮಾಡಲಾಗಿತ್ತು.
ದಿ ಟೆಲಿಗ್ರಾಫ್ ಪ್ರಕಾರ , ಭಾನುವಾರ ಸರ್ ಸೀವೂಸಾಗುರ್ ರಾಮ್‌ಗೂಲಂ ವಿಮಾನ ನಿಲ್ದಾಣದಲ್ಲಿ ಮಗುವನ್ನು ಇತರ ಏಳು ಜನರೊಂದಿಗೆ ಬಂಧಿಸಲಾಯಿತು. ಈ ಗುಂಪು 1.6 ಮಿಲಿಯನ್ ಪೌಂಡ್‌ಗಳು (ಸುಮಾರು 18.8 ಕೋಟಿ ರೂ.) ಮೌಲ್ಯದ 161 ಕಿಲೋಗ್ರಾಂಗಳಷ್ಟು ಗಾಂಜಾವನ್ನುತಮ್ಮ ಲಗೇಜ್‌ನಲ್ಲಿ ಮರೆಮಾಡಿತ್ತು ಎಂದು ವರದಿಯಾಗಿದೆ.
ಬ್ರಿಟನ್‌ನ ಗ್ಯಾಟ್ವಿಕ್‌ನಿಂದ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಬಂದು ಮಾರಿಷಸ್‌ನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಈ ಗಾಂಜಾ ಗ್ಯಾಂಗ್ ಇಳಿದಿದೆ. ಪ್ರಕರಣದಲ್ಲಿ ಬಾಲಕನ ತಾಯಿಯನ್ನು ಸಹ ಬಂಧಿಸಲಾಗಿದ್ದು, ಆಕೆಯ ಚೀಲದಲ್ಲಿ 17 ಕೆಜಿ ಗಾಂಜಾ ಮರೆಮಾಡಲಾಗಿತ್ತು. ಈ ಪ್ರಕರಣದಲ್ಲಿ 8ನೇ ಶಂಕಿತನನ್ನು ಬ್ರಿಟನ್‌ನಲ್ಲಿ ವಾಸಿಸುತ್ತಿರುವ ರೊಮೇನಿಯನ್ ಮೂಲದವ ಎಂದು ವರದಿಯಾಗಿದೆ. ಆತ 32 ಪ್ಯಾಕೆಟ್ ಗಾಂಜಾವನ್ನು ಹೊಂದಿದ್ದ ಎಂದು ವರದಿಯಾಗಿದೆ.
ಮಾದಕವಸ್ತುಗಳನ್ನು ಸಾಗಿಸಲು ಮಗುವನ್ನು ಬಳಸಿರುವುದಕ್ಕೆ ಮಾರಿಷಸ್ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಅತಿರೇಕದ ಮತ್ತು ಅಮಾನವೀಯ ಪ್ರಕರಣ, ಇತ್ತೀಚಿನ ವರ್ಷಗಳಲ್ಲಿ ನಾವು ಎದುರಿಸಿದ ಅತ್ಯಂತ ಹೇಯ ಪ್ರಕರಣಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ. ಆ ಹುಡುಗನಿಗೆ ತನ್ನ ಬ್ಯಾಗ್‌ಗಳಲ್ಲಿ ಏನಿದೆ ಎಂದು ತಿಳಿದಿರಲಿಲ್ಲ. ಅವನನ್ನು ಬುಧವಾರ ಯುಕೆಗೆ ಕಳುಹಿಸಲಾಯ್ತು ಮತ್ತು ಅವನು ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳು 11 ಆಪಲ್ ಏರ್‌ಟ್ಯಾಗ್‌ಗಳನ್ನು ಪತ್ತೆಹಚ್ಚಿದ್ದು, ಇದು ಮಾದಕವಸ್ತು ಗ್ಯಾಂಗ್‌ನೊಂದಿಗೆ ಇರುವ ಸಂಬಂಧವನ್ನು ಸೂಚಿಸುತ್ತದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮಾದಕವಸ್ತು ವಿರೋಧಿ ವಿಭಾಗ (CANS) ಮತ್ತು ಮಾದಕವಸ್ತು ವಿರೋಧಿ ಮತ್ತು ಕಳ್ಳಸಾಗಣೆ ಘಟಕ (ADSU) ಜಂಟಿ ಕಾರ್ಯಾಚರಣೆಯ ಸಮಯದಲ್ಲಿ ಈ ಮಾದಕವಸ್ತು ಸಂಗ್ರಹ ಪತ್ತೆಯಾಗಿದೆ. ಯುರೋಪ್‌ನಿಂದ ಮಾರಿಷಸ್‌ಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಜವಾಬ್ದಾರಿಯುತ ಸಂಘಟಿತ ಅಪರಾಧ ಜಾಲದ ಭಾಗವಾಗಿ ಈ ಗುಂಪು ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಳು ಆರೋಪಿಗಳಲ್ಲಿ 5 ಮಹಿಳೆಯರು ಮತ್ತು ಇಬ್ಬರು ಪುರುಷರಾಗಿದ್ದು, ಮಾದಕವಸ್ತು ಕಳ್ಳಸಾಗಣೆ ಆರೋಪ ಹೊರಿಸಿ ಅವರನ್ನು ಬಂಧನದಲ್ಲಿಡಲಾಗಿದೆ. ಅವರನ್ನು ದ್ವೀಪದ ಆಗ್ನೇಯ ಕರಾವಳಿಯಲ್ಲಿರುವ ಮಹೆಬರ್ಗ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ಪೂರ್ವ ಬಂಧನದಲ್ಲಿದ್ದಾರೆ.
ಇದಾದ ನಂತರ ಹೆಚ್ಚಿನ ವಿದೇಶಿ ಪ್ರಯಾಣಿಕರು ಮಾದಕ ದ್ರವ್ಯಗಳನ್ನು ಸಾಗಿಸುತ್ತಿರಬಹುದು ಎಂಬ ಸುಳಿವು ಪೊಲೀಸರಿಗೆ ದೊರೆತ ನಂತರ, ಅಧಿಕಾರಿಗಳು ಬ್ರಿಟಿಷ್ ಪ್ರಜೆಗಳಿದ್ದ ಹೋಟೆಲ್‌ಗಳ ಮೇಲೆ ಗುರಿಯಿಟ್ಟು ಸರಣಿ ದಾಳಿಗಳನ್ನು ನಡೆಸಿದ್ದಾರೆ. ಆದರೆ ದಾಳಿ ನಡೆಸಿದ ಸ್ಥಳದಿಂದ ಯಾರನ್ನೂ ಬಂಧಿಸಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