Bengaluru Crime: ಟೆಕ್ಕಿಯ ಅಪಹರಿಸಿ 8 ಲಕ್ಷ ಸುಲಿದವರ ಸೆರೆ

By Kannadaprabha News  |  First Published Dec 5, 2022, 6:39 AM IST
  • ಟೆಕ್ಕಿಯ ಅಪಹರಿಸಿ 8 ಲಕ್ಷ ಸುಲಿದವರ ಸೆರೆ
  • ಮೋಜು ಮಸ್ತಿಗಾಗಿ ಬ್ರಿಗೇಡ್‌ ರಸ್ತೆಗೆ ಬಂದಿದ್ದ ಟೆಕ್ಕಿ
  • ಕಾರಲ್ಲಿ ಹಿಂಬಾಲಿಸಿ ಅಪಹರಣ ಬೆದರಿಸಿ ಹಣ ಸುಲಿಗೆ

ಬೆಂಗಳೂರು (ಡಿ.5) : ಮೋಜು-ಮಸ್ತಿಗಾಗಿ ಬ್ರಿಗೇಡ್‌ ರಸ್ತೆಗೆ ಬಂದಿದ್ದ ಟೆಕ್ಕಿಯನ್ನು ಕಾರಿನಲ್ಲಿ ಅಪಹರಿಸಿ .8 ಲಕ್ಷ ಹಾಗೂ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊರಮಾವು ಆಶೀರ್ವಾದ ಕಾಲೋನಿ ನಿವಾಸಿ ತರುಣ್‌ (22), ಜಾನಕಿ ರಾಮ ಲೇಔಟ್‌ನ ವಿಘ್ನೇಶ್‌ (23), ಹಳೆ ಬೈಯಪ್ಪನಹಳ್ಳಿಯ ಚರೀಶ್‌(23) ಹಾಗೂ ಸುಬ್ಬಣ್ಣಪಾಳ್ಯದ ಮಣಿಕಂಠ(21) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್‌ ಫೋನ್‌ಗಳು ಹಾಗೂ ಒಂದು ಚಾಕುವನ್ನು ಜಪ್ತಿ ಮಾಡಲಾಗಿದೆ. ಹೂಡಿ ನಿವಾಸಿ ಟೆಕ್ಕಿ ರಾಹುಲ್‌ ವಿರಾಧ್ಯ(35) ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಬ್ಯುಸಿನೆಸ್ ಮೆನ್ ಮಗನನ್ನ ಕಿಡ್ನಾಪ್ ಮಾಡಿ 1ಕೋಟಿ , 15kg ಚಿನ್ನಕ್ಕೆ ಬೇಡಿಕೆಯಿಟ್ಟ ಆರೋಪಿಗಳು ಅಂದರ್

ಪ್ರಕರಣದ ವಿವರ:

ಗುಜರಾತ್‌ ಮೂಲದ ಟೆಕ್ಕಿ ರಾಹುಲ್‌ ನಗರದ ಹೂಡಿ ಗ್ರಾಫೈಟ್‌ ರಸ್ತೆಯ ಸೀತಾರಾಮಪಾಳ್ಯದಲ್ಲಿ ನೆಲೆಸಿದ್ದಾರೆ. ನ.26ರಂದು ಮುಂಜಾನೆ 3ಕ್ಕೆ ಮೋಜು-ಮಸ್ತಿಗಾಗಿ ಬ್ರಿಗೇಡ್‌ ರಸ್ತೆಗೆ ಆಟೋರಿಕ್ಷಾದಲ್ಲಿ ಬಂದಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಆತನ ಮೊಬೈಲ್‌ ಫೋನ್‌ನಲ್ಲಿ ಕೆಲವು ಯುವತಿಯರ ಫೋಟೋಗಳನ್ನು ರಾಹುಲ್‌ಗೆ ತೋರಿಸಿದ್ದಾನೆ. ಈ ವೇಳೆ ರಾಹುಲ್‌ ನನಗೆ ಯಾರು ಬೇಡವೆಂದು ಆಟೋ ಹಿಡಿದು ಕಲ್ಯಾಣ ನಗರದತ್ತ ತೆರಳಲು ಮುಂದಾಗಿದ್ದಾರೆ. ಆಗ ಒಂದು ಕಾರು, ಆಟೋ ರಿಕ್ಷಾವನ್ನು ಹಿಂಬಾಲಿಸುತ್ತಿರುವುದು ರಾಹುಲ್‌ ಗಮನಕ್ಕೆ ಬಂದಿದೆ. ಎಚ್ಚೆತ್ತ ರಾಹುಲ್‌, ಪೊಲೀಸ್‌ ಠಾಣೆ ಕಡೆಗೆ ಆಟೋ ಚಲಾಯಿಸುವಂತೆ ಆಟೋ ಚಾಲಕನಿಗೆ ಸೂಚಿಸಿದ್ದರು.

