Bengaluru crime: ಬಾಡಿಗೆ ಮನೆ ಅಡ್ವಾನ್ಸ್‌ಗಾಗಿ ಕಳ್ಳತನಕ್ಕಿಳಿದ ದಂಪತಿ!

By Kannadaprabha NewsFirst Published Dec 5, 2022, 6:54 AM IST
Highlights
  • ಬಾಡಿಗೆ ಮನೆಗೆ ಅಡ್ವಾನ್ಸ್‌ಗಾಗಿ ಕಳ್ಳತನಕ್ಕಿಳಿದ ದಂಪತಿ!
  • ಪ್ರೀತಿಸಿದವಳನ್ನು ಇತ್ತೀಚೆಗೆ ಮದುವೆ ಆಗಿದ್ದ ಕಳ್ಳ
  • ಬಳಿಕ ಮನೆ ಮಾಡಲು ನಿರ್ಧರಿಸಿ ದಂಪತಿ ಕಳ್ಳತನಕ್ಕೆ ಸ್ಕೆಚ್‌
  • 5.25 ಲಕ್ಷ ಮೌಲ್ಯದ ಚಿನ್ನ ವಶ

ಬೆಂಗಳೂರು (ಡಿ.5) : ಹಾಡಹಗಲೇ  ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ದಂಪತಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ 3ನೇ ಹಂತದ ವೀರಭದ್ರನಗರದ ನಾಗರಾಜು (24) ಮತ್ತು ನ್ಯೂ ಬಿನ್ನಿ ಲೇಔಟ್‌ನ ರಮ್ಯಾ(23) ಬಂಧಿತರು. ಆರೋಪಿಗಳಿಂದ .5.25 ಲಕ್ಷ ಮೌಲ್ಯದ 65 ಗ್ರಾಂ ತೂಕದ ಚಿನ್ನಾಭರಣ, 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ಎರಡು ದ್ವಿಚಕ್ರ ವಾಹನ, ಒಂದು ಮೊಬೈಲ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಸೊನ್ನೇನಹಳ್ಳಿಯ ಮಾರುತಿ ನಗರದಲ್ಲಿ ಹಾಡಹಗಲೇ ಲಿಂಗರಾಜ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನಾಗರಾಜ್‌ ವೃತ್ತಿಪರ ಕಳ್ಳನಾಗಿದ್ದು, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮನೆಗಳವು, ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಕಳ್ಳತನ ಚಾಳಿ ಮುಂದುವರೆಸಿದ್ದ. ಇತ್ತೀಚೆಗೆ ತನ್ನ ಪತ್ನಿ ರಮ್ಯಾಳನ್ನು ಮನೆಗಳವು ಕೃತ್ಯಕ್ಕೆ ಬಳಸಿಕೊಂಡಿದ್ದ. ಆರೋಪಿಗಳು ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಜ್ಞಾನಭಾರತಿ, ಮಾದನಾಯಕನಹಳ್ಳಿ ಠಾಣೆಯಲ್ಲಿ ತಲಾ ಒಂದು ಮನೆಗಳವು ಹಾಗೂ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು: ಗೋದಾಮಿನ ನಕಲಿ ಕೀ ಮಾಡಿಸಿ ಕೇಬಲ್‌ ಕದ್ದ ಮಾಜಿ ನೌಕರರು!

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ:

ಆರೋಪಿ ನಾಗರಾಜ ಮತ್ತು ರಮ್ಯಾ ಕಳೆದ ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಗೆ ತಿರುಗಿ ಇತ್ತೀಚೆಗೆ ಇಬ್ಬರು ಮದುವೆಯಾಗಿದ್ದರು. ಆರಂಭದಲ್ಲಿ ಆರೋಪಿಯು ತಾನೊಬ್ಬ ಕಳ್ಳ ಎನ್ನುವ ವಿಚಾರವನ್ನು ರಮ್ಯಾ ಬಳಿ ಹೇಳಿರಲಿಲ್ಲ. ಬಳಿಕ ಆಕೆಗೂ ತನ್ನ ಅಪರಾಧ ಕೃತ್ಯಗಳ ಬಗ್ಗೆ ಹೇಳಿಕೊಂಡಿದ್ದ. ಬಳಿಕ ಇಬ್ಬರು ಪರಸ್ಪರ ಮಾತನಾಡಿಕೊಂಡು ಒಟ್ಟಿಗೆ ಸೇರಿ ಮನೆಗಳವು ಮಾಡಲು ಮುಂದಾಗಿದ್ದರು.

