ಸಾಲ ವಾಪಾಸ್‌ ಕೇಳಿದ್ದಕ್ಕೆ ತಮ್ಮನಿಂದಲೇ ನಿರ್ದೇಶಕನಿಗೆ ಕೊಲೆ ಬೆದರಿಕೆ: ಎಫ್‌ಐಆರ್‌ ದಾಖಲು

By Kannadaprabha News  |  First Published Jun 12, 2023, 6:23 AM IST

ಸಿನಿಮಾ ನಿರ್ಮಾಣಕ್ಕೆ ಸಾಲವಾಗಿ ಪಡೆದಿದ್ದ ಹಣವನ್ನು ವಾಪಾಸ್‌ ಕೊಡದೆ ವಂಚಿಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ನಿರ್ದೇಶಕರೊಬ್ಬರು ಸ್ವಂತ ತಮ್ಮ ಸೇರಿ ನಾಲ್ವರ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 


ಬೆಂಗಳೂರು (ಜೂ.12): ಸಿನಿಮಾ ನಿರ್ಮಾಣಕ್ಕೆ ಸಾಲವಾಗಿ ಪಡೆದಿದ್ದ ಹಣವನ್ನು ವಾಪಾಸ್‌ ಕೊಡದೆ ವಂಚಿಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ನಿರ್ದೇಶಕರೊಬ್ಬರು ಸ್ವಂತ ತಮ್ಮ ಸೇರಿ ನಾಲ್ವರ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಲಗ್ಗೆರೆಯ ಕೆಂಪೇಗೌಡ ಲೇಔಟ್‌ ನಿವಾಸಿ ಸಿನಿಮಾ ನಟ ಹಾಗೂ ನಿರ್ದೇಶಕ ಜಿ.ರೂಪೇಶ್‌ ನೀಡಿದ ದೂರಿನ ಮೇರೆಗೆ ಸ್ವಂತ ತಮ್ಮ ಗಿರೀಶ್‌, ಈತನ ಸ್ನೇಹಿತರಾದ ಅಂಜುಂ, ವಿ.ಕೆ.ಮೂರ್ತಿ ಹಾಗೂ ಮೋಹನ್‌ ವಿರುದ್ಧ ನಿಂದನೆ, ಕೊಲೆ ಬೆದರಿಕೆ, ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ದೂರುದಾರ ಜಿ.ರೂಪೇಶ್‌ ಅವರ ತಮ್ಮ ಜಿ.ಗಿರೀಶ್‌ 2014-2019ರ ಅವಧಿಯಲ್ಲಿ ‘ಸಾರಿ ಕಣೇ’ ಮತ್ತು ‘ಧೂಳಿಪಟ’ ಚಲನಚಿತ್ರ ನಿರ್ಮಿಸಿದ್ದರು. ಈ ವೇಳೆ ಚಿತ್ರ ನಿರ್ಮಾಣಕ್ಕೆ ಹಣದ ಕೊರತೆಯಾಗಿ ರೂಪೇಶ್‌ ಬಳಿ ಹಣಕಾಸಿನ ಸಹಾಯ ಕೇಳಿದ್ದಾನೆ. ಈ ವೇಳೆ ರೂಪೇಶ್‌, ತನ್ನ ಬಳಿಯಿದ್ದ ಹಣ ಹಾಗೂ ಬೇರೆಯವರಿಂದ ಸಾಲವಾಗಿ ಪಡೆದ ಹಣ ಸೇರಿ ವಿವಿಧ ದಿನಾಂಕಗಳಂದು ಒಟ್ಟು .33 ಲಕ್ಷ ನೀಡಿದ್ದರು.

Tap to resize

Latest Videos

ಡೇಟಿಂಗ್ ಆ್ಯಪ್ ಮೂಲಕ ಹಿಂದೂ ಸೋಗಲ್ಲಿ ಯುವತಿಗೆ ವಂಚಿಸಿದ್ದ ಮುಸ್ಲಿಂ ಆರೋಪಿ ಬಂಧನ

ಅಷ್ಟೇ ಅಲ್ಲದೆ, ಆರೋಪಿ ಗಿರೀಶ್‌, ರೂಪೇಶ್‌ನನ್ನು ಸಾಕ್ಷಿಯಾಗಿಸಿಕೊಂಡು ಬಾಗಲಕೋಟೆಯ ಶಿರಗಣ್ಣನವರ್‌ ಎಂಬುವವರಿಂದ .40 ಲಕ್ಷ, ನಿಂಗರಾಜಯ ಪಲ್ಲೇದ್‌ ಎಂಬುವವರಿಂದ .10 ಲಕ್ಷ, ಜಿಂಕೆಬಚ್ಚನಹಳ್ಳಿಯ ಬಿ.ವಿ.ಲೋಕೇಶ್‌ ಎಂಬುವವರಿಂದ .60 ಲಕ್ಷವನ್ನು ಸಾಲವಾಗಿ ಪಡೆದುಕೊಂಡಿದ್ದಾನೆ. 2022ರ ಆ.6ರಂದು ಮತ್ತು ಸೆ.5ರಂದು ಸಾಲದ ಹಣವನ್ನು ವಾಪಾಸ್‌ ನೀಡುವುದಾಗಿ ರೂಪೇಶ್‌ ಬಳಿ ಅಗ್ರಿಮೆಂಟ್‌ ಮಾಡಿಕೊಂಡಿದ್ದಾನೆ. ಅಗ್ರಿಮೆಂಟ್‌ ದಿನಾಂಕ ಮುಗಿದಿದ್ದರೂ ಗಿರೀಶ್‌ ಸಾಲ ವಾಪಾಸ್‌ ನೀಡಿಲ್ಲ. ಹಣ ಕೇಳಿದಾಗಲೆಲ್ಲಾ ಸಬೂಬು ಹೇಳಲು ಆರಂಭಿಸಿದ್ದಾನೆ.

ಮನೆಗಳ್ಳತನಕ್ಕೆಂದೆ ತಮಿಳುನಾಡಿನಿಂದ ಬರುವ ಅಂತಾರಾಜ್ಯ ಕಳ್ಳನ ಬಂಧನ

ಇತ್ತೀಚೆಗೆ ಸಾಲವನ್ನು ವಾಪಾಸ್‌ ನೀಡುವಂತೆ ರೂಪೇಶ್‌ ಕೇಳಿದಾಗ, ಗಿರೀಶ್‌ ಅವಾಚ್ಯಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ. ಈತನ ಸ್ನೇಹಿತರಾದ ಅಂಜುಂ, ವಿ.ಕೆ.ಮೂರ್ತಿ, ಮೋಹನ್‌ ಕೂಡ ರೂಪೇಶ್‌ಗೆ ಕರೆ ಮಾಡಿ, ಗಿರೀಶ್‌ಗೆ ಯಾವುದೇ ಹಣ ನೀಡಿಲ್ಲವೆಂದು ಪತ್ರ ಬರೆದುಕೊಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ರೂಪೇಶ್‌ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!