* ನಿತ್ಯದಂತೆ ಸೋಮವಾರವೂ ಕೆಲಸ ಮುಗಿಸಿ ಮನೆಗೆ ಬಂದಿದ್ದ ಮೃತ
* ಬೆಳಗಾಗುವುದೊರಳಗೆ ಹತ್ಯೆಯಾಗಿರುವ ಸ್ವಾಮಿ
* ಹತ್ಯೆಗೆ ಕಾರಣ ತಿಳಿದಿಲ್ಲ
ಸಕಲೇಶಪುರ(ಜೂ.16): ತಾಲೂಕಿನ ಮಠಸಾಗರ ಬಳಿ ಇರುವ ಕಾಫಿ ಮಂಡಳಿಯಲ್ಲಿ ನೌಕರನಾಗಿದ್ದ ವ್ಯಕ್ತಿಯನ್ನು ಕಳೆದ ರಾತ್ರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಮಠ ಸಾಗರ ಗ್ರಾಮದ ಎ.ಸ್ವಾಮಿ(53) ಕೊಲೆಯಾದ ದುರ್ದೈವಿ.
ಕಳೆದ 25 ವರ್ಷಗಳಿಂದ ಕಾಫಿ ಮಂಡಳಿಯಲ್ಲಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ವಾಮಿ ನಿತ್ಯವೂ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಮಂಗಳವಾರವೂ ಕೂಡ ಎಂದಿನಂತೆ ಕಾಫಿ ಬೋರ್ಡಿಗೆ ಕೆಲಸಕ್ಕೆ ಹೋಗಿದ್ದರು. ಈ ನಡುವೆ ಮಠ ಸಾಗರ ಗ್ರಾಮದ ಸುನಿಲ್ ಜೋಸೆಫ್ ಎಂಬುವವರು ಮೃತಪಟ್ಟಹಿನ್ನೆಲೆ ಮಧ್ಯಾಹ್ನವೇ ಮನೆಗೆ ಬಂದಿದ್ದರು. ರಾತ್ರಿ ಮನೆಯಲ್ಲಿ ಊಟ ಮುಗಿಸಿ 11 ಗಂಟೆ ಸುಮಾರಿಗೆ ಗ್ರಾಮದಲ್ಲಿ ಮೃತಪಟ್ಟಿದ್ದ ಸುನಿಲ್ ಜೋಸೆಫ್ ಅವರ ಮನೆಯ ಬಳಿ ಮಲಗಲು ಬೆಡ್‌ಶೀಟ್ ಸಮೇತ ಸ್ನೇಹಿತರೊಟ್ಟಿಗೆ ತೆರಳಿದ್ದರು. ಆದರೆ ಬೆಳಗಾಗುವುದರೊಳಗೆ ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಚಿಕ್ಕಬಳ್ಳಾಪುರ: ಜೆಡಿಎಸ್ ಕಾರ್ಯಕರ್ತನದ್ದು ಆಕ್ಸಿಡೆಂಟ್ ಅಲ್ಲ ಕೊಲೆ..!
ಬೆಳಗಿನ ಜಾವ ಕೊಲೆ ನಡೆದಿರುವ ಶಂಕೆ:
ಬುಧವಾರ ಮುಂಜಾನೆ ಸುನಿಲ್ ಜೋಸೆಫ್ ಅವರ ಶವ ಸಂಸ್ಕಾರ ಕೆಲಸ ಮಾಡಲು ಹೋಗುತ್ತಿದ್ದಾಗ ಗ್ರಾಮದ ಹಳೆ ಬಾಗೆ ಮತ್ತೊಬ್ಬರು ಬಾಳ್ಳುಪೇಟೆಗೆ ಹೋಗುವ ರಸ್ತೆಯ ಬದಿಯ ಚರಂಡಿಯಲ್ಲಿ ಸ್ವಾಮಿ ಅವರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಮಾರಕಾಸ್ತ್ರಗಳಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಅಣತಿ ದೂರದಲ್ಲಿ ಸ್ವಾಮಿಯವರ ಟವಲ್, ಶರ್ಚ್ ಹಾಗೂ ಬೆಡ್‌ಶೀಟ್ ಬಿದ್ದಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಯಾಕೆ ಹತ್ಯೆ ಮಾಡಿದ್ದಾರೆಂದು ತಿಳಿದಿಲ್ಲ:
ಈ ಸಂದರ್ಭದಲ್ಲಿ ಮೃತನ ಮಗ ಪ್ರವೀಣ್ ಮಾತನಾಡಿ, ನಮ್ಮ ತಂದೆ ತುಂಬಾ ಸೌಮ್ಯಸ್ವಭಾವರಾಗಿದ್ದು ಯಾರೊಂದಿಗೂ ಜಗಳ ಮಾಡಿ ಕೊಂಡವರಲ್ಲ. ಆದರೆ ಈ ರೀತಿ ಯಾಕೆ ಕೊಲೆ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಪಟ್ಟಣ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಲೂರು ವೃತ್ತನಿರೀಕ್ಷಕ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಪಟ್ಟಣ ಪಿಎಸ್‌ಐ ಶಿವಶಂಕರ್ ಭೇಟಿ ನೀಡಿದ್ದರು.