* ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
* ಹುನುಮಾನ್ ಸಿಲ್ಕ್ ಕೇಂದ್ರ ಹೆಸರಿನ ಹೋಲ್ ಸೇಲ್ ಸೀರೆ ಅಂಗಡಿಯಲ್ಲಿ ಕಳ್ಳರ ಕರಾಮತ್ತು
* ಬಾಗಿಲು ಮೀಟಿ ಕಳ್ಳತನ ಮಾಡಿದ ದುಷ್ಕರ್ಮಿಗಳು
ಬೆಂಗಳೂರು(ಏ.17): ಹಾಡಹಗಲೇ ದುಷ್ಕರ್ಮಿಗಳು ಹೋಲ್ ಸೇಲ್ ಬಟ್ಟೆ ಅಂಗಡಿಯ ಬಾಗಿಲು ಮೀಟಿ 10 ಲಕ್ಷ ನಗದು ಹಾಗೂ ಬೆಳ್ಳಿ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಬ್ಬನ್‌ಪೇಟೆಯ ಪ್ರತಾಪ್ ರಾಮ್ ಮಾಲೀಕತ್ವದ ಬೆಟ್ಟಪ್ಪ ಲೇನ್‌ನ ಸುರೇಶ್ ಕಾಂಪ್ಲೆಕ್ಸ್‌ನಲ್ಲಿರುವ ಹುನುಮಾನ್ ಸಿಲ್ಕ್ ಕೇಂದ್ರ ಹೆಸರಿನ ಹೋಲ್ ಸೇಲ್ ಸೀರೆ ಅಂಗಡಿಯಲ್ಲಿ ಏ.14ರಂದು ಈ ಕೃತ್ಯ ನಡೆದಿದೆ. ಅಂದು ಬೆಳಗ್ಗೆ 10ಕ್ಕೆ ಸೀರೆ ಅಂಗಡಿಯ ಕೆಲಸಗಾರ ಬೋಳಾರಾಮ ಅಂಗಡಿಯ ಬಾಗಿಲು ತೆರೆದು ಮಧ್ಯಾಹ್ನ 2ರವರೆಗೂ ವ್ಯಾಪಾರ(Business) ಮಾಡಿದ್ದಾನೆ. ಬಳಿಕ ಅಂಗಡಿ ಬಾಗಿಲನ್ನು ಲಾಕ್ ಮಾಡಿಕೊಂಡು ಊಟಕ್ಕೆ ತೆರಳಿದ್ದಾನೆ. ಮಧ್ಯಾಹ್ನ 3.15ರ ಸುಮಾರಿಗೆ ವಾಪಾಸ್ ಅಂಗಡಿ ಬಳಿ ಬಂದಾಗ ದುಷ್ಕರ್ಮಿಗಳು ಬಾಗಿಲು ಮೀಟಿ ಕಳ್ಳತನ(Theft) ಮಾಡಿರುವುದು ಬೆಳಕಿಗೆ ಬಂದಿದೆ.
ಕುರಿ ಕಾಳಗದ ಸ್ಫರ್ಧೆಯಲ್ಲಿ ಗೆಲುವಿನ ಓಟ ತಡೆಯಲು ಟಗರು ಕದ್ದ ಕಳ್ಳರು, ಮಟನ್ ಸ್ಟಾಲ್‌ನಲ್ಲಿ ಪತ್ತೆ
ಬಳಿಕ ಕೆಲಸಗಾರ ಬೋಳಾರಾಮ, ಅಂಗಡಿ ಮಾಲಿಕ ಪ್ರತಾಪ್ ರಾಮ್‌ಗೆ ಘಟನೆ ಕುರಿತು ಮಾಹಿತಿ ನೀಡಿದ್ದಾನೆ. ಈ ವೇಳೆ ಅಂಗಡಿ ಬಳಿ ಬಂದು ನೋಡಿದಾಗ ಮರದ ಡ್ರಾಯರ್‌ನಲ್ಲಿ ಇರಿಸಿದ್ದ .10 ಲಕ್ಷ ನಗದು ಹಾಗೂ ಬೆಳ್ಳಿಯ ಬಿಸ್ಕತ್, ಬೆಳ್ಳಿ ನಾಣ್ಯ, ಬೆಳ್ಳಿ ಸಾಮಗ್ರಿಗಳನ್ನು ದೋಚಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರತಾಪ್ ರಾಮ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಾಳುಮೆಣಸಿಗೆ ಫುಲ್ ಡಿಮ್ಯಾಂಡ್ , ಕಳ್ಳರ ಕಾಟ ವಿಪರೀತ!
ಜಿಪಿಎಸ್ ಮೂಲಕ ಸಿಕ್ಕಿಬಿದ್ದ ಕಾರುಗಳ್ಳರು
ಬೆಂಗಳೂರು: ಉದ್ಯಮಿಯೊಬ್ಬರ ದುಬಾರಿ ಬೆಲೆಯ ಕಾರು ಕದ್ದು(Car Theft) ಕೇರಳಕ್ಕೆ(Kerala) ಹೋಗಿದ್ದ ಖದೀಮರು ಕೊನೆಗೆ ಆ ಕಾರಿಗೆ ಅಳವಡಿಸಿದ್ದ ಜಿಪಿಎಸ್‌ನಿಂದ ಬಂಡೇಪಾಳ್ಯ ಠಾಣೆ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.
ಕೊಡಗು ಜಿಲ್ಲೆ ಆಶಿಕ್ ಹಾಗೂ ಸಮದ್ ಬಂಧಿತರಾಗಿದ್ದು, ಆರೋಪಿಗಳಿಂದ(Accused) .18 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ. ಏ.6 ರಂದು ಹೊಸೂರು ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಕೇರಳ ಮೂಲದ ಕಾಸಿಮ್ ಮಹೀರ್ ಖಾನ್ ಅವರು ಕಾರು ನಿಲ್ಲಿಸಿ ಸಿಗರೆಟ್ ಖರೀದಿಗೆ ಹೋಗಿದ್ದರು. ಆ ವೇಳೆ ಅವರ ಕಾರನ್ನು ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಕೊನೆಗೆ ಕಾರಿನ ಜಿಪಿಎಸ್ (GPS) ಮೂಲಕ ಆರೋಪಿಗಳನ್ನು ಬಂಡೇಪಾಳ್ಯ ಠಾಣೆ ಪೊಲೀಸರು(Police) ಬಲೆಗೆ ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆ ಸಲುವಾಗಿ ಕಾರು ಕದ್ದಿದ್ದರು. ಉದ್ಯಮಿ(Businessman) ಕಾಸಿಮ್ ಅವರು, ಮೂರು ತಿಂಗಳ ಹಿಂದಷ್ಟೇ ಕಾರು ಖರೀದಿಸಿದ್ದರು. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಏ.6 ರಂದು ಶೆಲ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಬಂಕ್ ಒಳಗೆ ಹೋಗಿದ್ದರು. ಆಗ ಹೊಂಚು ಹಾಕಿ ಕಾರು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಆ ಕಾರಿಗೆ ಅಳವಡಿಸಿದ್ದ ಜಿಪಿಎಸ್ ಬಗ್ಗೆ ಕಾರಿನ ಶೋ ರೂಂನಿಂದ ಮಾಹಿತಿ ಪಡೆದು ಆರೋಪಿಗಳನ್ನು ಬೆನ್ನಹತ್ತಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.