ಅದರಂತೆ ಆಟೋ ಚಾಲಕ ಆಟೋವನ್ನು ಅಶೋಕ ನಗರ ಪೊಲೀಸ್‌ ಠಾಣೆಗೆ ಕಡೆಗೆ ತೆರಳು ತಿರುಗಿಸಿದ್ದಾನೆ. ಆಗ ವೇಗವಾಗಿ ಹಿಂದಿನಿಂದ ಬಂದ ಕಾರು ಆಟೋಗೆ ಅಡ್ಡವಾಗಿ ನಿಂತಿದೆ. ಮೂವರು ದುಷ್ಕರ್ಮಿಗಳು ಕಾರಿನಿಂದ ಇಳಿದು ರಾಹುಲ್‌ನನ್ನು ಆಟೋದಿಂದ ಕೆಳಗಿಳಿಸಿ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಹಲ್ಲೆ ಮಾಡಿದ್ದಾರೆ. ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಮೊಬೈಲ್‌, ಪರ್ಸ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಕಿತ್ತುಕೊಂಡು ಪಾಸ್‌ವರ್ಡ್‌ ಹೇಳುವಂತೆ ಹೆದರಿಸಿದ್ದಾರೆ.

ಚೆನ್ನೈ: ಡಿವೈಡರ್‌ ದಾಟುವಾಗ ಲೈಟ್‌ ಕಂಬದ ವಿದ್ಯುತ್‌ ತಗುಲಿ ಟೆಕ್ಕಿ ಸಾವು

ಕಾರಿನಲ್ಲಿ ಸುತ್ತಾಡಿಸಿ ಸುಲಿಗೆ

ಆರೋಪಿಗಳು ಕಾರನ್ನು ಹೊರವರ್ತುಲ ರಸ್ತೆ, ಕಲ್ಯಾಣನಗರ, ಕೆ.ಆರ್‌.ಪುರ, ರೈಲ್ವೆ ನಿಲ್ದಾಣ, ಬೆಳ್ಳಂದೂರು, ಸಿಲ್‌್ಕ ಬೋರ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಹಲವೆಡೆ ಸುತ್ತಾಡಿಸಿ, ರಾಹುಲ್‌ನ ಕ್ರೆಡಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಪಡೆದು .6 ಲಕ್ಷ ಡ್ರಾ ಮಾಡಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾಹುಲ್‌ನ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮನೆಯವರಿಂದ ಹಣ ಹಾಕಿಸಿಕೊಳ್ಳುವಂತೆ ಬೆದರಿಸಿದ್ದಾರೆ. ಈ ವೇಳೆ ರಾಹುಲ್‌ ತನ್ನ ಸಹೋದರನಿಗೆ ಕರೆ ಮಾಡಿ .2 ಲಕ್ಷ ಹಾಕಿಸಿಕೊಂಡಿದ್ದಾರೆ. ಆರೋಪಿಗಳು ಆ ಹಣವನ್ನು ಎಟಿಎಂನಲ್ಲಿ ಡ್ರಾ ಮಾಡಿದ್ದಾರೆ. ಬಳಿಕ ಇಡೀ ದಿನ ರಾಹುಲ್‌ನನ್ನು ಕಾರಿನಲ್ಲೇ ಸುತ್ತಾಡಿಸಿ ರಾತ್ರಿ ಕಲ್ಯಾಣನಗರದಲ್ಲಿ ಇಳಿಸಿ ಪರಾರಿಯಾಗಿದ್ದರು. ಈ ಸಂಬಂಧ ರಾಹುಲ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!