ರಾಜ್ಯ ಕಬಡ್ಡಿ ಅಸೋಸಿಯೇಷನ್ ರಂಪಾಟ ಇದೀಗ ಬೀದಿಗೆ ಬಿದ್ದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು [ಜ.22]: ರಾಜ್ಯ ಕಬಡ್ಡಿ ಅಸೋಸಿಯೇಷನ್‌ನಲ್ಲಿನ ಬೀದಿರಂಪಾಟ ಬಯಲಿಗೆ ಬಂದಿದ್ದು, ಖ್ಯಾತ ಅಂತಾರಾಷ್ಟ್ರೀಯ ಆಟಗಾರರು ಆಗಿರುವ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಸಂಘಟನಾ ಕಾರ್ಯದರ್ಶಿ ಬಿ.ಸಿ.ರಮೇಶ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಆಟಗಾರ್ತಿ ಉಷಾರಾಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದಾಗುತ್ತಿದ್ದಂತೆಯೇ, ಬಿ.ಸಿ.ರಮೇಶ್ ವಿರುದ್ಧ ಉಷಾರಾಣಿ ಏರುಧ್ವನಿಯಲ್ಲಿ ಕೂಗಾಡುತ್ತಿರುವ ವಿಡಿಯೋ ಬಹಿರಂಗಗೊಂಡಿದ್ದು, ರಾಜ್ಯ ಕಬಡ್ಡಿ ಸಂಸ್ಥೆಯೊಳಗಿನ ಶೀತಲ ಸಮರ ಬೀದಿಗೆ ಬಂದಂತಾಗಿದೆ.
ಉಷಾರಾಣಿ ಅವರು ಸಂಪಂಗಿರಾಮನಗರ ಠಾಣೆಯಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ವಿರುದ್ಧ ದೂರು ದಾಖಲಾಗಿದೆ. ದೂರಿನ ಮೇರೆಗೆ ಬಿ.ಸಿ.ರಮೇಶ್ ಸೇರಿದಂತೆ ನಾಲ್ವರನ್ನು ಪೊಲೀಸರು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
undefined
ಏನಿದು ಅವಾಂತರ?:
ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಗಳಿಗೆ ಕೆಲ ದಿನಗಳಿಂದ ತರಬೇತಿ ಶಿಬಿರ ನಡೆಯುತ್ತಿದ್ದು, ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಟಗಾರ್ತಿಯರಿಗೆ ಶುಭ ಕೋರಲೆಂದು ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸ್ ಇಲಾಖೆ ಸಿಬ್ಬಂದಿಯೂ ಆಗಿರುವ ಉಷಾರಾಣಿ, ಅಧಿಕಾರಿಗೆ ಆಟಗಾರ್ತಿಯರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಇದಕ್ಕೆ ಬಿ.ಸಿ.ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಇರುವಾಗ ಏಕಾಏಕಿ ಅಧಿಕಾರಿಯನ್ನು ಕರೆದೊಯ್ದು ಪರಿಚಯಿಸಿದ್ದು ಸರಿಯಲ್ಲ ಎಂದು ಉಷಾರಾಣಿಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಳಿಕ ಇದೇ ವಿಚಾರವಾಗಿ ಮಾತನಾಡಲು ಬಿ.ಸಿ.ರಮೇಶ್, ಉಷಾರಾಣಿ ಅವರನ್ನು ಮಂಗಳವಾರ ಸಂಜೆ ತಮ್ಮ ಕೊಠಡಿಗೆ ಕರೆಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಉಷಾರಾಣಿ ಮೇಲೆ ರಮೇಶ್ ಹಲ್ಲೆ ನಡೆಸಿದರು ಎಂದು ಉಷಾರಾಣಿ ಸಹೋದರ ನವೀನ್ ಮಾತನಾಡಿ ಆರೋಪಿಸಿದ್ದಾರೆ.
ಹಾಲಿನ ಪ್ಯಾಕೆಟ್ ಕದ್ದ ಪೊಲೀಸಪ್ಪ: ನೀವೇ ಹಿಂಗಾದ್ರೆ ಹೆಂಗಪ್ಪಾ..?..
ಈ ಸಂಬಂಧ ಮಂಗಳವಾರ ಸಂಜೆ ಸಂಪಂಗಿ ರಾಮನಗರ ಠಾಣೆಗೆ ಉಷಾರಾಣಿ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಸಿಸಿಟೀವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದುನಿಯಾ ವಿಜಯ್ ಕೈಗೆ ತಲ್ವಾರ್ ಕೊಟ್ಟವರು ಯಾರು? ಉತ್ತರ ಹೇಳಿದ ಕರಿಚಿರತೆ..
