ಬೆಂಗಳೂರು: ರಾಷ್ಟ್ರಪತಿಗೆ ಸುಳ್ಳು ದೂರು ಕೊಟ್ಟ ಪೇದೆ ತಲೆದಂಡ

By Kannadaprabha News  |  First Published Mar 29, 2023, 10:18 AM IST

ಸುಬ್ರಹ್ಮಣ್ಯ ನಗರ ಠಾಣೆಯ ಇನ್‌ಸ್ಪೆಕ್ಟರ್‌ ವಿರುದ್ಧ ಇಬ್ಬರು ಹೆಡ್‌ ಕಾನ್‌ಸ್ಟೇಬಲ್‌ಗಳಿಂದ ಸುಳ್ಳು ದೂರು, ಇಲಾಖಾ ವಿಚಾರಣೆ. 


ಬೆಂಗಳೂರು(ಮಾ.29): ಕರ್ತವ್ಯದ ಅವಧಿಯಲ್ಲಿ ಆಶಿಸ್ತು ತೋರಿಸಿದ ಆರೋಪದ ಮೇರೆಗೆ ಸುಬ್ರಹ್ಮಣ್ಯ ನಗರ ಠಾಣೆಯ ಇಬ್ಬರು ಹೆಡ್‌ ಕಾನ್‌ಸ್ಟೇಬಲ್‌ಗಳನ್ನು ಉತ್ತರ ವಿಭಾಗದ ಡಿಸಿಪಿ ಡಿ.ದೇವರಾಜ್‌ ಅಮಾನತುಗೊಳಿಸಿದ್ದಾರೆ. ಹೆಡ್‌ ಕಾನ್‌ಸ್ಟೇಬಲ್‌ ಶಿವಕುಮಾರ್‌ ಹಾಗೂ ಕಾನ್‌ಸ್ಟೇಬಲ್‌ ವಿಜಯ್‌ ರಾಥೋಡ್‌ ಅಮಾನತುಗೊಂಡಿದ್ದು, ಈ ಇಬ್ಬರ ವಿರುದ್ಧ ಇಲಾಖಾ ಮಟ್ಟದ ವಿಚಾರಣೆ ನಡೆಸಿ ಉತ್ತರ ವಿಭಾಗದ ಡಿಸಿಪಿ ಡಿ.ದೇವರಾಜ್‌ ಶಿಸ್ತು ಕ್ರಮ ಜರುಗಿಸಿದ್ದಾರೆ. ಕಿರುಕುಳ ಆರೋಪ ಹೊತ್ತಿದ್ದ ಇನ್‌ಸ್ಪೆಕ್ಟರ್‌ ಶರಣಗೌಡ ಅವರಿಗೆ ಕ್ಲೀನ್‌ ಚೀಟ್‌ ಸಿಕ್ಕಿದೆ.

ತಮ್ಮ ಠಾಣೆ ಇನ್‌ಸ್ಪೆಕ್ಟರ್‌ ಶರಣಗೌಡ ವಿರುದ್ಧ ರಾಷ್ಟ್ರಪತಿಗಳಿಗೆ ಅನಾಮಧೇಯ ಹೆಸರಿನಲ್ಲಿ ಪತ್ರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಠಾಣಾ ಬರಹಗಾರ ಹೆಡ್‌ ಕಾನ್‌ಸ್ಟೇಬಲ್‌ ಶಿವಕುಮಾರ್‌ ಅಶಿಸ್ತು ತೋರಿದ್ದರೆ, ಠಾಣೆಗೆ ದೂರು ನೀಡಲು ಬರುತ್ತಿದ್ದ ಮಹಿಳೆಯರ ಜತೆ ಅಸಭ್ಯವಾಗಿ ವರ್ತನೆ ತೋರಿದ ಆರೋಪ ಹೆಡ್‌ ಕಾನ್‌ಸ್ಟೇಬಲ್‌ ವಿಜಯ್‌ ರಾಥೋಡ್‌ ಮೇಲೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

82 ವರ್ಷದ ತಂದೆ​ಯನ್ನೇ ಮನೆ​ಯಿಂದ ಹೊರ ಹಾಕಿದ ಮಗ - ಸೊಸೆ!

ತಮಗೆ ರಜೆ ನೀಡದೆ ಮಾನಸಿಕ ಕಿರುಕುಳ ಹಾಗೂ ಹಫ್ತಾ ವಸೂಲಿಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಇನ್‌ಸ್ಪೆಕ್ಟರ್‌ ಶರಣಗೌಡ ವಿರುದ್ಧ ರಾಷ್ಟ್ರಪತಿಗಳಿಗೆ ಸುಬ್ರಹ್ಮಣ್ಯ ನಗರ ಠಾಣೆಯ ನೊಂದವರ ಅಧಿಕಾರಿ ಮತ್ತು ಸಿಬ್ಬಂದಿ ಹೆಸರಿನಲ್ಲಿ ಬರೆಯಲಾದ ಪತ್ರವೊಂದು ವಾಟ್ಸಾಪ್‌ನಲ್ಲಿ ‘ವೈರಲ್‌’ ಆಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ದೇವರಾಜ್‌ ಅವರು, ಅನಾಮಧೇಯ ಪತ್ರದ ಹಿಂದಿರುವ ಕಾಣದ ಕೈಗಳ ಶೋಧಿಸಿದಾಗ ಹೆಡ್‌ ಕಾನ್‌ಸ್ಟೇಬಲ್‌ ಶಿವಕುಮಾರ್‌ ಮೇಲೆ ಅನುಮಾನ ಬಂದಿದೆ.

