ಬೆಂಗಳೂರು: ದುಬಾರಿ ಬಾಡಿಗೆ ಕೊಡದಿದ್ದಕ್ಕೆ ಪ್ರಯಾಣಿಕನನ್ನೇ ಹೊಡೆದು ಕೊಂದ ಆಟೋ ಚಾಲಕ..!

By Kannadaprabha NewsFirst Published Jun 13, 2023, 5:36 AM IST
Highlights

ಅಸ್ಸಾಂ ಮೂಲದ ಪ್ರಯಾಣಿಕರಿಗೆ ಮನಬಂದಂತೆ ಹಲ್ಲೆಗೈದ ಆಟೋ ಚಾಲಕ, ಭಾನುವಾರ ತಡರಾತ್ರಿ ಘಟನೆ, ಆರೋಪಿ ವಶಕ್ಕೆ ಪಡೆದು ಪೊಲೀಸರ ವಿಚಾರಣೆ 
 

ಬೆಂಗಳೂರು(ಜೂ.13):  ದುಬಾರಿ ಬಾಡಿಗೆ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಕೋಪಗೊಂಡ ಆಟೋ ಚಾಲಕನೊಬ್ಬ ಇಬ್ಬರು ಪ್ರಯಾಣಿಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಸುಬ್ರಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಶವಂತಪುರದ ಅಮೋದ್‌ ಕರೋಡ್‌(28) ಕೊಲೆಯಾದವರು. ಈತನ ಸಹೋದರ ಅಯೂಬ್‌(25) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಾನುವಾರ ತಡರಾತ್ರಿ ಯಶವಂತಪುರ ಸೋಪ್‌ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಆಟೋ ಚಾಲಕ ಸುಂಕದಕಟ್ಟೆನಿವಾಸಿ ಅಶ್ವತ್‌್ಥ(29) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಹಾಡಿನ ವಿಷ್ಯಕ್ಕೆ ಶುರುವಾದ ಗಲಾಟೆ: ದುಡ್ಡು ಹಾಕಿ ಸಮಾರಂಭ ಆಯೋಜಿಸಿದ್ದವನೇ ಕೊಲೆಯಾದ ..!

ಅಸ್ಸಾಂ ಮೂಲದ ಅಮೋದ್‌ ಮತ್ತು ಅಯೂಬ್‌ ಸಹೋದರರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಯಶವಂತಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಭಾನುವಾರ ಕೆಲಸಕ್ಕೆ ರಜೆ ಹಿನ್ನೆಲೆಯಲ್ಲಿ ಚಂದಾಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಸ್ಸಾಂನಿಂದ ರೈಲಿನಲ್ಲಿ ಹೊರಟ್ಟಿದ್ದ ಚಿಕ್ಕಪ್ಪನ ಮಗ ಭಾನುವಾರ ಮುಂಜಾನೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬರಲಿದ್ದ. ಹೀಗಾಗಿ ಆತನನ್ನು ರೈಲು ನಿಲ್ದಾಣದಿಂದ ಮನೆಗೆ ಕರೆದೊಯ್ಯುವ ಸಲುವಾಗಿ ಚಂದಾಪುರದಿಂದ ಬಿಎಂಟಿಸಿ ಬಸ್‌ನಲ್ಲಿ ರಾತ್ರಿ 11 ಗಂಟೆಗೆ ಮೆಜೆಸ್ಟಿಕ್‌ಗೆ ಬಂದಿದ್ದರು. ಮೆಜೆಸ್ಟಿಕ್‌ನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಆಟೋದಲ್ಲಿ ತೆರಳು ಆಟೋ ಬಾಡಿಗೆ ವಿಚಾರಿಸಿದಾಗ ಒಬ್ಬ ಚಾಲಕ 300 ರು. ಬಾಡಿಗೆ ಕೇಳಿದ್ದಾನೆ. ಬಾಡಿಗೆ ದುಬಾರಿಯಾಯಿತು ಎಂದು ಆ ಆಟೋ ಬಿಟ್ಟಿದ್ದಾರೆ.