ಗಂಡನಿಂದ ಕಳ್ಳತನಕ್ಕೆ ಹೆಂಡತಿ ಕಾವಲು

ಆರೋಪಿಗಳು ಬಾಡಿಗೆಗೆ ಹೊಸ ಮನೆ ಮಾಡುವ ಸಲುವಾಗಿ ಅಡ್ವಾನ್ಸ್‌ ನೀಡಲು ಹಣ ಹೊಂದಿಸಲು ಮಾರುತಿ ನಗರದಲ್ಲಿ ಮನೆಗಳವು ಮಾಡಿದ್ದರು. ಆರೋಪಿ ರಮ್ಯಾ ಮನೆ ಹೊರಗೆ ನಿಂತು ಸಾರ್ವಜನಿಕ ಚಲನವಲನ ಗಮನಿಸಿದರೆ, ಆರೋಪಿ ನಾಗರಾಜು ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೊರಬಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಶೆಯಲ್ಲಿ ಮಲಗಿದ್ದವನ ಜೇಬಿಂದ ₹70 ಸಾವಿರ ಎಗರಿಸಿದ ಚೋರರು!

ಮಾಲಿಕನ ಕಂಡು ಆರೋಪಿ ದೌಡು

ನ.5ರಂದು ಬೆಳಗ್ಗೆ 11ಕ್ಕೆ ಮನೆ ಮಾಲೀಕ ಲಿಂಗರಾಜ್‌, ಪತ್ನಿ ಹಾಗೂ ಮಕ್ಕಳೊಂದಿಗೆ ಮಾರುತಿ ನಗರ ಸರ್ಕಲ್‌ನಲ್ಲಿರುವ ತಮ್ಮ ಕೇಬಲ್‌ ಅಂಗಡಿಗೆ ತೆರಳಿದ್ದರು. ಈ ವೇಳೆ ಮನೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಇದನ್ನು ನೋಡಿದ ಆರೋಪಿ ನಾಗರಾಜ ಏಕಾಏಕಿ ಲಿಂಗರಾಜ್‌ ಅವರ ಮನೆಗೆ ನುಗ್ಗಿ ಬೀರು ಒಡೆದು ಚಿನ್ನಾಭರಣ ದೋಚಲು ಮುಂದಾಗಿದ್ದ. ಬ್ಯಾಗ್‌ ಮರೆತು ಅಂಗಡಿಗೆ ಹೋಗಿದ್ದ ಲಿಂಗರಾಜ್‌ ಈ ಸಮಯಕ್ಕೆ ಮನೆ ಬಳಿ ಬಂದಿದ್ದಾರೆ. ಈ ವೇಳೆ ಮನೆಯೊಳಗೆ ಏನೋ ಶಬ್ದವಾಗುವುದನ್ನು ಗ್ರಹಿಸಿ ಮನೆ ಬಾಗಿಲ ಬಳಿ ಹೋಗುವಷ್ಟರಲ್ಲಿ ಮನೆ ಒಳಗಿಂದ ಆರೋಪಿ ನಾಗರಾಜ್‌ ಹೊರಗೆ ಬಂದು ಪರಾರಿಯಾಗಿದ್ದಾನೆ. ಆಗ ಮಾಲಿಕ ನಾಗರಾಜ್‌, ಆರೋಪಿಯನ್ನು ಹಿಡಿಯಲು ಸ್ವಲ್ಪ ದೂರ ಬೆನ್ನಟ್ಟಿದ್ದಾರೆ. ಆದರೂ ಆರೋಪಿ ವೇಗವಾಗಿ ಓಡಿ ತಪ್ಪಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!