
ಬೆಂಗಳೂರು(ಜೂ.13): ಕಳೆದ ಎಂಟು ತಿಂಗಳ ಹಿಂದೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ದರೋಡೆ ಪ್ರಕರಣದಲ್ಲಿ ಕುಖ್ಯಾತ ವಂಚಕ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಎರಡನೇ ಪತ್ನಿ ಹಾಗೂ ನಾದಿನಿ ದೋಷಮುಕ್ತರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ, ಆರೋಪಿತರಾದ ರವಿ, ಪತ್ನಿ ಹಾಗೂ ನಾದಿನಿ ವಿರುದ್ಧ ಆರೋಪಕ್ಕೆ ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಹೇಳಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದೆ.
ರವಿ ಪತ್ನಿ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಕಾಟನ್‌ಪೇಟೆ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಅಪರಾಧ ಸಂಚಿಗೆ ಸೂಕ್ತ ಸಾಕ್ಷ್ಯಗಳು ಲಭಿಸಿದ್ದು, ಇವುಗಳ ಆಧಾರದ ಮೇರೆಗೆ ಆರೋಪಿಗಳಿಗೆ ಕ್ಲೀನ್‌ಚೀಟ್ ಕೊಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಪಾತ್ರವಹಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಪೊಲೀಸ್ ಅಧಿಕಾರಿಗಳ ಜತೆ ಆತನ ಡೀಲ್ ಮಾತುಕತೆಯ ಕೆಲವು ಆಡಿಯೋಗಳೂ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಇದೇ ವರ್ಷದ ಜನವರಿಯಲ್ಲಿ ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ ಹಾಗೂ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿದ ಆರೋಪದ ಮೇರೆಗೆ ಆತನ ಎರಡನೇ ಪತ್ನಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್‌ನಲ್ಲಿ ಬಂಧಿಸಿ ಮೈಸೂರು ಪೊಲೀಸರು ಕರೆ ತಂದಿದ್ದರು. ಬಳಿಕ ಅತ್ಯಾಚಾರ ತನಿಖೆ ವೇಳೆ 2022ರ ನವೆಂಬರ್‌ನಲ್ಲಿ ಆತನ ಪತ್ನಿ ಹಾಗೂ ನಾದಿನಿ ಮೇಲೆ ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲಾಗಿದ್ದ ಸಂಗತಿ ಬಯಲಾಗಿತ್ತು. ಈ ಸಂಬಂಧ ಅಂದಿನ ಕಾಟನ್‌ಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಪ್ರವೀಣ್ ಅವರನ್ನು ಡಿಜಿಪಿ ಪ್ರವೀಣ್ ಸೂದ್ ಅಮಾನತುಗೊಳಿಸಿದ್ದರು. ಕೊನೆಗೆ ಈ ಸುಳ್ಳು ದರೋಡೆ ಆರೋಪದ ಬಗ್ಗೆ ತನಿಖೆಯನ್ನು ಸಿಸಿಬಿ ವಹಿಸಲಾಗಿತ್ತು. ಸುದೀರ್ಘ ತನಿಖೆ ಬಳಿಕ ಅಂತಿಮವಾಗಿ ರವಿ ಪತ್ನಿ ಹಾಗೂ ನಾದಿನಿ ದೋಷಮುಕ್ತರಾಗಿದ್ದಾರೆ.
ಪ್ರತ್ಯೇಕ ಎಫ್‌ಐಆರ್ ಸಾಧ್ಯತೆ
ಈ ಕ್ಲೀನ್ ಚೀಟ್ ಬೆನ್ನಲ್ಲೆ ವಂಚಕ ಸ್ಯಾಂಟ್ರೋ ರವಿ ಹಾಗೂ ಆತನಿಗೆ ಸಹಕರಿಸಿದ ಆರೋಪದ ಮೇರೆಗೆ ಈಗಾಗಲೇ ಅಮಾನತಿನಲ್ಲಿರುವ ಕಾಟನ್‌ಪೇಟೆ ಠಾಣೆ ಹಿಂದಿನ ಇನ್ಸ್‌ಪೆಕ್ಟರ್ ಪ್ರವೀಣ್ ಅವರಿಗೆ ಸಂಕಷ್ಟಎದು ರಾಗಿದ್ದು, ಸುಳ್ಳು ದರೋಡೆ ಪ್ರಕರಣ ದಾಖಲಿಸಿದ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಾಗುವ ಸಾಧ್ಯತೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