ಕ್ಷುಲ್ಲಕ ಕಾರಣಕ್ಕೆ ಗುರುವಾರ ಮಾರಾಮಾರಿಯಾಗಿ ಇಬ್ಬರು ಬಲಿಯಾಗಿರುವ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರವೂ ಸ್ಮಶಾನ ಮೌನ ಆವರಿಸಿದೆ. ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸಲು ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಿ, ಹೈ ಅಲರ್ಟ್ ಘೋಷಿಸಿದ್ದಾರೆ.
ಕೊಪ್ಪಳ (ಆ.13): ಕ್ಷುಲ್ಲಕ ಕಾರಣಕ್ಕೆ ಗುರುವಾರ ಮಾರಾಮಾರಿಯಾಗಿ ಇಬ್ಬರು ಬಲಿಯಾಗಿರುವ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರವೂ ಸ್ಮಶಾನ ಮೌನ ಆವರಿಸಿದೆ. ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸಲು ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಿ, ಹೈ ಅಲರ್ಟ್ ಘೋಷಿಸಿದ್ದಾರೆ. ಒಟ್ಟಾರೆ ಇಡೀ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ.
ಗುಂಪು ಘರ್ಷಣೆಯಲ್ಲಿ ಯಂಕಪ್ಪ ಹಾಗೂ ಪಾಷಾವಲಿ ಎಂಬವರು ಮೃತಪಟ್ಟಿದ್ದು, ಅವರ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ. ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಸ್ಥಳ ಮಹಜರು ನಡೆಯುತ್ತಿದೆಯಾದರೂ ಗ್ರಾಮದ ಯಾರ ಮುಖದಲ್ಲಿಯೂ ನೆಮ್ಮದಿ ಕಾಣುತ್ತಿಲ್ಲ. ಈ ನಡುವೆ ಘಟನೆಯಲ್ಲಿ ಅಮಾಯಕರನ್ನು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಅನೇಕರು ಭಯದಿಂದ ಗ್ರಾಮವನ್ನೇ ತೊರೆದಿದ್ದಾರೆ.
ಕೊಪ್ಪಳದ ಕನಕಗಿರಿ ತಾಲೂಕಿನಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು
25 ಜನ ವಶಕ್ಕೆ: ಘಟನೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಯಂಕಪ್ಪ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ 30 ಜನರ ಮೇಲೆ ಹಾಗೂ ಬಾಷಾವಲಿ ಅವರ ಕುಟುಂಬದವರು ನೀಡಿದ ದೂರಿನ ಮೇಲೆ 28 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದುವರೆಗೂ 30ಕ್ಕೂ ಹೆಚ್ಚು ಆರೋಪಿಗಳನ್ನು ಮತ್ತು ಅನುಮಾನಾಸ್ಪದ 30 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಲು ಸಾಕ್ಷಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ.
