ಬೆಂಗಳೂರು(ಮಾ.01): ಹಣಕಾಸಿನ ವಿಚಾರಕ್ಕೆ ಜಗಳ ನಡೆದು ಪರಿಚಯಸ್ಥನೊಬ್ಬ ಪಶ್ಚಿಮ ಬಂಗಾಳ ಮೂಲದ ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಅಲೀಂ ಬೀಬಿ(30) ಹತ್ಯೆಯಾದವಳು. ರಫೀಕ್‌ (35) ಹತ್ಯೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿ.

ಐದು ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಅಲೀಂ ಬೀಬಿ ಕುಂದಲಹಳ್ಳಿಯಲ್ಲಿ ಕುಟುಂಬ ಸಮೇತ ನೆಲೆಸಿದ್ದು, ಮನೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಈಕೆಯ ಪತಿ ಕಬ್ಬಿಣದ ಕೆಲಸ ಮಾಡುತ್ತಿದ್ದಾನೆ. ಈಕೆಯ ನೆರೆ ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿ ರಫೀಕ್‌ ಪಶ್ಚಿಮ ಬಂಗಾಳದಲ್ಲಿರುವ ತನ್ನ ಊರಿನಿಂದ ಸೀರೆಯನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಒಂದೇ ಊರಿನವರಾಗಿದ್ದ ಹಿನ್ನೆಲೆಯಲ್ಲಿ ಆರೋಪಿಗೆ ಅಲೀಂ ಬೀಬಿಯ ಪರಿಚಯವಿತ್ತು.

ದೊಡ್ಡವರ ಅಫೇರ್‌ಗೆ ಬಲಿಯಾಯ್ತು ಅಪ್ರಾಪ್ತರ ಪ್ರೇಮ ಕತೆ...ಭೀಮಾ ನದಿಯಲ್ಲಿ ಬಾಲಕನ ಹೆಣ!

ಇತ್ತೀಚೆಗೆ ರಫೀಕ್‌ನಿಂದ ಅಲೀಂ 10 ಸಾವಿರ ಸಾಲ ಪಡೆದಿದ್ದಳು. ಸಾಲ ಹಿಂತಿರುಗಿಸುವ ವಿಚಾರವಾಗಿ ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆದು ರಫೀಕ್‌ ಮೇಲೆ ಮಹಿಳೆಯೇ ಹಲ್ಲೆ ನಡೆಸಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಭಾನುವಾರ ಬೆಳಗ್ಗೆ 10ಕ್ಕೆ ಸುಮಾರಿಗೆ ಮನೆ ಕೆಲಸಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಂದು ಪೊಲೀಸರು ಹೇಳಿದ್ದಾರೆ.