ಈ ನಿಟ್ಟಿನಲ್ಲಿ ಮತ್ತಷ್ಟು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಯಿತು. ಅಂಚೆ ಕಚೇರಿಗೆ ತೆರಳಿ ಅಲ್ಲೇ ಕುಳಿತು ವಿಳಾಸ ಬರೆದು ಪತ್ರ ಪೋಸ್ಟ್‌ ಮಾಡುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಮೇತ ಪುರಾವೆ ಸಿಕ್ಕಿತು. ಚುನಾವಣೆ ಸಮಯವಾಗಿರುವ ಕಾರಣ ಬಂದೋಬಸ್‌್ತ ಕೆಲಸಗಳು ಹೆಚ್ಚಿವೆ. ಹೀಗಾಗಿ ಸಿಬ್ಬಂದಿಗೆ ವಿನಾಕಾರಣ ರಜೆ ನೀಡದಂತೆ ಹಿರಿಯ ಅಧಿಕಾರಿಗಳ ಸೂಚನೆ ಇದೆ. ಹೀಗಾಗಿ ರಜೆ ನೀಡಿರಲಿಲ್ಲ. ಇನ್ನು ವಿಚಾರಣೆ ವೇಳೆ ಶಿವಕುಮಾರ್‌ಗೆ ರಜೆ ಸಮಸ್ಯೆಯಾಗಿಲ್ಲ ಎಂಬುದು ತಿಳಿಯಿತು. ಅಸೂಯೆಯಿಂದ ಇನ್‌ಸ್ಪೆಕ್ಟರ್‌ ವಿರುದ್ಧ ಆತ ಸುಳ್ಳು ಆರೋಪಗಳನ್ನು ಮಾಡಿದ್ದ ಎಂದು ಮೂಲಗಳು ಹೇಳಿವೆ.

Suicide case: ಅನುಮಾನಾಸ್ಪದವಾಗಿ ಪತ್ನಿ ಆತ್ಮಹತ್ಯೆ: ಪತಿಯಿಂದ ದೂರು

ಮಹಿಳೆಯರ ಜತೆ ಅನುಚಿತ ವರ್ತನೆ

ಇನ್ನು ಠಾಣೆಗೆ ದೂರು ನೀಡಲು ಬರುವ ಮಹಿಳೆಯರ ಜತೆ ಅನುಚಿತವಾಗಿ ವರ್ತನೆ ತೋರುತ್ತಿದ್ದ ಆರೋಪದ ಮೇರೆಗೆ ವಿಜಯ್‌ ರಾಥೋಡ್‌ ತಲೆದಂಡವಾಗಿದೆ. ಠಾಣೆಗೆ ಬರುವ ಮಹಿಳೆಯರಿಂದ ಮೊಬೈಲ್‌ ಸಂಖ್ಯೆ ಪಡೆದು ಬಳಿಕ ಅವರಿಗೆ ನಿರಂತರವಾಗಿ ಕರೆ ಮಾಡಿ ಆತ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಅಲ್ಲದೆ ಶಿವಕುಮಾರ್‌ ಜತೆ ಸೇರಿ ವಾಟ್ಸಾಪ್‌ನಲ್ಲಿ ಇನ್‌ಸ್ಪೆಕ್ಟರ್‌ ವಿರುದ್ಧ ಪತ್ರವನ್ನು ವೈರಲ್‌ ಮಾಡಿದ್ದಕ್ಕೆ ವಿಚಾರಣೆ ವೇಳೆ ಪುರಾವೆ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಅಮಾನತ್ತಿಲ್ಲ

ಕಿರುಕುಳ ನೀಡಿದ ಆರೋಪ ಹೊರಸಿ ರಾಷ್ಟ್ರಪತಿ ಅವರಿಗೆ ಠಾಣಾ ಸಿಬ್ಬಂದಿ ದೂರು ನೀಡಿದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಠಾಣೆ ಇನ್‌ಸ್ಪೆಕ್ಟರ್‌ ಶರಣಗೌಡ ಅಮಾನತುಗೊಂಡಿದ್ದಾರೆ ಎಂದು ಮೂಲಗಳು ನೀಡಿದ ತಪ್ಪು ಮಾಹಿತಿಯಿಂದ ಮಂಗಳವಾರ ‘ಕನ್ನಡಪ್ರಭ’ದಲ್ಲಿ ಸುದ್ದಿ ಪ್ರಕಟವಾಗಿದೆ. ಇನ್‌ಸ್ಪೆಕ್ಟರ್‌ ವಿರುದ್ಧ ಪತ್ರ ಬರೆದು ಆಶಿಸ್ತು ತೋರಿದ ಇಬ್ಬರು ಸಿಬ್ಬಂದಿ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

click me!