ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನ ಕ್ರೈಂ ಹಿಸ್ಟರಿ, ತಾಯಿ-ಮಗುವನ್ನ ಕೊಂದಿದ್ದ ಪಾತಕಿ ಜಯೇಶ್!

By Suvarna NewsFirst Published Jan 16, 2023, 8:12 PM IST
Highlights

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕರೆ ಮಾಡಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪುತ್ತೂರಿನ ನಟೋರಿಯಸ್ ಕ್ರಿಮಿನಲ್ ಜಯೇಶನ ಕ್ರೈಂ ಹಿಸ್ಟರಿಯೇ ಭಯಾನಕ. 14 ವರ್ಷಗಳ ಹಿಂದೆ ತಾಯಿ-ಮಗುವನ್ನು ಈತ ಕೊಂದಿದ್ದ.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಜ.16): ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕರೆ ಮಾಡಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪುತ್ತೂರಿನ ನಟೋರಿಯಸ್ ಕ್ರಿಮಿನಲ್ ಜಯೇಶನ ಕ್ರೈಂ ಹಿಸ್ಟರಿಯೇ ಭಯಾನಕ. 14 ವರ್ಷಗಳ ಹಿಂದೆ ತಾಯಿ-ಮಗುವನ್ನು ಕೊಂದಿದ್ದ ಜಯೇಶ್ ಇದೀಗ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿ ಸುದ್ದಿಯಾಗಿದ್ದಾನೆ. 14 ವರ್ಷಗಳ ಹಿಂದೆ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಜಯೇಶನಿಗೆ ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಆ ಬಳಿಕ ಆತ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮರಣದಂಡನೆಯ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

14 ವರ್ಷಗಳ ಹಿಂದಿನ ಘಟನೆ ಏನು?
2008 ಆಗಸ್ಟ್ 2 ರಂದು ಅಂದಿನ ಪುತ್ತೂರು ಮತ್ತು ಇಂದಿನ ಕಡಬ ತಾಲೂಕಿಗೆ ಒಳಪಡುವ ಶಿರಾಡಿಯ ಸೌಮ್ಯಾ ಮತ್ತು ಅವರ ಪುತ್ರ ಜಿಷ್ಣು ಎಂಬವರನ್ನು ಕೊಲೆಗೈದ ಆರೋಪವನ್ನು ಜಯೇಶ್ ಎದುರಿಸುತ್ತಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ಸುಮಾರು 27 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಆರೋಪಿಯಾದ ಜಯೇಶ್‌ನನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯವು ಸೆಕ್ಷನ್ 450, 392 ಹಾಗೂ 302 ಪ್ರಕಾರ ಆರೋಪಿ ಮರಣದಂಡನೆಗೆ ಯೋಗ್ಯವಾದ ಅಪರಾಧ ಎಸಗಿದ್ದಾನೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿತ್ತು. ಪುತ್ತೂರಿನ ನ್ಯಾಯಾಲಯದ ಇತಿಹಾಸದಲ್ಲಿ ಮರಣದಂಡನೆಯ ಎರಡನೇ ತೀರ್ಪು ಇದಾಗಿತ್ತು. ಅಂದು ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕ ಉದಯಕುಮಾರ್ ವಾದವನ್ನು ಮಂಡಿಸಿದ್ದರು.

ಶಿರಾಡಿ ಸಮೀಪದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ಆರೋಪಿ ಜಯೇಶ್ ಸಿರಿಬಾಗಿಲು ಗ್ರಾಮದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ತನ್ನ ದೊಡ್ಡಪ್ಪನ ಮಗ ರೋಹಿತ್ ಎಂಬುವರ ಪತ್ನಿ ಸೌಮ್ಯ ಅವರ ಕುತ್ತಿಗೆಗೆ ಬಟ್ಟೆಯನ್ನು ಸುತ್ತಿ ಮಾರಕಾಯುಧದಿಂದ ಹೊಟ್ಟೆಗೆ ತಿವಿದು, ಕೊಲೆಗೈದು ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದು ಮಾತ್ರವಲ್ಲದೆ ಸೌಮ್ಯಾ ಅವರ ಪುತ್ರ 3 ವರ್ಷ ಪ್ರಾಯದ ಜಿಷ್ಣುವಿಗೂ ಚೂರಿಯಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ. ಈ ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಜಯೇಶ್ 19ರ ಹರೆಯದವನಾಗಿದ್ದ. ತಾಯಿ ಮಗುವಿನ ಕೊಲೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಜಯೇಶ್ ಕೇರಳದಲ್ಲಿ ನೆಲೆಸಿದ್ದ. ನಂತರ ಮುಸ್ಲಿಂ ಯುವತಿಯೊಬ್ಬಳನ್ನು ವಿವಾಹವಾಗಿ ತನ್ನ ಹೆಸರನ್ನು ಶಾಕೀರ್ ಯಾನೇ ಸಾಹಿರ್ ಎಂದೂ ಬದಲಾಯಿಸಿಕೊಂಡಿದ್ದ ಎನ್ನಲಾಗಿದೆ.

ಹೆಂಡ್ತಿಗೆ ಕರೆ ಮಾಡ್ತೀನಿ ಅಂತ ಮೊಬೈಲ್ ಪಡೆದು ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಹಾಕಿದ

ಕೇರಳದಲ್ಲಿ ನೆಲೆಸಿದ್ದ ಈತ ಅಲ್ಲಿನ ಪತ್ನಿಯೊಂದಿಗೆ ಜಗಳವಾಡಿ 2012ರ ಅಕ್ಟೋಬರ್ 10ರಂದು ತೆಂಗಿನ ಮರ ಹತ್ತಿ ಕುಳಿತಿದ್ದ. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ್ದ ಕೇರಳ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ವಿಚಾರ ತಿಳಿದು ಬಂದಿತ್ತು. ಬಳಿಕ ಈತನನ್ನು ಉಪ್ಪಿನಂಗಡಿ ಪೊಲೀಸರು ಕೇರಳ ಪೊಲೀಸರಿಂದ ವಶಕ್ಕೆ ಪಡೆದುಕೊಂಡು ಶಿರಾಡಿ ಡಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿಸಿ 2012 ಅಕ್ಟೋಬರ್ 11ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಜಯೇಶ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

 

ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕೇಸ್‌: ನಾಗ್ಪುರ್‌ನಲ್ಲಿ ಎಫ್‌ಐಆರ್‌ ದಾಖಲು

ನಂತರದಲ್ಲಿ ಪುತ್ತೂರು ನ್ಯಾಯಾಲಯಕ್ಕೆ ಸಾಕ್ಷಿ ವಿಚಾರಣೆಗಾಗಿ ಈತನನ್ನು ಪೊಲೀಸರು ಕರೆತಂದಿದ್ದ ವೇಳೆ ನ್ಯಾಯಾಲಯದ ಕಟಕಟೆಯಿಂದ ಹಾರಿ ತಪಿಸಿಕೊಳ್ಳಲು ಯತ್ನಿಸಿದ್ದ. ನ್ಯಾಯಾಲಯ ಆವರಣದಿಂದ ತಪ್ಪಿಸಿಕೊಂಡ ಈತನನ್ನು ವಕೀಲರು ಮತ್ತು ಸಾರ್ವಜನಿಕರು ಸೇರಿಕೊಂಡು ಪುತ್ತೂರು ಮಿನಿವಿಧಾನ ಸೌಧದ ಎದುರು ಹಿಡಿದು ಮತ್ತೆ ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆಯೂ ಪುತ್ತೂರು ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

click me!