ವಶಕ್ಕೆ ಪಡೆದಿರುವ ಬಹುತೇಕರು ದೂರಿನಲ್ಲಿ ದಾಖಲಾಗಿರುವವರೇ ಆಗಿದ್ದಾರೆ. ಕೆಲವರು ವಿಡಿಯೋದಲ್ಲಿ ದೊಂಬಿ ಹಿಡಿದುಕೊಂಡು ಓಡಾಡುತ್ತಿರುವುದು, ದಾಂದಲೆ ಮಾಡುತ್ತಿರುವ ಖಚಿತ ದಾಖಲೆಯನ್ನಾಧರಿಸಿ ವಿಚಾರಣೆ ಮಾಡುತ್ತಿದ್ದಾರೆ. ಪ್ರಮುಖರು ಪಾರು: ಘಟನೆಯಲ್ಲಿ ವಿಚಿದ್ರಕಾರಿ ಶಕ್ತಿಗಳೇ ಪಾರಾಗಿವೆ. ಎರಡು ಗುಂಪುಗಳಲ್ಲಿ ಅಮಾಯಕರನ್ನೇ ವಿಚಾರಣೆ ಮಾಡಲಾಗುತ್ತದೆ ಮತ್ತು ಪ್ರಮುಖ ಆರೋಪಿಗಳನ್ನು ಎಫ್‌ಐಆರ್‌ನಿಂದ ಹೊರಗಿಡಲಾಗುತ್ತಿದೆ. ಹೀಗಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಹುಬ್ಬಳ್ಳಿಯಲ್ಲಿ ಚಿಕಿತ್ಸೆ: ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ರಾಮಾಂಜನೇಯ ಸಾವು- ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈತನ ಕುಟುಂಬದವರು ದೂರು ನೀಡಲು ಮುಂದಾಗಿದ್ದಾರೆ. ಇದರಿಂದ ಮತ್ತೊಂದು ದೂರು ದಾಖಲಾಗುವ ಸಾಧ್ಯತೆ ಇದೆ. ಇಡೀ ಘಟನೆಗೆ ಸಾಕ್ಷಿಯಂತೆ ರಾಮಾಂಜನೇಯ ಇದ್ದು, ಈತನಿಂದ ಸತ್ಯ ಹೊರಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಬಿಗಿ ಭದ್ರತೆ: ಗ್ರಾಮದಲ್ಲಿ ಈಗ ಪೊಲೀಸ್ ಇಲಾಖೆ ಭಾರಿ ಬಿಗಿ ಭದ್ರತೆ ಹಾಕಿದೆ. ಪ್ರತಿಬೀದಿಗೂ ವಿಶೇಷ ಪೊಲೀಸ್ ಬಂದೋಬಸ್‌್ತ ಮಾಡಲಾಗಿದೆ. ಅಲ್ಲದೆ ಗ್ರಾಮದಿಂದ ಆಚೆ ಹೋಗಲು ಮತ್ತು ಗ್ರಾಮದೊಳಕ್ಕೆ ಯಾರೆ ಬರುವ ಮುನ್ನ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಹತ್ತು ದಿನಗಳ ಕಾಲ ನಿಷೇಧಾಜ್ಞೆಯನ್ನು ಹೇರಲಾಗಿದೆ.
ಚುರುಕುಗೊಂಡ ತನಿಖೆ: ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ನಡೆಸಲಾಗುತ್ತಿದೆ. ಇಡೀ ಪ್ರಕರಣಕ್ಕೆ ಕಾರಣವೇನು ಎನ್ನುವುದನ್ನು ಪ್ರತ್ಯೇಕವಾಗಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಿಂತ ಮಿಗಿಲಾಗಿ ಅಂತರ್ಜಾತಿ ವಿವಾಹದಿಂದಾಗಿಯೇ ಗ್ರಾಮದಲ್ಲಿ ದ್ವೇಷ ಬೆಳೆಯಲು ಕಾರಣವಾಗಿದೆ ಎನ್ನುವ ಮಾಹಿತಿ ಇರುವುದರಿಂದ ಗ್ರಾಮದಲ್ಲಿ ನಾಲ್ಕಾರು ವರ್ಷಗಳಿಂದ ಆಗಿರುವ ಅಂತರ್ಜಾತಿ ವಿವಾಹದ ಕುರಿತು ಸಹ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.
ರಾಷ್ಟ್ರಧ್ವಜ ಮಾರಾಟಕ್ಕೂ ಜಿಎಸ್‌ಟಿ; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಆಕ್ರೋಶ
ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದ್ದು, ಬಳಿಕ ಸಮಗ್ರ ವಿವರಣೆ ನೀಡಲಾಗುವುದು. ಸದ್ಯಕ್ಕಂತೂ ಗ್ರಾಮದಲ್ಲಿ ಬಿಗಿ ಬಂದೋಬಸ್‌್ತ ಏರ್ಪಡಿಸಲಾಗಿದೆ.
-ಅರುಣಾಂಗ್ಷು ಗಿರಿ, ಎಸ್ಪಿ ಕೊಪ್ಪಳ