ಕಳ್ಳತನಕ್ಕೆ ತಿಂಗಳಿಂದ ನಡೆದಿತ್ತು ತಯಾರಿ| ಯೂಟ್ಯೂಬ್ ಮೂಲಕ ಸುಲಿಗೆ ಮಾಡುವುದು ಹೇಗೆ, ಅದಕ್ಕಾಗಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು, ಸ್ಥಳದ ಪರಿಸ್ಥಿತಿ ನಿಭಾಯಿಸುವುದು ಹೇಗೆ, ಎಸ್ಕೇಪ್ ಆಗುವುದು ಹೇಗೆ ಎಂಬುದನ್ನು ನೋಡಿಕೊಂಡ ಖದೀಮರು|
ಚಿಕ್ಕಮಗಳೂರು(ಮಾ.01): ನಗರದಲ್ಲಿ ಶನಿವಾರ ಹಾಡಹಗಲೇ ಮನೆಗೆ ನುಗ್ಗಿ ದರೋಡೆ ನಡೆಸಿ, ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿಗಳಿಬ್ಬರು ಯೂಟ್ಯೂಬ್ ನೋಡಿ ದರೋಡೆಗೆ ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳಾದ ಸಚಿನ್ ಹಾಗೂ ಮೋಹನ್ ಇಬ್ಬರು ಸೇರಿ, ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಸಿಡಿಎ ಮಾಜಿ ಅಧ್ಯಕ್ಷ ಬಿ.ಎಸ್.ಚಂದ್ರೇಗೌಡ ಎಂಬುವರ ಮನೆಗೆ ನುಗ್ಗಿದ್ದರು. ಈ ವೇಳೆ ಮನೆಯಲ್ಲಿದ್ದ ಅವರ ಪತ್ನಿಯ ಕಟ್ಟಿ ಹಾಕಿ 75 ಗ್ರಾಂ ಚಿನ್ನಾಭರಣ ಹಾಗೂ 50,000 ನಗದು ದೋಚಿ ಪರಾರಿ ಆಗುವ ಹಂತದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು.
ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಅಕ್ಷಯ್, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಆರೋಪಿ ಸಚಿನ್ ಇದರಿಂದ ಹೊರಬರಲು ಸುಲಿಗೆಗೆ ಪ್ಲಾನ್ ಮಾಡಿದ್ದ. ಇವನ ಈ ದುಷ್ಕೃತ್ಯಕ್ಕೆ ಸ್ನೇಹಿತ ಮೋಹನ್ ಕೈ ಜೋಡಿಸಿದ್ದ. ಇಬ್ಬರು ಸೇರಿ ಕಳೆದ ಒಂದು ತಿಂಗಳಿಂದ ತಯಾರಿ ನಡೆಸಿದ್ದಾರೆ. ಯೂಟ್ಯೂಬ್ ಮೂಲಕ ಸುಲಿಗೆ ಮಾಡುವುದು ಹೇಗೆ, ಅದಕ್ಕಾಗಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು, ಸ್ಥಳದ ಪರಿಸ್ಥಿತಿ ನಿಭಾಯಿಸುವುದು ಹೇಗೆ, ಎಸ್ಕೇಪ್ ಆಗುವುದು ಹೇಗೆ ಎಂಬುದನ್ನು ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಸಾಲ ವಾಪಸ್ ಕೊಡದ್ದಕ್ಕೆ ಇರಿದು ಮಹಿಳೆಯ ಹತ್ಯೆ
ಇದಕ್ಕಾಗಿ ಇಬ್ಬರು ಕಪ್ಪು ಬಣ್ಣದ ಹೆಲ್ಮೆಟ್, ಜರ್ಕಿನ್ ಖರೀದಿಸಿದ್ದಾರೆ. ಕೃತ್ಯಕ್ಕೆ ಬ್ಲಾಕ್ ಬೈಕ್ ಬಳಸಿಕೊಂಡಿದ್ದಾರೆ. ಮನೆಯ ಬಾಗಿಲು ಮುರಿಯಲು ಕಟ್ಟರ್, ಮನೆಯಲ್ಲಿದ್ದವರು ಕೂಗಿಕೊಂಡರೆ ಅವರ ಬಾಯಿ ಮುಚ್ಚಲು ವೇಸ್ಟ್ ಬಟ್ಟೆ, ಚಾಕು ತಂದಿದ್ದಾರೆ. ಕೃತ್ಯ ನಡೆಸುವ ಸಂದರ್ಭದಲ್ಲಿ ಮೊಬೈಲ್ ಬೇರೆಯವರ ಕೈಗೆ ಸಿಕ್ಕರೆ ತಾವು ಸಿಕ್ಕಿ ಹಾಕಿಕೊಳ್ಳಬಹುದೆಂಬ ಕಾರಣಕ್ಕಾಗಿ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು ಎಂದು ವಿವರಿಸಿದ್ದಾರೆ.
ಇದೇ ಮನೆ ಆಯ್ಕೆ ಯಾಕೆ?:
ಚಂದ್ರೇಗೌಡ ಅವರು ಇತ್ತೀಚೆಗೆ ತಮಗೆ ಸೇರಿರುವ ಆಸ್ತಿಯನ್ನು ಮಾರಾಟ ಮಾಡಿದ್ದರು. ಇದರಿಂದ ಅವರಿಗೆ ದುಡ್ಡು ಬಂದಿದೆ, ಅವರ ಮನೆಯಲ್ಲಿ ಕಳವು ಮಾಡಿದರೆ ಹೆಚ್ಚು ಹಣ ಸಿಗುತ್ತದೆ ಎಂದು ಅವರ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.