ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಕಟ್ಟುವಂತೆ ಪೊಲೀಸ್ ಠಾಣೆಯ ಮುಂದೆ ಇರಿಸಿಕೊಡಿದ್ದ ಲಾರಿ ಚಾಲಕ, 8 ದಿನಗಳಿಂದ ನಾಪತ್ತೆ ಆಗಿದ್ದಾನೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.13): ಜನರು ಕಾನೂನು ಉಲ್ಲಂಘಿಸಿದ್ರೆ ಪೊಲೀಸರು ದಂಡ ವಿಧಿಸೋದು ಸಹಜ. ಆದರೆ ಕಾನೂನು ಉಲ್ಲಂಘಿಸಿದ ಲಾರಿ ಚಾಲಕನನೋರ್ವ ಪೊಲೀಸರು ವಿಧಿಸಿದ ದಂಡ ಕಟ್ಟಲಾಗದೇ ಲಾರಿ ಬಿಟ್ಟು ಹೋದವನು ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದಾನೆ. ಹೀಗಾಗಿ, ಲಾರಿ ಚಾಲಕನಾಗಿ ದುಡಿಯುತ್ತಿದ್ದ ಮಗನನ್ನೇ ನಂಬಿಕೊಂಡಿದ್ದ ಕುಟುಂಬ ಕಂಗಾಲಾಗಿ ಆರಕ್ಷಕರ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರನ್ನು ನೀಡಿದೆ.
ನೋಡಿ ಹೀಗೆ ಮಗನನ್ನು ಕಳೆದುಕೊಂಡು ಕಂಗಾಲಾಗಿರೊ ಪೋಷಕರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪೊಲೀಸರ ವಿರುದ್ಧ ಗ್ರಾಮಸ್ತರ ಹೋರಾಟ. ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು ಚಿತ್ರದುರ್ಗದಲ್ಲಿ. ಮೇ 3 ರಂದು ಸಂಜೆ ಸಿಮೆಂಟ್ ತುಂಬಿಕೊಂಡು ಹೊಸದುರ್ಗಕ್ಕೆ ತೆರಳುತಿದ್ದ ಲಾರಿ ಚಾಲಕನೋರ್ವ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಹೋಗುತಿದ್ದನು. ಆಗ ಅಲ್ಲಿನ ಸ್ಥಳಿಯರು ಇದನ್ನು ಹೊಳಲ್ಕೆರೆ ಠಾಣೆ ಪೊಲೀಸರ ಗಮನಕ್ಕೆ ತಂದರು. ಆಗ ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಬಳಿ ಲಾರಿ ತಡೆದು ಚಾಲಕನಿಗೆ ಪೊಲೀಸರು ದಂಡ ವಿಧಿಸಿದ್ದರು.
ಕೊಪ್ಪಳದ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ದುರ್ಮರಣ
ಪೊಲೀಸ್ ಠಾಣೆ ಆವರಣದಲ್ಲಿ ರಾತ್ರಿ ಕಳೆದು ಬೆಳಗ್ಗೆ ನಾಪತ್ತೆ: ಈ ವೇಳೆ ದಂಡವನ್ನು ಕಟ್ಟಲಾಗದ ಚಾಲಕ ಬಸವಂತಪ್ಪ, ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದನು. ಆಗ ಲಾರಿ ಮಾಲೀಕರು ಬಂದು ಹಣ ಕಟ್ತಾರೆಂದು ಠಾಣೆ ಆವರಣದಲ್ಲೇ ರಾತ್ರಿ ಕಳೆದಿದ್ದನು. ಮರುದಿನ ಬೆಳಿಗ್ಗೆ 8 ಗಂಟೆಗೆ ಠಾಣೆಯೊಳಗೆ ಹೋಗಿದ್ದ ಬಸವಂತಪ್ಪ ಹೊರಗೆ ಬಂದು, ತಿಂಡಿ ಮಾಡಲೆಂದು ಹೊರಗೆ ಹೋಗಿದ್ದು ವಾಪಸ್ ಬಂದೇ ಇಲ್ಲ. ಜೊತೆಗೆ, ಪೊಲೀಸ್ ಠಾಣೆ ಬಳಿಯಿಂದ ಪರಾರಿಯಾದ ಲಾರಿ ಚಾಲಕ ಬಸವಂತಪ್ಪ ಹಲವು ದಿನಗಳಿಂದ ಮನೆಗೂ ಕೂಡ ಹೋಗಿಲ್ಲ. ಇನ್ನು ಮನೆಗೆ ಬಾರದ ಮಗನ ವಿಚಾರದಲ್ಲಿ ಆತಂಕಗೊಂಡ ಕುಟುಂಬಸ್ಥರು ಸತತ 8 ದಿನಗಳು ಆತನ ಪತ್ತೆಗಾಗಿ ಎಲ್ಲಾ ಕಡೆ ಶೋಧ ನಡೆಸಿದ್ದಾರೆ. ಕೊನೆಗೆ ಪೊಲೀಸರ ವಿರುದ್ಧವೇ ಅನುಮಾನ ವ್ಯಕ್ತಪಡಿಸ್ತಿದ್ದು, ಹಿರಿಯ ಅಧಿಕಾರಿಗಳಿಗೆ ಕೆಳ ಹಂತದ ಪೊಲೀಸರ ವಿರುದ್ಧಚೇ ದೂರು ದಾಖಲಿಸಿದ್ದಾರೆ. ಬಸವಂತಪ್ಪ ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದಾರೆಂದು ಕೇಸ್ ದಾಖಲಿಸಿ ಹುಡುಕಿಕೊಡುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ.
