
ಮೈಸೂರು (ಜುಲೈ.31) ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ. ಮಹಾರಾಷ್ಟ್ರ ಪೊಲೀಸರು ಬಂದು ಮೈಸೂರಿನಲ್ಲಿ ಅತಿದೊಡ್ಡ ರೇಡ್ ಮಾಡಿದ ಮೇಲೆ ಮೈಸೂರು ಪೊಲೀಸರು ಮನೆ ಮನೆ ಹೊಕ್ಕಿ ಕಳ್ಳರನ್ನ ಹಿಡಿಯುತ್ತಿದ್ದಾರೆ. ಗಾಂಜಾ, ಡ್ರಗ್ಸ್ ಅಂತ ಹುಡುಕಿ ಹುಡುಕಿ ಕೇಸ್ ಹಾಕುತ್ತಿದ್ದಾರೆ. ಇದನ್ನೆಲ್ಲ ನೋಡಿದ ಜನ ಮೈಸೂರು ಪೊಲೀಸರಿಗೆ ಕೆಟ್ಟ ಮೇಲೆ ಬುದ್ದಿ ಬಂದಿದೆ ಎನ್ನುತ್ತಿದ್ದಾರೆ.
ಹೌದು, ಕಳೆದ ಶನಿವಾರ ಇಡೀ ಮೈಸೂರು ಜನರನ್ನು ಬೆಚ್ಚಿ ಬೀಳಿಸುವಂತಹ ರೇಡ್ ಮೈಸೂರಿನಲ್ಲಿ ನಡೆದಿತ್ತು. ಮಹಾರಾಷ್ಟ್ರದಿಂದ ಬಂದಿದ್ದ ಪೊಲೀಸರು. ಡ್ರಗ್ಸ್ ತಯಾರಿಕೆ ಘಟಕದ ಮೇಲೆ ದಾಳಿ ಮಾಡಿ ಸುಮಾರು ನೂರು ಕೋಟಿ ಬೆಲೆಯ 50ಕೆಜಿ ಗೂ ಅಧಿಕ ಡ್ರಗ್ ವಶಪಡಿಸಿಕೊಂಡು ನಾಲ್ವರು ಆರೋಪಗಳನ್ನು ಬಂಧಿಸಿದ್ದರು. ಮೈಸೂರು ರಿಂಗ್ ರಸ್ತೆಯಲ್ಲೇ ಗ್ಯಾರೇಜ್ ಹೆಸರಿನಲ್ಲಿ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಡ್ರಗ್ ತಯಾರಿಕ ಘಟಕ ಕಂಡು ಇಡೀ ಮೈಸೂರು ಜನರು ಬೆಚ್ಚಿ ಬಿದ್ದಿದ್ದರು.
ಅಸಲಿಗೆ ಅಂದು ಒಂದೇ ದಿನ ಮಹಾರಾಷ್ಟ್ರ ಪೊಲೀಸರು ಮೈಸೂರು ಹಾಗೂ ಮಹಾರಾಷ್ಟ್ರದಲ್ಲಿ ನಡೆಸಿದ ರೇಡ್ ನಿಂದ ಬರೋಬ್ಬರಿ 391 ಕೋಟಿ ಮೌಲ್ಯದ ಮಾದಕ ವಸ್ತುಗಳು ಸಿಕ್ಕಿ ಬಿದ್ದಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತಾಗಿತ್ತು.
ಮಹಾರಾಷ್ಟ್ರ ಪೊಲೀಸರ ಈ ದಾಳಿಯಲ್ಲಿ ಮೈಸೂರನ್ನೂ ಒಳಗೊಂಡಂತೆ 268.79 kg MDMA, ಇದರ ಅಂತರಾಷ್ಟ್ರೀಯ ಮೌಲ್ಯ 381.94 ಕೋಟಿ. MDMA ತಯಾರಿಕೆಗೆ ಬಳಸುತ್ತಿದ್ದ 2 ಓವನ್, 11 ಹೀಟಿಂಗ್ ಮಿಶಿನ್, 86 kg ಐಸೊಪ್ರೊಪೈಲ್, 166 kg ಅಸಿಟೋನ್, 60kg ಕ್ಲೋರೊಫಾರಂ, 264.60 kg ಮೆಂಥಾಶಿಯಂ ಸಲ್ಫೇಟ್, ಪ್ಲಾಸ್ಟಿಕ್ ಡ್ರಮ್, ಗ್ಲಾಸ್ ಜಾರ್ಸ್, ಪ್ಲಾಸ್ಟಿಕ್ ಟಬ್ಸ್ ಮತ್ತು ಬಕೆಟ್ ಸೇರಿದಂತೆ ಇನ್ನಿತರ ವಸ್ತುಗಳು ಹಾಗೂ ನಾಲ್ವರನ್ನ ವಶಕ್ಕೆ ಪಡೆದಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದರು.
ಇಷ್ಟೆಲ್ಲದರ ನಡುವೆ ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಮೈಸೂರು ಪೊಲೀಸರು ಈಗ ನಿರಂತರ ರೇಡ್ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ಮೈಸೂರು ನಗರದ ಉದಯಗಿರಿ, ನರಸಿಂಹರಾಜ ಹಾಗೂ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸುತ್ತಿರುವ ಮೈಸೂರು ಪೊಲೀಸರು ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ.
ಲಾಡ್ಜ್, ಪಿಜಿ, ಶೆಡ್, ಪಾರ್ಕ್, ಮೆಡಿಕಲ್ ಸ್ಟೋರ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ನಿರಂತರ ರೈಡ್ ಮಾಡುತ್ತಿದ್ದಾರೆ. 100 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ, 60 ಜನರ ವಿರುದ್ಧ ಮಾದಕ ವಸ್ತು ಕನ್ಸಂಷನ್ ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ 6 ಜನ ಗಾಂಜಾ ಪೆಡ್ಲರ್ಸ್ ಗಳ ಬಂಧಿಸಿ, ಗಾಂಜಾ ಮಾರಾಟ ಮಾಡುವವರನ್ನ ಗಡಿಪಾರು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಟಿ ಪೊಲೀಸ್ ಕಮಿಷನರ್ ಮಹಾರಾಷ್ಟ್ರ ಪೊಲೀಸರ ರೇಡ್ ಬಗ್ಗೆ ಮಾತನಾಡಲು ಮಾತ್ರ ಹಿಂದೇಟು ಹಾಕಿದ್ದಾರೆ.
ಒಟ್ಟಾರೆ ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಮಹಾರಾಷ್ಟ್ರ ಪೊಲೀಸರು ರೇಡ್ ಮಾಡುವುದಕ್ಕಿಂತಲೂ ಮುಂಚೆಯೇ ನಿರಂತ ಬೀಟ್ ನಡೆಸಿದ್ದರೆ ಇಂತಹದೊಂದು ಮುಜುಗರದಿಂದ ತಪ್ಪಿಸಿಕೊಳ್ಳಬಹುದಿತ್ತೇನೊ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