ಅತಿ ವೇಗವಾಗಿ ಹೋಗುತ್ತಿದ್ದ ಖಾಸಗಿ ಬಸ್ಸಿನ ಫುಟ್‌ಬೋರ್ಡಲ್ಲಿ ನಿಂತಿದ್ದ ಕಂಡಕ್ಟರ್ ರಸ್ತೆಗೆ ಎಸೆಯಲ್ಪಟ್ಟು ದಾರುಣವಾಗಿ ಸಾವಿಗೀಡಾದ ಘಟನೆ ನಗರದ ನಂತೂರು ವೃತ್ತದಲ್ಲಿ ನಡೆದಿದೆ.
ಮಂಗಳೂರು (ಆ.31): ಅತಿ ವೇಗವಾಗಿ ಹೋಗುತ್ತಿದ್ದ ಖಾಸಗಿ ಬಸ್ಸಿನ ಫುಟ್‌ಬೋರ್ಡಲ್ಲಿ ನಿಂತಿದ್ದ ಕಂಡಕ್ಟರ್ ರಸ್ತೆಗೆ ಎಸೆಯಲ್ಪಟ್ಟು ದಾರುಣವಾಗಿ ಸಾವಿಗೀಡಾದ ಘಟನೆ ನಗರದ ನಂತೂರು ವೃತ್ತದಲ್ಲಿ ನಡೆದಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿ, ಸದ್ಯ ಸುರತ್ಕಲ್ ತಡಂಬೈಲ್ನಲ್ಲಿ ವಾಸವಿದ್ದ ಈರಯ್ಯ (23) ಮೃತರು. ಮಂಗಳವಾರ ಮಧ್ಯಾಹ್ನ ಬಸ್ ಕದ್ರಿ ಕೆಪಿಟಿ ಕಡೆಯಿಂದ ಬಂದು ನಂತೂರು ವೃತ್ತದಲ್ಲಿ ಮಲ್ಲಿಕಟ್ಟೆ ಕಡೆಗೆ ವೇಗವಾಗಿ ತಿರುವು ಪಡೆದಿದ್ದು, ಈ ವೇಳೆ ಎದುರಿನ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ.
ತಕ್ಷಣ ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ರಾತ್ರಿ 8 ಗಂಟೆ ಸುಮಾರಿಗೆ ಯುವಕ ಮೃತಪಟ್ಟಿದ್ದಾನೆ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ ವೇಗವಾಗಿ ಚಲಿಸಿದ್ದರಿಂದಲೇ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಕಾರಣದಿಂದ ಹೊರಗೆ ಹೆಜ್ಜೆ ಇಟ್ಟಿಲ್ಲ, ಸಮಯ, ಸಂದರ್ಭ ಎಲ್ಲದಕ್ಕೂ ಉತ್ತರ ಕೊಡುತ್ತೆ: ನಿಖಿಲ್
ಬಾಗಿಲು ಅಳವಡಿಸಲು ಸೂಚನೆ: ಈ ಘಟನೆ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್‌ಗಳಿಗೆ ಬಾಗಿಲು ಅಳವಡಿಸಬೇಕು. ನಿರ್ವಾಹಕರು ಸಹಿತ ಯಾರೂ ಬಾಗಿಲಿನಲ್ಲಿ ನಿಲ್ಲಬಾರದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಬಸ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.