ಬಿಳಿ ತ್ವಚೆ ಆಸೆಗೆ ಕಿಡ್ನಿ ಹಾಳ್ಮಾಡ್ಕೊಳ್ಬೇಡಿ ! ಭಾರತೀಯ ಮಾರ್ಕೆಟ್‌ ನಲ್ಲಿ ಹೆಚ್ಚಾಗಿದೆ ಪಾಕ್‌ ಫೇರ್ ನೆಸ್ ಕ್ರೀಂ ಹಾವಳಿ

Published : Nov 11, 2026, 06:39 PM IST
fairness creams

ಸಾರಾಂಶ

Pakistani fairness cream : ಯಾವ್ದು ಅಸಲಿ, ಯಾವ್ದು ನಕಲಿ ಅನ್ನೋದನ್ನು ಪತ್ತೆ ಮಾಡೋದು ಈಗ ಕಷ್ಟವಾಗಿದೆ. ಅನೇಕ ಕಂಪನಿಗಳ ಹೆಸರನ್ನು ನಕಲಿ ಮಾಡಿ, ವಸ್ತುಗಳನ್ನು ಮಾರಾಟ ಮಾಡಲಾಗ್ತಿದೆ. ಕೆಲ ಸೌಂದರ್ಯವರ್ದಕಗಳು ಕಡಿಮೆ ಬೆಲೆಗೆ ಸಿಗುತ್ವೆ ಅಂತ ಜನ ಬಳಸ್ತಾರೆ. ಆದ್ರೆ ಅದೇ ಅವರ ಪ್ರಾಣಕ್ಕೆ ಕುತ್ತು ತರ್ತಿದೆ.

ಮಾರ್ಕೆಟ್‌ ನಲ್ಲಿ ಕಡಿಮೆ ಬೆಲೆಗೆ ಬ್ರ್ಯಾಂಡೆಡ್‌ ಸೌಂದರ್ಯ ವರ್ದಕ ಮಾರಾಟವಾಗೋದನ್ನು ನೀವು ನೋಡಿರ್ತೀರಿ. ಈಗ ಇದೇ ರೀತಿಯ ಒಂದು ಫೇರ್ ನೆಸ್‌ ಕ್ರೀಮ್‌ ಸುದ್ದಿಯಲ್ಲಿದೆ. ತ್ವಚೆ ಬೆಳ್ಳಗಾಗ್ಲಿ ಅಂತ ಜನರು ಬಳಸುವ ಈ ಫೇರ್‌ ನೆಸ್‌ ಕ್ರೀಮ್‌, ಜೀವಕ್ಕೆ ಅಪಾಯ ತಂದೊಡ್ತಿದೆ. ಮುಖಕ್ಕೆ ಹಚ್ಚುವ ಕ್ರೀಮ್ನಲ್ಲಿರುವ ರಾಸಾಯನಿಕ ಕಿಡ್ನಿ, ನರಮಂಡಲ ಮಾತ್ರವಲ್ಲ, ಮೆದುಳಿನ ಮೇಲೂ ಪರಿಣಾಮ ಬೀರ್ತಿದೆ.

ಭಾರತೀಯರಿಗೆ ಮುಳುವಾಗ್ತಿದೆ ಪಾಕಿಸ್ತಾನದ ಫೇರ್‌ ನೆಸ್‌ ಕ್ರೀಂ

ಪಾಕಿಸ್ತಾನದಲ್ಲಿ ತಯಾರಾಗುವ ಗೌರಿ ಹೆಸರಿನ ಫೇರ್ನೆಸ್ ಕ್ರೀಮ್ನಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ (Mercury) ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರದಲ್ಲಿ ಈ ಕ್ರೀಮ್ ಮೇಲೆ ನಿಷೇಧ ಹೇರಿದ್ದರೂ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಸೇರಿದಂತೆ ಹಲವು ನಗರಗಳಲ್ಲಿ ಇದು ರಾಜಾರೋಷವಾಗಿ ಮಾರಾಟವಾಗುತ್ತಿದೆ. ಬಿಳಿ ತ್ವಚೆ ನೀಡುವ ಭರವಸೆಯ ಹೆಸರಿನಲ್ಲಿ ಜನರ ಮುಖಕ್ಕೆ ಅಪಾಯಕಾರಿ ರಾಸಾಯನಿಕ ಹಚ್ಚಲಾಗುತ್ತಿದೆ ಎಂಬ ಆತಂಕ ಎದುರಾಗಿದೆ.

ಈ ಕ್ರೀಮ್ನಲ್ಲಿರುವ ಪಾದರಸ ಚರ್ಮದ ಮೂಲಕ ದೇಹದೊಳಗೆ ಸೇರಬಹುದು. ಆರಂಭದಲ್ಲಿ ಚರ್ಮದ ಮೇಲೆ ಪರಿಣಾಮ ಬೀರಿದರೆ, ದೀರ್ಘಕಾಲ ಬಳಕೆಯಿಂದ ಕಿಡ್ನಿ ಮತ್ತು ನರಮಂಡಲಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಕೆಲವು ಸಂದರ್ಭಗಳಲ್ಲಿ ಮೆದುಳಿನ ಮೇಲೂ ಪರಿಣಾಮ ಬೀರಬಹುದು. ಭೋಪಾಲ್ನ ಅಂಗಡಿಗಳು, ಇ-ಕಾಮರ್ಸ್ ವೆಬ್ಸೈಟ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ರೀಮ್ ಅನ್ನು 150 ರಿಂದ 800 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ.

