ಟವರ್‌ ಎಕ್ಸ್‌ಚೇಂಜ್‌ ಆ್ಯಪ್‌ನಿಂದ ಕೋಟ್ಯಂತರ ರು. ಮಹಾ ಧೋಖಾ

By Kannadaprabha News  |  First Published Sep 17, 2021, 1:43 PM IST

*  ಕ್ರಿಪ್ಟೋ ಕರೆನ್ಸಿಗೆ ಹಣ ಹೂಡಿದ್ದವರಿಗೆ ಭಾರಿ ವಂಚನೆ
*  ಹಣ ಕಳೆದುಕೊಂಡವರು ಅತಂತ್ರ
*  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕೊಂದರಲ್ಲೇ ಕೋಟ್ಯಂತರ ರು. ವಂಚನೆ
 


ಶಿರಸಿ(ಸೆ.17): ಕ್ರಿಪ್ಟೊ ಕರೆನ್ಸಿ ಮಾದರಿಯಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆ ಮಾಡುವ ‘ಟವರ್‌ ಎಕ್ಸ್‌ಚೇಂಜ್‌’ ಹೂಡಿಕೆಯಲ್ಲಿ ತಾಲೂಕಿನ ಹಲವರು ಹಣ ಕಳೆದುಕೊಂಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕೊಂದರಲ್ಲೇ ಕೋಟ್ಯಂತರ ರು. ಕಳೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ರಿಪ್ಟೊ ಕರೆನ್ಸಿಗಳಾದ ಬಿಟ್‌ ಕಾಯಿನ್‌, ಎಸ್‌ಆರ್‌ಪಿ, ಇಥಿರಿಯಂ, ಡಾಗಿ ಕಾಯಿನ್‌ ಸೇರಿದಂತೆ ವಿವಿಧ ಕರೆನ್ಸಿಗಳ ಖರೀದಿಗೆ ಟವರ್‌ ಎಕ್ಸ್‌ಚೇಂಜ್‌ ಆ್ಯಪ್‌ ಬಳಕೆ ಆಗುತ್ತಿತ್ತು. ಗೂಗಲ್‌ ಪ್ಲೇಸ್ಟೋರ್‌ ಅಥವಾ ಬೇರೆಡೆ ಸಿಗದ ಟವರ್‌ ಎಕ್ಸ್‌ಚೇಂಜ್‌ ಆ್ಯಪ್‌, ಕೇವಲ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೂಲಕ ಮಾತ್ರ ಹರಿದಾಡುತ್ತಿದೆ. ಪ್ರತಿ ಗ್ರೂಪ್‌ನಲ್ಲೂ 250ರಷ್ಟು ಸದಸ್ಯರಾದ ಬಳಿಕ ಟವರ್‌ ಎಕ್ಸ್‌ಚೇಂಜ್‌ ಆ್ಯಪ್‌ ಮೂಲಕ ಕೋಡ್‌ ಕಳಿಸಲಾಗುತ್ತದೆ. ಆ್ಯಪ್‌ನಲ್ಲಿ ಈ ಕೋಡ್‌ ಬಳಸಿಕೊಂಡು ಮಾಡಲಾಗುತ್ತಿದೆ.

Latest Videos

undefined

'ಹಣ ಕಳೆದುಕೊಳ್ಳಬೇಡಿ' ಸೈಬರ್ ವಂಚಕರಿಂದ ಬಚಾವಾಗಲು ಸುಲಭ ಸೂತ್ರ!

ಕ್ರಿಪ್ಟೊ ಕರೆನ್ಸಿಯ ಏರಿಳಿತಕ್ಕೆ ಸಂಬಂಧಿಸಿ ಮತ್ತು ಕ್ರಿಪ್ಟೊ ಮಾರುಕಟ್ಟೆ ಆಧರಿಸಿ ಇಲ್ಲಿ ಟ್ರೇಡಿಂಗ್‌ ನಡೆಯುತ್ತಿದ್ದು, ಹಣ ಹೂಡಿಕೆಯನ್ನು ಲಾಭಾಂಶದೊಂದಿಗೆ ವಾಪಸ್‌ ಪಡೆಯಲು ಅವಕಾಶ ನೀಡಲಾಗುತ್ತಿತ್ತು. ಗ್ರಾಹಕರು ಕನಿಷ್ಠ 5 ಸಾವಿರ ಹೂಡಿಕೆ ಮಾಡಬೇಕಾಗುತ್ತದೆ. ಹಣ ಹಿಂಪಡೆಯಲು 180 ಸರ್ವಿಸ್‌ ಚಾರ್ಜ್‌ ಮಾಡಲಾಗುತ್ತಿತ್ತು. ಕೆಲ ದಿನಗಳ ಹೊಸ ಬಳಕೆದಾರರಿಗೆ, ಹೊಸ ಹೂಡಿಕೆದಾರರಿಗೆ ಶೇ. 25ರಷ್ಟು ಹೆಚ್ಚುವರಿ ಲಾಭಾಂಶ ಹಂಚಿಕೆ ಮಾಡುವುದಾಗಿಯೂ ಟವರ್‌ ಎಕ್ಸ್‌ಚೇಂಜ್‌ ಆ್ಯಪ್‌ನಲ್ಲಿ ತಿಳಿಸಲಾಗಿತ್ತು ಎನ್ನಲಾಗಿದೆ. ಹೀಗಾಗಿ ಹಲವರು ಹೆಚ್ಚಿನ ಹಣ ತೊಡಗಿಸಿಕೊಂಡಿದ್ದಾರೆ. ಆದರೆ ಮಂಗಳವಾರದ ಬಳಿಕ ಹಣ ವಾಪಸ್‌ ತೆಗೆಯಬಹುದು ಎಂದು ಸೂಚಿಸಲಾಗಿತ್ತು. ಆದರೆ ಈಗ ಹಲವರ ಖಾತೆಯಲ್ಲಿ ಹೂಡಿಕೆಯ ಹಣ ನಾಪತ್ತೆ ಆಗಿದೆ ಎಂದು ಹೇಳಲಾಗಿದೆ. ಅಲ್ಲದೇ ಹಣ ವಾಪಸ್‌ ತೆಗೆದವರೂ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿಯೂ ಯಾವುದೇ ಉತ್ತರ ಬರುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.

ಅಧಿಕೃತ ಹೂಡಿಕೆ ಆಗಿರದ ಕಾರಣ ಹಣ ಹೂಡಿರುವ ಕುರಿತು ಯಾವುದೇ ದಾಖಲೆ ಹೂಡಿಕೆದಾರರಲ್ಲಿಲ್ಲ. ಹಣ ಕಳೆದುಕೊಂಡವರೂ ಹೇಳಿಕೊಳ್ಳಲಾರದ, ಪೊಲೀಸ್‌ ದೂರು ಸಹ ನೀಡಲಾಗದ ಸ್ಥಿತಿಯಲ್ಲಿದ್ದಾರೆ.
 

click me!