
ಕೇಂದ್ರ ಸರ್ಕಾರದ ಹಾಗೂ ಹಿಂದೂಗಳ ವಿರುದ್ಧ ಸದಾ ವಿವಾದಿತ ವಿಡಿಯೋ ಹಾಕುವಲ್ಲಿ ಫೇಮಸ್ ಆಗಿರೋ ಯುಟ್ಯೂಬರ್ ಧ್ರುವ್ ರಾಠಿ ಬಗ್ಗೆ ಆಗಾಗ್ಗೆ ಸುದ್ದಿಗಳು ಸದ್ದು ಮಾಡುತ್ತಲೇ ಇರುತ್ತವೆ. ಇವರ ನಿಜವಾದ ಹೆಸರು ಬದ್ರು ಹಾಗೂ ಪತ್ನಿ ಪಾಕಿಸ್ತಾನಿ. ಇವರು ಹಿಂದೂವಲ್ಲ ಎಂಬೆಲ್ಲಾ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು. ಇದಕ್ಕೆ ದಾಖಲೆ ಸಹಿತ ನೀಡುವುದಾಗಿ ಕೆಲವರು ಏನೇನೋ ದಾಖಲೆಗಳನ್ನೂ ನೀಡಿದ್ದುಂಟು. ಅದನ್ನು ಖುದ್ದು ಧ್ರುವ್ ಅವರು ನಿರಾಕರಿಸುತ್ತಲೇ ಹಿಂದೂ ದೇವರ ವಿರುದ್ಧ ಅವಹೇಳನ ಎನ್ನುವಂಥ ವಿಡಿಯೋ ಮಾಡಿದ್ದು, ಅದೀಗ ಭಾರಿ ವಿವಾದ ಸೃಷ್ಟಿಸಿದೆ. ಭಾರತದಲ್ಲಿ ಆ ವಿಡಿಯೋ ಡಿಲೀಟ್ ಮಾಡಲಾಗಿದ್ದು, ವಿಶ್ವಾದ್ಯಂತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೂಗಲ್ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ದಿ ಕೇರಳ ಸ್ಟೋರಿಯಲ್ಲಿ ಸತ್ಯಾಂಶವೇ ಇಲ್ಲ, ಅವೆಲ್ಲಾ ಕಪೋಕಲ್ಪಿತ. ಲವ್ ಜಿಹಾದ್ ಎನ್ನುವುದು ನಡೆಯುವುದೇ ಇಲ್ಲ ಎನ್ನುವವರಲ್ಲಿ ಧ್ರುವ್ ಕೂಡ ಒಬ್ಬರು. ಅದೇ ರೀತಿ, ಅವರು ದಿ ಕೇರಳ ಸ್ಟೋರಿ 2' ಚಿತ್ರದ ಕುರಿತು ವಿಡಿಯೋ ಮಾಡಿದಾಗ, ಹಿಂದೂ ದೇವರ ಆಹಾರದ ಪದ್ಧತಿಯ ಕುರಿತು ಮಾತನಾಡಿದ್ದರು. ಪ್ರಾಚೀನ ಗ್ರಂಥಗಳು, ಶಾಸ್ತ್ರಗಳು ಮತ್ತು ಆಧುನಿಕ ಸಮೀಕ್ಷೆಗಳನ್ನು ಉಲ್ಲೇಖಿಸಿದ್ದ ಅವರು, ರಾಮಾಯಣ ಮತ್ತು ಮಹಾಭಾರತ ಕಾಲದ ಯೋಧರು ತಮ್ಮ ವನವಾಸದ ಸಮಯದಲ್ಲಿ ಜಿಂಕೆ ಮಾಂಸ ಸೇರಿದಂತೆ ಇತರ ಮಾಂಸ ಮತ್ತು ಮದ್ಯ ಸೇವಿಸುತ್ತಿದ್ದರು ಎಂದಿದ್ದರು. ಈ ವಿಡಿಯೋದಲ್ಲಿ ಶ್ರೀರಾಮಚಂದ್ರ, ಶ್ರೀಕೃಷ್ಣ ಮತ್ತು ಪಾಂಡವರ ಹೆಸರುಗಳನ್ನು ಪ್ರಸ್ತಾಪಿಸಿದ್ದರು.
ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ವಕೀಲೆ ಅಮಿತಾ ಸಚ್‌ದೇವ ಅವರು ಕೋರ್ಟ್ಮೊರೆ ಹೋಗಿದ್ದರು. ಹಿಂದೂ ದೇವರ ಬಗ್ಗೆ ಅವಹೇಳನ ಮಾಡಲಾಗಿದೆ. ಈ ವಿಡಿಯೋ ತೆಗೆಸುವಂತೆ ಗೂಗಲ್ಗೆ ಆದೇಶಿಸುವಂತೆ ಅವರು ಮನವಿ ಮಾಡಿದ್ದರಿಂದ ಕೋರ್ಟ್ ಈ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ, ಗೂಗಲ್ ಪರ ವಕೀಲರು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಹೈಕೋರ್ಟ್ಗೆ ಈ ಮಾಹಿತಿ ನೀಡಿದ್ದಾರೆ. ಸದ್ಯ ಭಾರತದಲ್ಲಿ ಈ ವಿಡಿಯೋ ಡಿಲೀಟ್ ಮಾಡಲಾಗಿದೆ. ಆದರೆ ಜಾಗತಿಕವಾಗಿ ತೆಗೆದುಹಾಕುವ ವಿನಂತಿಯು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಬಾಕಿ ಇದೆ ಎಂದು ವಕೀಲರು ತಿಳಿಸಿದ್ದಾರೆ.
ಈ ವೀಡಿಯೊ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮವಾಗಿದೆ ಎಂದು ಅರ್ಜಿದಾರರಾಗಿರುವ ಅಮಿತಾ ಸಚ್‌ದೇವ ಆರೋಪಿಸಿದ್ದಾರೆ. ರಾಠಿ ವಿರುದ್ಧ ಮ್ಯಾಜಿಸ್ಟ್ರೇಟ್ ಮುಂದೆ ಕ್ರಿಮಿನಲ್ ದೂರು ದಾಖಲಿಸಿದ್ದಾರೆ, ಅವರು ಹಿಂದೂ ಧರ್ಮಗ್ರಂಥಗಳನ್ನು ವಿರೂಪಗೊಳಿಸಿದ್ದಾರೆ ಮತ್ತು "ಸನಾತನ ಧರ್ಮದ ಪಾವಿತ್ರ್ಯವನ್ನು ಅಪಹಾಸ್ಯ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ. ಜುಲೈ 3 ರಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ, ಕೇಂದ್ರ ಸರ್ಕಾರದ ಕುಂದುಕೊರತೆ ಮೇಲ್ಮನವಿ ಸಮಿತಿಯು ವೀಡಿಯೊವನ್ನು ನಿರ್ಬಂಧಿಸಲು ಆದೇಶಿಸಿತ್ತು. ಜಾಗತಿಕವಾಗಿ ಇದನ್ನು ಡಿಲೀಟ್ ಮಾಡಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದಿನ ತಿಂಗಳಿಗೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