ಮೂರು ಸಾವಿರ ರು.ಬಾಡಿಗೆಗೆ ಬೇಡಿಕೆ: ಇದೇ ಸಮಯಕ್ಕೆ ಆರೋಪಿ ಅಶ್ವತ್‌್ಥ ಆಟೋದೊಂದಿಗೆ ಅಲ್ಲಿಗೆ ಬಂದಿದ್ದಾನೆ. ತಲಾ 50 ರು. ಬಾಡಿಗೆ ಕೊಟ್ಟಲ್ಲಿ ರೈಲು ನಿಲ್ದಾಣಕ್ಕೆ ಬಿಡುವುದಾಗಿ ಹೇಳಿದ್ದಾನೆ. ಇದಕ್ಕೆ ಸಮ್ಮತಿಸಿದ ಅಮೋದ್‌ ಹಾಗೂ ಅಯೂಬ್‌ ಆಟೋ ಹತ್ತಿದ್ದಾರೆ. ಆಟೋ ಯಶವಂತಪುರ ಸೋಪ್‌ ಫ್ಯಾಕ್ಟರಿ ಬಳಿ ಬಂದಾಗ, ಆಟೋ ಚಾಲಕ ತಲಾ 1,500 ರು.ನಂತೆ ಇಬ್ಬರಿಗೆ 3 ಸಾವಿರ ರು. ಬಾಡಿಗೆ ನೀಡಬೇಕು ಎಂದು ಕೇಳಿದ್ದಾನೆ. ಈ ವೇಳೆ ಅಮೋದ್‌ ಸಹೋದರರು ಅಷ್ಟೊಂದು ಕೊಡಲು ಸಾಧ್ಯವಿಲ್ಲ. ಮೊದಲು ಹೇಳಿದಂತೆ ತಲಾ 50 ರು. ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅಶ್ವತ್‌್ಥ ಏಕಾಏಕಿ ಸಹೋದರರ ಮೇಲೆ ಹಲ್ಲೆಗೆ ಮಾಡಲು ಆರಂಭಿಸಿದ್ದಾನೆ.

Bengaluru Crime: ಯುವತಿಯನ್ನು ಉಸಿರುಗಟ್ಟಿಸಿ ಕೊಲೆ: ಬಾಯ್‌ಫ್ರೆಂಡ್‌ಗಾಗಿ ಪೊಲೀಸರ ಹುಡುಕಾಟ

ಅಮೋದ್‌ ಸಹೋದರರು ಆಟೋ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆನ್ನಟ್ಟಿಹಿಡಿದು ಕೈಯಿಂದಲೇ ಮನಬಂದಂತೆ ಹಲ್ಲೆ ಮಾಡಿದ್ದಾನೆ. ನಡು ರಸ್ತೆಯಲ್ಲಿ ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು, ಇಬ್ಬರು ಗಾಯಾಳುಗಳನ್ನು ಅದೇ ಆಟೋ ರಿಕ್ಷಾದಲ್ಲಿ ತಕ್ಷಣ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಗಂಭೀರವಾಗಿ ಏಟು ಬಿದ್ದು ನಿತ್ರಾಣಗೊಂಡಿದ್ದ ಅಮೋದ್‌ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಬಳಿಕ ಸುಬ್ರಮಣ್ಯನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಧಾವಿಸಿ ಆರೋಪಿ ಆಟೋ ಚಾಲಕ ಅಶ್ವತ್‌್ಥನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗೆ ಅಪರಾಧದ ಹಿನ್ನೆಲೆ

ಹಾಸನ ಜಿಲ್ಲೆ ಹೊಳೆನರಸೀಪುರ ಮೂಲದ ಆರೋಪಿ ಅಶ್ವತ್‌್ಥ ಅಪರಾಧದ ಹಿನ್ನೆಲೆ ಹೊಂದಿದ್ದಾನೆ. ನಗರದಲ್ಲಿ ಆಟೋ ಚಾಲಕನಾಗಿದ್ದು, ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಪ್ರಯಾಣಿಕರ ಸುಲಿಗೆ, ದರೋಡೆ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!