
ಬೆಂಗಳೂರು(ಜು.29): ‘ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಾವು ಆರ್ಥಿಕವಾಗಿ ಸಹಾಯ ಮಾಡುತ್ತೇವೆ. ನಿಮಗೆ ಪ್ರತಿ ತಿಂಗಳು 20-30 ಸಾವಿರ ರುಪಾಯಿ ಸಂಬಳ ರೂಪದಲ್ಲಿ ಹಣ ನೀಡುತ್ತೇವೆ’ ಎಂದು ಇಬ್ಬರು ಶಂಕಿತ ಉಗ್ರರಿಗೆ ಅಲ್‌ಖೈದಾ ನೇಮಕಾತಿ ಜಾಲದ ಸದಸ್ಯರು ಭರವಸೆ ಕೊಟ್ಟಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಗಳೂರಿನಲ್ಲಿ ಸೆರೆಯಾದ ಅಖ್ತರ್ ಹುಸೇನ್ ಲಷ್ಕರ್ ಹಾಗೂ ತಮಿಳುನಾಡಿನ ಸೇಲಂ ಪಟ್ಟಣದ ಅಬ್ದುಲ್ ಮಂಡಲ್ ಅಲಿಯಾಸ್ ಜುಬಾಗೆ ಆಲ್ ಖೈದಾ ಸಂಘಟನೆ ಸದಸ್ಯರು ಗಾಳ ಹಾಕಿ ಸೆಳೆದಿದ್ದರು. ಈ ಇಬ್ಬರ ಕುಟುಂಬದ ಹಿನ್ನಲೆ ಬಗ್ಗೆ ಮಾಹಿತಿ ಪಡೆದ ಉಗ್ರರು, ಮೂಲಭೂತ ಬೋಧನೆ ಜೊತೆಗೆ ಹಣದಾಸೆ ತೋರಿಸಿ ಅಖ್ತರ್ ಹಾಗೂ ಅಬ್ದುಲ್‌ರ ಬ್ರೈನ್ ವಾಶ್ ಮಾಡಿದ್ದರು ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ತಮಗೆ ಕುಟುಂಬಕ್ಕೆ ಹಣಕಾಸು ನೆರವು ನೀಡುವ ಆಲ್‌ಖೈದಾ ಸಂಘಟಕರ ಭರವಸೆಗೆ ಅಖ್ತರ್ ಹಾಗೂ ಅಬ್ದುಲ್ ಒಪ್ಪಿದ್ದರು. ಅಲ್ಲದೆ ಈ ಇಬ್ಬರಿಗೆ ಮಾಸಿಕ 20ರಿಂದ 30 ಸಾವಿರ ಸಂಬಳ ಕೊಡುವುದಾಗಿ ಸಹ ಹೇಳಿದ್ದ ಆಲ್ ಖೈದಾ ಸಂಘಟಕರು, ಶಂಕಿತ ಉಗ್ರರಿಂದ ಬ್ಯಾಂಕ್ ಖಾತೆಗಳ ವಿವರವನ್ನೂ ಪಡೆದಿದ್ದರು. ಬೆಂಗಳೂರಿನಲ್ಲಿ ಎರಡು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಅಖ್ತರ್ ಹೊಂದಿದ್ದರೆ, ಅಬ್ದುಲ್ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲ. ಇನ್ನು ಸ್ವಿಗ್ಗಿ ಮತ್ತು ಝೋಮಾಟೋ ಆಹಾರ ವಿತರಣೆ ಸಲುವಾಗಿ ಅಖ್ತರ್ ಹಣಕಾಸು ವಹಿವಾಟು ಹೊರತುಪಡಿಸಿದರೆ ಇದುವರೆಗೆ ಬೇರೆ ಮೂಲದಿಂದ ಆತನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಅಲ್ ಖೈದಾ ಶಂಕಿತರ ಸೆರೆ ತನಿಖೆ ಎನ್‌ಐಎಗೆ?
