
ಹರ್ಯಾಣ(ಜು.19): ಮೈನಿಂಗ್ ಮಾಫಿಯಾಗೆ ದಕ್ಷ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಅಕ್ರಮ ಗಣಿಕಾರಿಕೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಡೆಪ್ಯೂಟಿ ಸೂಪರಿಡೆಂಟ್ ಪೊಲೀಸ್ ಮೇಲೆ ದಂಧೆಕೋರರು ಟ್ರಕ್ ಹತ್ತಿಸಿ ಹತ್ಯೆಗೈದ ಘಟನೆ ಹರ್ಯಾಣದ ನುಹಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಆಕ್ರೋಶ ಹೆಚ್ಚಾಗಿದ್ದು, ಇತ್ತ ಮಾಫಿಯಾ ಮಟ್ಟ ಹಾಕಲು ಪೊಲೀಸರು ತನಿಖಾ ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ. ನುಹಾ ಜಿಲ್ಲೆಯಲ್ಲಿ ತೌರು ವಲಯದಲ್ಲಿ ಅಕ್ರಮ ಮೈನಿಂಗ್ ವಿರುದ್ಧ ತನಿಖೆ ಆರಂಭಿಸಿದ ಡಿಎಸ್‌ಪಿ ಸುರೇಂದ್ರ ಸಿಂಗ್‌ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಇದರ ಜಾಡು ಬೆನ್ನತ್ತಿದ್ದ ಸುರೇಂದ್ರ ಸಿಂಗ್ ನೇರವಾಗಿ ತೌರು ವಲಯಕ್ಕೆ ಧಾವಿಸಿದ್ದಾರೆ. ಇಬ್ಬರು ಪೊಲೀಸರ ಜೊತೆಗೂಡಿ ಪೊಲೀಸ್ ವಾಹನದಲ್ಲಿ ಅರವಾಲಿ ಬೆಟಕ್ಕೆ ತೆರಳಿದ ಡಿಎಸ್‌ಪಿ ಎದುರಿಂದ ಬರುತ್ತಿದ್ದ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಟ್ರಕ್ ಗಮನಿಸಿ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ದಂಧೆಕೋರರು ಟ್ರಕ್ ನಿಲ್ಲಿಸದೆ ವೇಗವಾಗಿ ಡಿಎಸ್‌ಪಿಯತ್ತ ಚಲಾಯಿಸಿದ್ದಾರೆ. ಟ್ರಕ್ ಹತ್ತಿರಬರುತ್ತಿದ್ದಂತೆ ಇಬ್ಬರು ಪೊಲೀಸರು ಪಕ್ಕಕ್ಕೆ ಜಿಗಿದಿದ್ದಾರೆ. ಆದರೆ ಡಿಎಸ್‌ಪಿಗೆ ಜಿಗಿಯಲು ಸಾಧ್ಯವಾಗಿಲ್ಲ. ಡಿಎಸ್‌ಪಿ ಮೇಲೆ ಟ್ರಕ್ ಹತ್ತಿಸಿದ ದುಷ್ಕರ್ಮಿಗಳು ಅಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ.
ಟ್ರಕ್ ಹರಿದು ತೀವ್ರವಾಗಿ ಗಾಯಗೊಂಡ ಡಿಎಸ್‌ಪಿ ಸುರೇಂದ್ರ ಸಿಂಗ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಸುರೇಂದ್ರ ಸಿಂಗ್ ಪ್ರಾಣ ಪಕ್ಷಿ ಹಾರಿಹೋಗಿದೆ. ಬೆಳಗ್ಗೆ 11.50ಕ್ಕೆ ಅರವಾಲಿ ಬೆಟ್ಟಕ್ಕೆ ಧಾವಿಸಿದ ಸುರೇಂದ್ರ ಸಿಂಗ್ ಮೇಲೆ ಈ ದಾಳಿ ನಡೆದಿದೆ. 1994ರಲ್ಲಿ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಸುರೇಂದ್ರ ಸಿಂಗ್ ಇನ್ನು ಕೆಲವೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದರು. ಆಘಾತ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಿಗರೇಟ್ ಕೊಡದಕ್ಕೆ ಅಂಗಡಿಯನ್ನೇ ಸುಟ್ಟಿದ್ದ ನಟೋರಿಯಸ್ ಮೇಲೆ ಫೈರಿಂಗ್!
ನುಹಾ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಉಪಟಳ ಹೆಚ್ಚಾಗಿದೆ. 2015ರಿಂದಲೂ ಮೈನಿಂಗ್ ಮಾಫಿಯಾ ವಿರುದ್ದ ಹಲವು ದೂರುಗಳು ದಾಖಲಾಗಿದೆ. ಈ ಕುರಿತು ಪೊಲೀಸರು ಸತತ ದಾಳಿ ನಡೆಸುತ್ತಲೇ ಇದ್ದಾರೆ. ಆದರೆ ಸಂಪೂರ್ಣವಾಗಿ ಮೈನಿಂಗ್ ಮಾಫಿಯಾ ಮಟ್ಟ ಹಾಕಲು ಸಾಧ್ಯವಾಗಿಲ್ಲ. ಡಿಎಸ್‌ಪಿ ಸುರೇಂದ್ರ ಸಿಂಗ್ ಹತ್ಯೆಗೆ ಇದೀಗ ಹರ್ಯಾಣದಲ್ಲಿ ಆಕ್ರೋಶ ಹೆಚ್ಚಾಗಿದೆ. ರಾಜಕಾರಣಿಗಳೇ ಮೈನಿಂಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಪೊಲೀಸರು ಕೈಕಟ್ಟಿ ಕುಳಿತುಕೊಳ್ಳಬೇಕಾಗಿದೆ. ಇದೀಗ ದಕ್ಷ ಅಧಿಕಾರಿಯ ಹತ್ಯೆಯಾಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಮುಖಂಡನ ಕೊಂದ ಹಂತಕನ ಮೇಲೆ ಪೊಲೀಸ್ ಫೈರಿಂಗ್
2015ರಿಂದ ಹರ್ಯಾಣದ ನುಹ ಜಿಲ್ಲೆಯಲ್ಲಿ ಪ್ರತಿ ವರ್ಷ 50ಕ್ಕೂ ಹೆಚ್ಚು ಮೈನಿಂಗ್ ಮಾಫಿಯಾ ದೂರುಗಳು ದಾಖಲಾಗುತ್ತಿದೆ. ಹಲವು ಬಾರಿ ಮೈನಿಂಗ್ ಮಾಫಿಯಾ ಹಾಗೂ ಪೊಲೀಸರ ವಿರುದ್ಧ ಚಕಮಕಿಗಳು ನಡೆದಿದೆ. ಇದೀಗ ಹತ್ಯೆ ಮಟ್ಟಕ್ಕೆ ಹೋಗಿರುವುದು ದುರಂತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