ಆನ್‌ಲೈನ್‌ ಶಾಪಿಂಗ್‌ ಮಾಡೋ ಮುನ್ನ ಇರಲಿ ಎಚ್ಚರ: ಖರೀದಿ ನೆಪದಲ್ಲಿ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ

By Kannadaprabha NewsFirst Published Nov 4, 2020, 9:28 AM IST
Highlights

1 ಲಕ್ಷ ದೋಚಿದ ಸೈಬರ್‌ ಖದೀಮರು,ದೂರು ದಾಖಲು| ಆನ್‌ಲೈನ್‌ ಮೂಲಕ ಹಣ ಸಂದಾಯ ಮಾಡುವುದಾಗಿ ಹೇಳಿ, ಮೊಬೈಲ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿದ್ದ ಖದೀಮರು| ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದ ಪೊಲೀಸರು| 

ಬೆಂಗಳೂರು(ನ.04): ಹಳೇ ಹಾಸಿಗೆಗಳನ್ನು ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದ ಯುವತಿಯರ ಬ್ಯಾಂಕ್‌ ಖಾತೆಯಿಂದ ಸೈಬರ್‌ ವಂಚಕರು ಒಂದು ಲಕ್ಷ ರು.ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್‌ ಮತ್ತು ಸಪ್ನಾ ವಂಚನೆಗೊಳಗಾಗಿದ್ದು, ಈ ಸಂಬಂಧ ಕನ್ಹಯ್ಯ ಕುಮಾರ್‌ ಮತ್ತು ಉದಯ್‌ಭಾನ್‌ ಸಿಂಗ್‌ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ತೇಜಸ್ವಿ ಸಿಂಗ್‌ ಹಾಗೂ ಸಪ್ನಾ ಅವರು ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿ ಕರೆ ಮಾಡಿದ್ದ ಅಪರಿಚಿತರು, ಹಾಸಿಗೆಗಳನ್ನು ಖರೀದಿಸುತ್ತೇವೆ. ಆನ್‌ಲೈನ್‌ ಮೂಲಕ ಹಣ ಸಂದಾಯ ಮಾಡುವುದಾಗಿ ಹೇಳಿ, ಮೊಬೈಲ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿದ್ದರು.

ಅದನ್ನು ಸ್ಕ್ಯಾನ್‌ ಮಾಡಿದ ತೇಜಸ್ವಿ ಸಿಂಗ್‌ ಅವರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ 46,900 ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಇದೇ ರೀತಿ ಸಪ್ನಾ ಅವರ ಬ್ಯಾಂಕ್‌ ಖಾತೆಯಿಂದಲೂ 60 ಸಾವಿರ ಕಡಿತವಾಗಿದೆ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ, ಸಂಪರ್ಕಕ್ಕೆ ಸಿಕ್ಕಿಲ್ಲ. ಸೈಬರ್‌ ವಂಚನೆ ಎಂಬುದು ಗೊತ್ತಾಗಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!