
ಬೆಂಗಳೂರು (ಜ.08): ಉದ್ಯಮಿ ಮನೆಯಲ್ಲಿ ಕದ್ದ ಚಿನ್ನಾಭರಣವನ್ನು ರೋಲ್ಡ್ ಗೋಲ್ಡ್ ಎಂದು ಭಾವಿಸಿ ಕಸದ ಗುಡ್ಡೆ ಎಸೆದಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮೀಟಿ ಒಳಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕುಖ್ಯಾತ ಕಳ್ಳ, ವಿಜಿನಪುರ ನಿವಾಸಿ ರಾಜೇಶ್ ಅಲಿಯಾಸ್ ಕ್ರ್ಯಾಕ್(25)ನನ್ನು ಬಂಧಿಸಲಾಗಿದೆ.
ವಿಜಿನಾಪುರದದ ಮಂಜುನಾಥ ಲೇಔಟ್‌ನ ನಿವಾಸಿ ಉದ್ಯಮಿ ಮಂಜುನಾಥ ಅವರು ಮೊಮ್ಮಗಳ ನಾಮಕರಣದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ನ.25ರಂದು ಕುಟುಂಬ ಸಮೇತ ಹೊಸೂರಿಗೆ ತೆರಳಿದ್ದರು. ಈ ವೇಳೆ ಆರೋಪಿ ರಾಜೇಶ್ ಬೀಗ ಮೀಟಿ ಮನೆ ಪ್ರವೇಶಿಸಿ ಕಬೋರ್ಡ್‌ನಲ್ಲಿದ್ದ ನಗದು ಹಾಗೂ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಲ್ಡ್ ಗೋಲ್ಡ್ ಎಂದು ಎಸೆದ: ಆರೋಪಿ ರಾಜೇಶ್ ಉದ್ಯಮಿ ಮಂಜುನಾಥ ಮನೆಯಲ್ಲಿ ಕದ್ದ ಚಿನ್ನಾಭರಣಗಳನ್ನು ತಮಿಳುನಾಡಿನ ಹೊಸೂರಿಗೆ ತೆಗೆದುಕೊಂಡು ಹೋಗಿ ಮಾರಾಟಕ್ಕೆ ಯತ್ನಿಸಿದ್ದಾನೆ. ಮೊದಲಿಗೆ ಚಿನ್ನಾಭರಣ ಅಂಗಡಿಗೆ ತೆರಳಿದ್ದು, ಅವರು ಚಿನ್ನ ಖರೀದಿಸಲು ನಿರಾಕರಿಸಿದ್ದಾರೆ. ಬಳಿಕ ಪರಿಚಿತ ವ್ಯಕ್ತಿ ಬಳಿ ತೆರಳಿ ಚಿನ್ನಾಭರಣ ತೋರಿಸಿದ್ದಾನೆ.
ಬಾಲಕಿಗೆ ಲೈಂಗಿಕ ಕಿರುಕುಳ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ
ಈ ವೇಳೆ ಆತ ಈ ಚಿನ್ನಾಭರಣ ರೋಲ್ಡ್ ಗೋಲ್ಡ್ ಎಂದು ಹೇಳಿದ್ದಾನೆ. ಇದರಿಂದ ಬೇಸರಗೊಂಡು ಆರೋಪಿ ರಾಜೇಶ್, ರಸ್ತೆಯ ಬದಿಯ ಕಸದ ಗುಡ್ಡೆಗೆ ಚಿನ್ನಾಭರಣವಿದ್ದ ಪರ್ಸ್ ಎಸೆದು ಬಂದಿದ್ದ. ಘಟನಾ ಸ್ಥಳದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು, ಹೊಸೂರಿನ ಕಸದ ಗುಡ್ಡೆಯಲ್ಲಿದ್ದ ಅಸಲಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