ಭೋಪಾಲ್ನ ಪ್ರಮುಖ ಕಾಸ್ಮೆಟಿಕ್ ಮಾರುಕಟ್ಟೆಯಾದ ಚೌಕ್ ಬಜಾರ್ನಲ್ಲೂ ಈ ಕ್ರೀಮ್ ರಹಸ್ಯವಾಗಿ ಮಾರಾಟವಾಗುತ್ತಿದೆ. ಆನ್ಲೈನ್ನಲ್ಲೂ ಸುಲಭವಾಗಿ ಸಿಗುತ್ತಿದೆ. ಈ ಕ್ರೀಮ್ನ ಪ್ಯಾಕೆಟ್ ಮೇಲೆಯೇ ಮೇಡ್ ಇನ್ ಪಾಕಿಸ್ತಾನ್ ಎಂದು ನಮೂದಿಸಲಾಗಿದೆ.

ಚರ್ಮರೋಗ ತಜ್ಞೆ ಡಾ. ಪ್ರೇರಣಾ ಶರ್ಮಾ ಅವರ ಪ್ರಕಾರ, ಈ ಕ್ರೀಮ್ನಲ್ಲಿ ಪಾದರಸದ ಪ್ರಮಾಣ 5,700 PPM ಇದೆ. ಸಾಮಾನ್ಯವಾಗಿ ಸುರಕ್ಷಿತ ಮಿತಿಯನ್ನು 1 PPMಗಿಂತ ಕಡಿಮೆ ಎಂದು ಹೇಳಲಾಗುತ್ತದೆ. ಅಂದರೆ, ಈ ಕ್ರೀಮ್ನಲ್ಲಿರುವ ಪಾದರಸದ ಪ್ರಮಾಣ ಸುರಕ್ಷಿತ ಮಿತಿಗಿಂತ 5,700 ಪಟ್ಟು ಹೆಚ್ಚಿದೆ. ಪಾದರಸ ಸಾಮಾನ್ಯ ರಾಸಾಯನಿಕವಲ್ಲ. ದೀರ್ಘಕಾಲ ಇದರ ಸಂಪರ್ಕಕ್ಕೆ ಬಂದರೆ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮವುಂಟಾಗುತ್ತದೆ. ಚರ್ಮದ ಮೂಲಕ ದೇಹ ಸೇರುವ ಪಾದರಸ ಕಿಡ್ನಿ ಮತ್ತು ನರಮಂಡಲಕ್ಕೆ ಹಾನಿ ಉಂಟುಮಾಡಬಹುದು. ಆತಂಕದ ಸಂಗತಿಯೆಂದರೆ, ಇದರ ದುಷ್ಪರಿಣಾಮ ತಕ್ಷಣವೇ ಕಾಣಿಸಿಕೊಳ್ಳಬೇಕೆಂದಿಲ್ಲ.

ಇನ್ನು ಪಾದರಸ ಚರ್ಮದ ಬಣ್ಣ ನಿರ್ಧರಿಸುವ ಮೆಲನಿನ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಮೆಲನಿನ್ ನಮ್ಮ ಚರ್ಮದ ಬಣ್ಣಕ್ಕೆ ಕಾರಣವಾಗುವ ವರ್ಣದ್ರವ್ಯ. ಇದರ ಉತ್ಪಾದನೆಗೆ ಅಡ್ಡಿಯಾದಾಗ ಚರ್ಮದ ಬಣ್ಣ ತಿಳಿಯಾದಂತೆ ಕಾಣುತ್ತದೆ. ಆದರೆ ಇದು ಸಹಜ ಸೌಂದರ್ಯವಲ್ಲ, ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಪ್ರಕ್ರಿಯೆ. ಮಹಾರಾಷ್ಟ್ರದಲ್ಲಿ ಈ ಕ್ರೀಮ್ ಬಳಕೆಯಿಂದ 18ಕ್ಕೂ ಹೆಚ್ಚು ಮಹಿಳೆಯರ ಕಿಡ್ನಿ ಹಾಳಾಗಿದೆ ಎಂಬ ವರದಿಗಳು ಆತಂಕ ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಅಣ್ಣನನ್ನೇ ಮೀರಿಸಿದ ರುಬ್ಬುಗುಂಡು ಹಂತಕ, 2018ರಲ್ಲೇ ನಡೆದಿತ್ತು ಡಬಲ್ ಮರ್ಡರ್!
ಬಾಲಕಿಯಿಂದ ಮುಖಂಡನ ಮೇಲೆ ಹನಿಟ್ರ್ಯಾಪೋ, ಅತ್ಯಾ*ಚಾರವೊ? 62 ವರ್ಷದ ವೃದ್ಧನ ಬೆವರಿಳಿಸಿದ ಹೈಕೋರ್ಟ್​