ಲಾಕ್‌ಡೌನ್‌ನಿಂದ ಸಂಕಷ್ಟ: ಮನೆ ಮಾಲೀಕಳನ್ನೇ ಹತ್ಯೆಗೈದು ದರೋಡೆ ಮಾಡಿದ್ದ ದಂಪತಿ!

By Kannadaprabha News  |  First Published Aug 26, 2020, 7:49 AM IST

ಮನೆ ಬಾಡಿಗೆ ಕಟ್ಟಲೂ ಪರದಾಟ| ಮನೆ ಮಾಲೀಕರ ಬಳಿ ಹಣ ಇರೋದು ತಿಳಿದು ಕೃತ್ಯ, ಸೆರೆ| ಕೊಲೆಯಾದ ಬಳಿಕ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ| ರಾಯಚೂರಿನಲ್ಲಿ ಆರೋಪಿಗಳ ಬಂಧನ|  


ಬೆಂಗಳೂರು(ಆ.26):  ಕಾಡುಗೋಡಿಯಲ್ಲಿ ನಡೆದಿದ್ದ ವೃದ್ಧೆ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು ಮನೆ ಬಾಡಿಗೆಗೆ ಇದ್ದ ದಂಪತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

ಚನ್ನಸಂದ್ರದ ಕಲ್ಲಪ್ಪ ಲೇಔಟ್‌ ನಿವಾಸಿಗಳಾದ ವೀರೇಶ್‌(25), ಪತ್ನಿ ಚೈತ್ರಾ (24) ಹಾಗೂ ವೀರೇಶ್‌ ಸ್ನೇಹಿತ ಪ್ರಶಾಂತ್‌(25) ಬಂಧಿತರು. ಆರೋಪಿಗಳಿಂದ ಕಳವು ಮಾಡಿದ್ದ ಹಣವನ್ನು ಜಪ್ತಿ ಮಾಡಲಾಗಿದೆ. ಆ.12ರಂದು ಆರೋಪಿಗಳು ವೃದ್ಧೆ ಜಯಮ್ಮ (65) ಅವರನ್ನು ಹತ್ಯೆ ಮಾಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಅಪ್ಪಯ್ಯಣ್ಣ ಮತ್ತು ಜಯಮ್ಮ ಅವರು ಚನ್ನಸಂದ್ರದಲ್ಲಿ ನೆಲೆಸಿದ್ದು, ತಿಂಗಳಿಗೆ ಸುಮಾರು .60 ಸಾವಿರ ಬಾಡಿಗೆ ಬರುತ್ತಿತ್ತು. ಅಪ್ಪಯ್ಯಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಪುತ್ರನಿದ್ದಾನೆ. ಎಲ್ಲರೂ ಪ್ರತ್ಯೇಕವಾಗಿ ನೆಲೆಸಿದ್ದರು.

Tap to resize

Latest Videos

ಚನ್ನಸಂದ್ರದಲ್ಲಿ ಅಪ್ಪಯ್ಯಣ್ಣ ಅವರ ಕಟ್ಟಡದಲ್ಲಿ ವೀರೇಶ್‌ ದಂಪತಿ ಬಾಡಿಗೆಗಿದ್ದರು. ವೀರೇಶ್‌ ಹಾಗೂ ಚೈತ್ರಾ ರಾಯಚೂರಿನ ಸಿಂಧನೂರು ತಾಲೂಕಿನವರಾಗಿದ್ದು, ಪ್ರೀತಿಸಿ ವಿವಾಹವಾಗಿದ್ದರು. ವೀರೇಶ್‌ ಕ್ಯಾಬ್‌ ಚಾಲಕನಾಗಿದ್ದು, ಶ್ವೇತಾ ಆನ್‌ಲೈನ್‌ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದರು. ಲಾಕ್‌ಡೌನ್‌ನಿಂದಾಗಿ ದಂಪತಿ ಕೆಲಸ ಇಲ್ಲದೇ 6 ತಿಂಗಳಿನಿಂದ ಮನೆಯಲ್ಲಿಯೇ ಇದ್ದರು. ಬಾಡಿಗೆ ಕಟ್ಟಲಾಗದೇ ಸಂಕಷ್ಟದ ಸ್ಥಿತಿಯಲ್ಲಿದ್ದರು. ಕಟ್ಟಡ ಮಾಲಿಕರ ಮನೆಯಲ್ಲಿ ಹಣ ಇರುವ ಬಗ್ಗೆ ವೀರೇಶ್‌ ದಂಪತಿ ಇತರೆ ಬಾಡಿಗೆ ಮನೆಯವರಿಂದ ತಿಳಿದುಕೊಂಡಿದ್ದರು. ಆ.12ರಂದು ಮಧ್ಯಾಹ್ನ 12ರ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಆರೋಪಿಗಳು ಮನೆಗೆ ನುಗ್ಗಿ ವೃದ್ಧೆಯ ಕತ್ತು ಕೊಯ್ದು .45 ಲಕ್ಷ ಹಾಗೂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು; ಹೆತ್ತ ತಾಯಿಗೆ ಸುಪಾರಿ ಕೊಟ್ಟ ಪುತ್ರ... ಒಂದೇ ದಿನಕ್ಕೆ ಎಲ್ಲರೂ ಅಂದರ್!

ಕೊಲೆಯಾದ ಬಳಿಕ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಮನೆ ಮಾಲಿಕ ಅಪ್ಪಯ್ಯಣ್ಣ ಕೂಡ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಗಳು ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರಾಯಚೂರಿನಲ್ಲಿ ಆರೋಪಿಗಳನ್ನು ಬಂಧಿಸಿ ಕರೆ ತರಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಷ್ಟದಿಂದಾಗಿ ದರೋಡೆ

ಲಾಕ್‌ಡೌನ್‌ನಿಂದ ತೊಂದರೆಯಾಗಿ, ಮೊಬೈಲ್‌, ಕಿವಿಯಲ್ಲಿನ ಓಲೆ ಕೂಡ ಮಾರಿದ್ದೇವು. ಐದು ತಿಂಗಳ ಗರ್ಭಿಣಿಯಾದ ಕಾರಣ ತೀರಾ ಸಂಕಷ್ಟಕ್ಕೆ ಸಿಲುಕಿದ್ದೆವು. ಹೀಗಾಗಿ ದರೋಡೆ ಮಾಡಲು ನಿರ್ಧರಿಸಿದ್ದೆವು ಎಂದು ಆರೋಪಿತೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕ್ಕಾಗಿ ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿ ವೃದ್ಧೆಯನ್ನು ದಂಪತಿ ಕೊಲೆ ಮಾಡಿ ದರೋಡೆ ಮಾಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಹಣಕ್ಕಾಗಿ ಕೃತ್ಯ ಎಸಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜ್‌ ಅವರು ತಿಳಿಸಿದ್ದಾರೆ. 
 

click me!