ಏಕವಚನದಲ್ಲಿ ಆವಾಜ್:
ಹೀಗೆ ಉಷಾರಾಣಿ ಹಾಗೂ ಬಿ.ಸಿ.ರಮೇಶ್ ನಡುವಿನ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ವಿಡಿಯೋವೊಂದು ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಬಿ.ಸಿ.ರಮೇಶ್ ಅವರನ್ನು ಉಷಾರಾಣಿ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತ ಕಬಡ್ಡಿ ತಂಡದಲ್ಲಿ ಆಡಿದ್ದಕ್ಕೆ 30 ಲಕ್ಷ ರು. ಕೊಡಬೇಕು ಅಂತಾ ಕೇಳಿದ್ದೆ, ನಾನು ಹಣ ಕೊಡಲಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದೀಯಾ, ನನ್ನ ನಡತೆ ಸರಿಯಿಲ್ಲ ಎಂದು ಇತರೆ ಆಟಗಾರರ ಮುಂದೆ ಹೇಳುತ್ತೀಯಾ. ನನ್ನ ವೃತ್ತಿ ಜೀವನವನ್ನು ಹಾಳು ಮಾಡುತ್ತಿದ್ದೀಯಾ, ನಿನಗೆ ಶೂ ಬಿಚ್ಚಿ ಹೊಡೆಯಬೇಕು ಎನ್ನುತ್ತಾ ಹೊಡೆಯಲು ಮುಂದಾಗುತ್ತಾರೆ. ಉಷಾರಾಣಿ ಅವರ ಈ ಯತ್ನವನ್ನು ಸ್ಥಳದಲ್ಲಿದ್ದ ಸಂಸ್ಥೆಯ ಇತರೆ ಸದಸ್ಯರು ತಡೆಯುತ್ತಾರೆ.
ಈ ವೇಳೆ ಮತ್ತಷ್ಟುಕೆರಳಿದ ಉಷಾರಾಣಿ, ನನಗೆ ಅನ್ಯಾಯವಾಗಿದೆ. ನಾನು ನ್ಯಾಯ ಕೇಳುತ್ತಿದ್ದೇನೆ. ಜಾತಿ ಆಧಾರದಲ್ಲಿ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆ ಮಾಡುತ್ತೀರಿ. ಪ್ರತಿಭೆ ಇರುವ ಆಟಗಾರ್ತಿಯರಿಗೆ ಅವಕಾಶ ನಿರಾಕರಿಸುತ್ತೀರಾ. ಇತರೆ ಆಟಗಾರ್ತಿಯರಿಗೆ ನನ್ನ ಜೊತೆ ಸೇರಬೇಡಿ ಎಂದು ಹೇಳುತ್ತೀರಿ. ನಿಮ್ಮಂತಹವರೆಲ್ಲಾ ಇದ್ದರೇ ಕಬಡ್ಡಿ ಕ್ರೀಡೆ ಉದ್ಧಾರವಾದ ಹಾಗೆ. ನೀನು ಹೆಣ್ಣು ಮಕ್ಕಳನ್ನ ಬೇರೆ ದೃಷ್ಟಿಯಿಂದಲೇ ನೋಡುತ್ತಿಯಾ. ಏನೋ ಮಾಡ್ತೀಯಾ ನೀನು. ಈ ರಾತ್ರಿಯಲ್ಲಿ ಯಾಕೋ ನನ್ನ ಒಬ್ಬಳನ್ನೇ ಕರೆಸಿದ್ದೀಯಾ, ನಿನಗೆ ಸಾಕ್ಷಿ ಬೇಕು ತಾನೆ, ಸ್ಟೇಷನ್ನಿಗೆ ನಡೀ ಅಲ್ಲೇ ಕೊಡ್ತೀನಿ ಎಂದು ಹೇಳಿದ್ದಾರೆ.
ಉಷಾ ನೀವು ಮಾತಾಡುತ್ತಿರುವುದು ತಪ್ಪು, ಈ ರೀತಿಯ ಆರೋಪ ಮಾಡಬೇಡಿ. ನಾನು ಯಾವುದೇ ಸಂದರ್ಭದಲ್ಲೂ ನಿಮ್ಮ ವಿರುದ್ಧ ಮಾತನಾಡಿಲ್ಲ. ನಾನು ನಿಮ್ಮ ಬಳಿಯೂ ಹಣವನ್ನು ಕೇಳಿಲ್ಲ. ಆದರೂ ನೀವು ನನ್ನ ಮೇಲೆ ಗುರುತರವಾದ ಆರೋಪ ಮಾಡುತ್ತಿದ್ದೀರಾ. ನಾನು ಯಾವತ್ತು ಜಾತಿ-ಭೇದ ಮಾಡಿಲ್ಲ. ಜಾತಿ ಆಧಾರದಲ್ಲಿ ಯಾರಿಗೂ ಆಯ್ಕೆ ನೀಡಿಲ್ಲ. ನನಗೆ ಎಲ್ಲರೂ ಒಂದೇ ಎಂದು ಬಿ.ಸಿ. ರಮೇಶ್ ಹೇಳುತ್ತಿರುವುದೂ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಆದರೆ, ಈ ದೃಶ್ಯಾವಳಿಯ ಸತ್ಯಾಸತ್ಯತೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.