* ಜಾಮೀನು ಷರತ್ತು ಪದೇ ಪದೇ ಉಲ್ಲಂಘಿಸಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿ
* ಆರೋಪಿಯನ್ನು ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲು ಆದೇಶಿಸಿದ್ದ ಪೊಲೀಸ್ ಆಯುಕ್ತ
* ಆರೋಪಿಯನ್ನು ಒಂದು ವರ್ಷದ ಅವಧಿಗೆ ಬಂಧನದಲ್ಲಿರಿಸಲಾಗಿದೆ
ಬೆಂಗಳೂರು(ಜು.03): ಜಾಮೀನು ಪಡೆದು ಜೈಲಿನಿಂದ ಹೊರಬಂದು ಮತ್ತೆ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ಸ್ ಪೆಡ್ಲರ್‌ನನ್ನು ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ.
ಮಾಗಡಿ ರಸ್ತೆ ನಿವಾಸಿ ನಾರಾಯಣ(42) ಬಂಧಿತ. ಆರೋಪಿಯು ನಂದಿನಿ ಲೇಔಟ್, ಶ್ರೀರಾಮಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಈತ 2017ರಿಂದಲೂ ಮಾದಕವಸ್ತು ಮಾರಾಟ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಶ್ರೀರಾಮಪುರ, ನಂದಿನಿ ಲೇಔಟ್ ಪೊಲೀಸ್ ಠಾಣೆಗಳಲ್ಲಿ ಆರು ಎನ್‌ಡಿಪಿಎಸ್ ಪ್ರಕರಣಗಳು ಹಾಗೂ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿವೆ.
Bengaluru: 28 ಟನ್ ತೂಕದ 60 ಕೋಟಿ ಡ್ರಗ್ಸ್ ನಾಶ ಮಾಡಿದ ಪೊಲೀಸರು!
ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯು ಬಳಿಕವೂ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಈ ವೇಳೆ ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದರು.
ಆರೋಪಿಯು ಜಾಮೀನಿನ ಮೇಲೆ ಹೊರಬಂದು ಜಾಮೀನು ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿ ಮಾದಕವಸ್ತು ಮಾರಾಟ ದಂಧೆ ಮುಂದುವರಿಸಿದ್ದರಿಂದ ಶ್ರೀರಾಮಪುರ ಠಾಣೆ ಪೊಲೀಸರ ವರದಿ ಮೇರೆಗೆ ನಗರ ಪೊಲೀಸ್ ಆಯುಕ್ತರು ಆರೋಪಿಯನ್ನು ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲು ಆದೇಶಿಸಿದ್ದರು. ಅದರಂತೆ ಆರೋಪಿಯನ್ನು ಒಂದು ವರ್ಷದ ಅವಧಿಗೆ ಬಂಧನದಲ್ಲಿರಿಸಲಾಗಿದೆ.