ಚಾಲಕನ ಪರಾರಿಗೂ ನಮಗೂ ಸಂಬಂಧವಿಲ್ಲ: ನಾಪತ್ತೆಯಾಗಿರುವ ಲಾರಿ ಚಾಲಕ ಬಸವಂತಪ್ಪ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದವನಾಗಿದ್ದಾನೆ. ಆತನ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಕೇಸು ದಾಖಲಾಗಿದೆ. ಈ ಬಗ್ಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರನ್ನು ಕೇಳಿದರೆ, ಇಂತಹ ಕೇಸುಗಳಲ್ಲಿ ಪೊಲೀಸರು ಟಾರ್ಚರ್ ಕೊಡುವ ಪ್ರಶ್ನೆ ಬರಲ್ಲ. ಸ್ಥಳದಲ್ಲೇ ದಂಡ ಕಟ್ಟಿದರೆ ಅವರನ್ನು ಅಲ್ಲಿಯೇ ಬಿಡಲಾಗುತ್ತದೆ. ಆದರೆ, ಚಾಲಕನು ತಮ್ಮ ಮಾಲಿಕರ ಆಗಮನಕ್ಕಾಗಿ ಠಾಣೆ ಬಳಿಯೆ ಉಳಿದಿದ್ದನು. ಸತತ ಎರಡು ಬಾರಿ ಪೊಲೀಸ್ ಠಾಣೆಯೊಳಗೆ ಬಂದಿದ್ದನು. ಆತನ ಚಲನವಲನ ಸಹ ಪೊಲೀಸ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ನಮಗೂ ಈ ಕೇಸಿಗೂ ಸಂಬಂಧವಿಲ್ಲ ಎಂದು ಕುಟುಂಬಸ್ಥರ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಉಚಿತ ಪ್ರಯಾಣಕ್ಕಾಗಿ ಪಶ್ಚಿಮ ಬಂಗಾಳ ಮಹಿಳೆ ಹಿಂಗಾ ಮಾಡೋದು!
ಆತಂಕದಲ್ಲೇ ದಿನ ಕಳೆಯುತ್ತಿರುವ ಕುಟುಂಬ: ಒಟ್ಟಾರೆ ಕಾನೂನು ಉಲ್ಲಂಘಿಸಿದ ಚಾಲಕನಿಗೆ ಪೊಲೀಸರು ದಂಡ ವಿಧಿಸಿದ್ದಕ್ಕೆ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆಯೊ ಅಥವಾ ಆತನ ವಯುಕ್ತಿಕ ಸಮಸ್ಯೆಯಿಂದ ನಾಪತ್ತೆಯಾಗಿದ್ದಾನೋ ಗೊತ್ತಿಲ್ಲ. ಆದರೆ, ಅವರ ಕುಟುಂಬಸ್ಥರು ಮಾತ್ರ ಕಂಗಾಲಾಗಿದ್ದಾರೆ. ಹೊಳಲ್ಕೆರೆ ಠಾಣೆ ಪೋಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರು ಸೂಕ್ತ ತನಿಖೆ ನಡೆಸಿ ಬಸವಂತಪ್ಪನನ್ನು ಪತ್ತೆಹಚ್ಚಿದರೆ ಪ್ರಕರಣದ ಅಸಲಿ ಸತ್ಯ ಬಯಲಾಗಲಿದೆ.