ಅಖ್ತರ್‌ನ ಬ್ಯಾಂಕ್ ಖಾತೆಗಳ ಹಣದ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಮಗೆ ಕಾಶ್ಮೀರ ತಲುಪಿದ ಬಳಿಕ ಹಣ ಸಂದಾಯ ಮಾಡುವುದಾಗಿ ಆಲ್‌ಖೈದಾ ಸದಸ್ಯರು ಮಾತು ಕೊಟ್ಟಿದ್ದರು ಎಂದು ವಿಚಾರಣೆ ವೇಳೆ ಶಂಕಿತರು ಉಗ್ರರು ಬಾಯ್ಬಿಟ್ಟಿದ್ದಾರೆ. ಇನ್ನು ಕಾಶ್ಮೀರದ ತಲುಪುವ ಮಾರ್ಗದ ಹಾಗೂ ಅಲ್ಲಿವರೆಗೆ ಈ ಇಬ್ಬರಿಗೆ ಯಾರೆಲ್ಲ ನೆರವು ಕೊಡುತ್ತಿದ್ದರು ಎಂಬುದರ ಬಗ್ಗೆ ಇನ್ನೆಷ್ಟೇ ಮಾಹಿತಿ ಸಿಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗೆ ಸಿಸಿಬಿ ಪತ್ರ
ಆಲ್ ಖೈದಾ ಶಂಕಿತ ಉಗ್ರರ ಸಂವಹನ ಹಿನ್ನೆಲೆಯಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್ ಆ್ಯಪ್‌ಗಳಿಗೆ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.
ಅಲ್‌ಖೈದಾ ಜೊತೆ ಅಖ್ತರ್ ಹುಸೇನ್‌ಗೆ ಲಿಂಕ್, ಬೆಂಗಳೂರು ಗಲಭೆಗೆ ಮಾಸ್ಟರ್ ಪ್ಲ್ಯಾನ್!
ಟೆಲಿಗ್ರಾಮ್‌ನಲ್ಲಿ ಐದು ಗ್ರೂಪ್‌ಗಳಲ್ಲಿ ಅಬ್ದುಲ್ ಹಾಗೂ ಅಖ್ತರ್ ಸಕ್ರಿಯವಾಗಿದ್ದರು. ಅಲ್ಲದೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ನಲ್ಲಿ ಸಹ ನಿರಂತರವಾಗಿ ಚಾಟಿಂಗ್ ಮಾಡಿದ್ದಾರೆ. ಈ ಎಲ್ಲ ಮೆಸೇಜ್‌ಗಳನ್ನು ಇಬ್ಬರು ಅಳಸಿ ಹಾಕಿದ್ದಾರೆ. ಹೀಗಾಗಿ ಸಂಬಂಧಪಟ್ಟಆ್ಯಪ್‌ಗಳಿಗೆ ಮಾಹಿತಿ ಕೋರಿ ಪತ್ರ ಬರೆಯಲಾಗಿದೆ ಎಂದು ಸಿಸಿಬಿ ಅಧಿಕಾಕಾರಿಗಳು ತಿಳಿಸಿದ್ದಾರೆ.
ಎಫ್‌ಎಸ್‌ಎಲ್‌ಗೆ ಮೊಬೈಲ್‌ಗಳು
ಈ ಇಬ್ಬರು ಶಂಕಿತ ಉಗ್ರರ ಬಳಿ ಜಪ್ತಿಯಾದ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ಕಳುಹಿಸಲಾಗಿದೆ. ಶಂಕಿತರ ಉಗ್ರರು ಅಳಸಿ ಹಾಕಿರುವ ಸಂದೇಶಗಳು ಹಾಗೂ ವಿಡಿಯೋಗಳನ್ನು ರಿಟ್ರೀವ್ ಮಾಡಲಾಗುತ್ತದೆ. ಎಫ್‌ಎಸ್‌ಎಲ್ ವರದಿ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