ಸುನೀತಾಳ ಇಬ್ಬರು ಮಕ್ಕಳ ಮನೆ ಕೆಲಸಕ್ಕೆ ಯಾವುದೇ ಕೂಲಿಯನ್ನು ನೀಡುತ್ತಿರಲಿಲ್ಲ. ಬದಲಿಗೆ ಇಬ್ಬರಿಗೆ ಕೆಲಸದ ಒತ್ತಡ ಹಾಕಿ ಕಿರುಕುಳ ನೀಡುತ್ತಿದ್ದ ದಂಪತಿ
ಬಳ್ಳಾರಿ(ಜು.29): ತಂದೆ ಮಾಡಿದ ಸಾಲಕ್ಕೆ ಇಬ್ಬರು ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿರುವ ಅಮಾನವೀಯ ಘಟನೆ ನಗರದ ಶ್ರೀರಾಂಪುರ ಕಾಲನಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳಾ ಕಾಂಗ್ರೆಸ್ ಮುಖಂಡರು ಅವರ ಮನೆಗೆ ತೆರಳಿ ಆ ಇಬ್ಬರು ಮಕ್ಕಳನ್ನು ಜೀತದಿಂದ ವಿಮುಕ್ತಿ ಮಾಡಿದ್ದಾರೆ. ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿದ್ದ ದಂಪತಿಗಳನ್ನು ಬಂಧಿಸಲಾಗಿದೆ.
ನಾಗರಾಜ್ ಎಂಬುವರು ದಾದು ಎಂಬುವರಿಂದ 30 ಸಾವಿರ ಸಾಲ ಪಡೆದಿದ್ದರು. ಒಂದು ವರ್ಷದ ಹಿಂದೆ ಅನಾರೋಗ್ಯ ಕಾರಣದಿಂದ ನಾಗರಾಜ ಸಾವನ್ನಪ್ಪಿದ್ದಾನೆ. ಆತನ ಪತ್ನಿ ಸುನೀತಾ ಅಲ್ಲಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಬಡತನದಲ್ಲಿಯೇ ನಾಲ್ಕು ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆ. ಏತನ್ಮಧ್ಯೆ ನಾಗರಾಜಗೆ ಸಾಲ ನೀಡಿದ್ದ ದಾದು ಮತ್ತು ಈತನ ಪತ್ನಿ ಮುನ್ನಿ ಅವರು ನಿನ್ನ ಗಂಡ ಮಾಡಿದ ಸಾಲವನ್ನು ತೀರಿಸುವಂತೆ ಸುನಿತಾಗೆ ಒತ್ತಡ ತಂದಿದ್ದಾರೆ. ನಾನು ಅಲ್ಲಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಸದ್ಯಕ್ಕೆ ಸಾಲ ಕಟ್ಟಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಸುನೀತಾ ತನ್ನ ಅಸಹಾಯಕತೆ ಹೊರ ಹಾಕಿದ್ದಾಳೆ. ಇದಕ್ಕೆ ಒಪ್ಪದ ದಾದು ಮತ್ತು ಮುನ್ನಿ ದಂಪತಿ ಸುನೀತಾಳ 15 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿಯನ್ನು ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದಾರೆ.
undefined
ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ
ಸುನೀತಾಳ ಇಬ್ಬರು ಮಕ್ಕಳ ಮನೆ ಕೆಲಸಕ್ಕೆ ಯಾವುದೇ ಕೂಲಿಯನ್ನು ನೀಡುತ್ತಿರಲಿಲ್ಲ. ಬದಲಿಗೆ ಈ ಇಬ್ಬರಿಗೆ ಕೆಲಸದ ಒತ್ತಡ ಹಾಕಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಶ್ರೀರಾಂಪುರ ಕಾಲನಿಯಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಮಾಜಿ ಅಧ್ಯಕ್ಷೆ ಸೌಭ್ಯಾಗ್ಯ ಹಾಗೂ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮನೆಗೆ ನುಗ್ಗಿ ಮಕ್ಕಳನ್ನು ಜೀತದಿಂದ ಮುಕ್ತಗೊಳಿಸಿದ್ದಾರೆ.
ಇದೇ ವೇಳೆ ದಾದು ಮತ್ತು ಈತನ ಪತ್ನಿ ಮುನ್ನಿ ಹಾಗೂ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾದ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ‘ನಾಗರಾಜ್ ಸಂಕಷ್ಟದಲ್ಲಿದ್ದೇನೆ ಎಂದು .30 ಸಾವಿರ ಹಣ ಪಡೆದುಕೊಂಡಿದ್ದ. ಹಣ ತೀರಿಸುವ ಮೊದಲೇ ಸತ್ತು ಹೋಗಿದ್ದಾನೆ. ನಾವು ಹಣ ಕೊಡುವಾಗ ಯಾರೂ ಇರಲಿಲ್ಲ. ಇದೀಗ ಬಂದಿದ್ದಾರಾ? ಎಂದು ದಾದು ಹಾಗೂ ಮುನ್ನಿ ಪ್ರಶ್ನಿಸಿದ್ದಾರಲ್ಲದೆ, ನಾವು ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿಲ್ಲ. ನಿಮ್ಮ ಸಾಲ ತೀರುವವರೆಗೆ ನಮ್ಮ ಮಕ್ಕಳು ನಿಮ್ಮ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರಲಿ ಎಂದು ನಾಗರಾಜನ ಪತ್ನಿಯೇ ಬಿಟ್ಟು ಹೋಗಿದ್ದಾರೆ’ ಎಂದು ತಿಳಿಸಿದ್ದಾರೆ.
ಮಕ್ಕಳನ್ನು ಜೀತಕ್ಕೆ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಅಮಾನುಷವಾಗಿ ಮಕ್ಕಳಿಗೆ ಹಿಂಸೆ ನೀಡುತ್ತಿರುವುದು ಎಷ್ಟುಸರಿ? ಎಂದು ದಾಳಿ ನಡೆಸಿದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅವರು ದಾದು ಮತ್ತು ಮುನ್ನಿ ದಂಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು: ಅಲ್ ಖೈದಾ ಶಂಕಿತರ ಸೆರೆ ತನಿಖೆ ಎನ್‌ಐಎಗೆ?
ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಬ್ರೂಸ್‌ಪೇಟೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರಲ್ಲದೆ, ತಾಯಿ ಸುನೀತಾ ನೀಡಿದ ದೂರಿನ ಮೇರೆಗೆ ಬ್ರೂಸ್‌ಪೇಟೆ ಠಾಣೆಯಲ್ಲಿ ದಾದು ಮತ್ತು ಮುನ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿದ್ದ ವೇಳೆ ಮಕ್ಕಳನ್ನು ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಕಿರುಕುಳ ನೀಡಲಾಗಿದೆ ಎಂದು ಸುನೀತಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಕ್ಕಳನ್ನು ಜೀತಕ್ಕೆ ಇಟ್ಟುಕೊಳ್ಳುವುದು ಅಪರಾಧವಾಗಿದ್ದು, ವಿಷಯ ಗೊತ್ತಾಗುತ್ತಿದ್ದಂತೆಯೇ ಮನೆಗೆ ನುಗ್ಗಿ ಮಕ್ಕಳನ್ನು ರಕ್ಷಣೆ ಮಾಡಲಾಯಿತು. ಪ್ರಕರಣ ದಾಖಲಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ನಿಗಾ ವಹಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದಾದು ಮತ್ತು ಮುನ್ನಿಯನ್ನು ಬಂಧಿಸಲಾಗಿದ್ದು ಮುಂದಿನ ಹಂತದ ಕ್ರಮ ಜರುಗಿಸಲಾಗುವುದು ಎಂದು ಬ್ರೂಸ್‌ಪೇಟೆ ಪೊಲೀಸರು ಕನ್ನಡಪ್ರಭಕ್ಕೆ ತಿಳಿಸಿದರು.